ಬೀದಿ ನಾಯಿಯನ್ನು ಕ್ರೂರವಾಗಿ ಥಳಿಸಿ ಬೈಕ್ ಗೆ ಕಟ್ಟಿ ಎಳೆದೊಯ್ದ ಯುವಕರು!

ಆಗ್ರಾ: ಬೀದಿ ನಾಯಿಯನ್ನು ಕ್ರೂರವಾಗಿ ಥಳಿಸಿ ಬೈಕ್ ಗೆ ಕಟ್ಟಿ ಅಮಾನವೀಯವಾಗಿ ರಸ್ತೆಯಲ್ಲಿ ಎಳೆದೊಯ್ದ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.
ಗುರುವಾರ ಈ ಘಟನೆ ನಡೆದಿದ್ದು, ಇಬ್ಬರು ಯುವಕರು ಬೀದಿನಾಯಿಯನ್ನು ಕ್ರೂರವಾಗಿ ಥಳಿಸಿ ನಂತರ ಬೈಕ್ ಗೆ ಕಟ್ಟಿ ಎಳೆದೊಯ್ದಿದ್ದಾರೆ. ಆರೋಪಿಗಳನ್ನು ಪವನ್ ಲಾವಾನಿಯಾ ಮತ್ತು ರೂಪೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಒಬ್ಬ ಯುವಕ ನಾಯಿಯ ಕಾಲಿಗೆ ಹಗ್ಗ ಕಟ್ಟಿದ್ದು ಇನ್ನೋರ್ವ ಯುವಕ ಬೈಕ್ ಗೆ ಕಟ್ಟಿ ಹಾಕಿದ್ದ ನಾಯಿಯನ್ನು25-30 ಮೀಟರ್ ಎಳೆದೊಯ್ಯುತ್ತಾ ಬೈಕ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಯಿಗೆ ಚಿತ್ರ ಹಿಂಸೆ ನೀಡಿದ ಬಳಿಕ ರಸ್ತೆಯಲ್ಲಿ ಬಿಟ್ಟು ಯುವಕರು ಸ್ಥಳದಿಂದ ಹೊರಟು ಹೋಗಿದ್ದಾರೆ. ಮಾಹಿತಿಗಳ ಪ್ರಕಾರ ಯುವಕರಿಗೆ ಬೀದಿ ನಾಯಿ ಕಚ್ಚಿದ್ದು, ಇದರಿಂದ ಕೋಪಗೊಂಡು ಯುವಕರು ನಾಯಿಗೆ ಬುದ್ಧಿ ಕಲಿಸಲು ಮನುವಾದೀಯ ಕೃತ್ಯ ಎಸಗಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ಇಬ್ಬರು ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಯುವಕರಿಂದ ತೀವ್ರವಾಗಿ ಹಲ್ಲೆಗೊಳಗಾಗಿರುವ ನಾಯಿ ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ.