ಪ್ರೀತಿಸಿದ್ದಕ್ಕಾಗಿ  ದಲಿತ ಯುವಕನ ತಲೆಬೋಳಿಸಿ, ಚಪ್ಪಲಿಹಾರ ಹಾಕಿ ವಿಕೃತಿ ಮೆರೆದ ಯುವತಿಯ ತಂದೆ - Mahanayaka

ಪ್ರೀತಿಸಿದ್ದಕ್ಕಾಗಿ  ದಲಿತ ಯುವಕನ ತಲೆಬೋಳಿಸಿ, ಚಪ್ಪಲಿಹಾರ ಹಾಕಿ ವಿಕೃತಿ ಮೆರೆದ ಯುವತಿಯ ತಂದೆ

stop caste system
01/06/2021

ಮಧ್ಯಪ್ರದೇಶ: ದಲಿತ ಯುವಕ ಹಾಗೂ ಬೇರೆ ಜಾತಿಯ ಯುವತಿಯೋರ್ವಳು ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರ ತಿಳಿದ ಪಾಲಕರು ದಲಿತ ಯುವಕ ಹಾಗೂ ಆತನ ಸ್ನೇಹಿತನನ್ನು ಮನೆಗೆ ಕರೆಸಿ, ಮನ ಬಂದಂತೆ ಥಳಿಸಿ, ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ದಾರುಣ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಚಾರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ದಮನ್ ಖಮರಿಯಾ ಗ್ರಾಮದಲ್ಲಿ ನಡೆದಿದೆ.

ಮೇ 30ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಂತ್ರಸ್ತ ದಲಿತ ಯುವಕ 20 ವರ್ಷ ವಯಸ್ಸಿನ ರಾಜ್ ಕುಮಾರ್ ಮೆಹ್ರಾ  ಹಾಗೂ ಇದೇ ಗ್ರಾಮದ ಬೇರೆ ಜಾತಿಯ ಯುವತಿಯೋರ್ವಳ ನಡುವೆ ಪ್ರೀತಿ ಬೆಳೆದಿತ್ತು.  ಈ ವಿಚಾರ ಪಾಲಕರಿಗೆ ತಿಳಿದು ಬಂದಿದ್ದು, ನೀವಿಬ್ಬರು ಪ್ರೀತಿಸ ಬಾರದು ಎಂದು ಧಮ್ಕಿ ಹಾಕಿದ್ದರು ಎಂದು ಹೇಳಲಾಗಿದೆ.

ಇದಾದ ಬಳಿಕ ಯುವತಿಯು, ತನಗೆ ಮೊಬೈಲ್ ಬೇಕು ಎಂದು ಯುವಕನ ಬಳಿಯಲ್ಲಿ ಕೇಳಿದ್ದಾಳೆ. ಆಕೆ ಕೇಳಿದ ತಕ್ಷಣವೇ ದಲಿತ ಯುವಕ ಆಕೆಗೆ ಮೊಬೈಲ್ ಕೊಡಿಸಿದ್ದಾನೆ. ಇದಾದ ಬಳಿಕ ಇಬ್ಬರು ಕೂಡ ಫೋನ್ ನಲ್ಲಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ, ಈ ವಿಚಾರ ಯುವತಿಯ ತಂದೆಗೆ ಗೊತ್ತಾಗಿದ್ದು, ತನ್ನ ಮಗಳನ್ನ ಪ್ರೀತಿಸುವಷ್ಟು ಧೈರ್ಯವನ್ನು ದಲಿತ ಯುವಕ ತೋರಿಸಿದ್ದೇ ತಪ್ಪು ಎಂದು, ಯುವಕ ಹಾಗೂ ಆತನ ಸ್ನೇಹಿತನನ್ನು ಉಪಾಯವಾಗಿ ಮನೆಗೆ ಕರೆಸಿ ಥಳಿಸಿ, ಅರ್ಧ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದಾನೆ.

ವಿಕೃತಿಯ ಬಳಿಕ ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ, ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಯುವತಿಯ ತಂದೆ ಬೆದರಿಕೆ ಹಾಕಿದ್ದ. ಆದರೆ ವಿಡಿಯೋಗಳ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಯುವತಿಯ ತಂದೆಯ ವಿರುದ್ಧ ಸಂತ್ರಸ್ತ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಇತ್ತೀಚಿನ ಸುದ್ದಿ