ಇಬ್ಬರು ಪತ್ನಿಯರಿರುವವರಿಗೆ 2 ಲಕ್ಷ ನೀಡಲಾಗುವುದು: ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ಕಿಡಿ - Mahanayaka

ಇಬ್ಬರು ಪತ್ನಿಯರಿರುವವರಿಗೆ 2 ಲಕ್ಷ ನೀಡಲಾಗುವುದು: ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ಕಿಡಿ

kantilal bhuria
10/05/2024

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆ ಉತ್ತರ ಭಾರತದಲ್ಲಿ ರಾಜಕೀಯ ವಾಕ್ಸಮರಗಳು ಜೋರಾಗಿ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌ ನಾಯಕರೊಬ್ಬರು ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕೇಂದ್ರದ ಮಾಜಿ ಸಚಿವ ಮತ್ತು ಮಧ್ಯಪ್ರದೇಶದ ರತ್ಲಾಮ್‌ ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಕಾಂತಿಲಾಲ್ ಭೂರಿಯಾ  ರಾಲಿಯೊಂದರಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ತನ್ನ ‘ನ್ಯಾಯ ಪತ್ರ’ (ಪ್ರಣಾಳಿಕೆ ಪತ್ರ) ದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಘೋಷಿಸಿದೆ. ಇದರಡಿ ನಮ್ಮ ಸರಕಾರ ರಚನೆಯಾದರೆ ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂಪಾಯಿ ನೀಡುತ್ತೇವೆ. ಒಂದಷ್ಟೇ ಅಲ್ಲ, ಒಂದು ವೇಳೆ ಇಬ್ಬರು ಪತ್ನಿಯರಿದ್ದರೆ ಇಬ್ಬರಿಗೂ ತಲಾ ಒಂದು ಲಕ್ಷದಂತೆ 2 ಲಕ್ಷ ರೂಪಾಯಿ ನೀಡುವುದಾಗಿ  ಹೇಳಿಕೆ ನೀಡಿದ್ದಾರೆ.

ಕಾಂತಿಲಾಲ್ ಭೂರಿಯಾ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಈ ಹೇಳಿಕೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದಲ್ಲಿ ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವರಾಗಿದ್ದ ಕಾಂತಿಲಾಲ್ ಭುರಿಯಾ ವಿರುದ್ಧ ಚುನಾವಣಾ ಆಯೋಗದಿಂದ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.

ನಮ್ಮ ಪ್ರಣಾಳಿಕೆಯಲ್ಲಿ ಪ್ರತಿ ಮಹಿಳೆಗೆ 1 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಲಾಗಿದೆ. ಇದನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಒಂದು ವೇಳೆ ವ್ಯಕ್ತಿಯೊಬ್ಬ ಇಬ್ಬರು ಪತ್ನಿಯರನ್ನು ಹೊಂದಿದ್ದರೆ ಇಬ್ಬರೂ ಈ ಯೋಜನೆಗೆ ಒಳಪಡುತ್ತಾರೆ ಎಂದು  ಅವರು ತಿಳಿಸಿದ್ದಾರೆ. ಇದರಿಂದಾಗಿ ವಿಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಬ್ಬರು ಪತ್ನಿಯರಿರುವವರಿಗೆ 2 ಲಕ್ಷ ನೀಡಲಾಗುವುದು’ ಎಂಬ ಭುರಿಯಾ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿಯ ರಾಜ್ಯ ಮಾಧ್ಯಮ ಉಸ್ತುವಾರಿ ಆಶಿಶ್ ಅಗರ್ವಾಲ್ ಅವರು ಜಿತು ಪಟ್ವಾರಿ, ದಿಗ್ವಿಜಯ್ ಸಿಂಗ್ ಮತ್ತು ಕಾಂತಿಲಾಲ್ ಭೂರಿಯಾ ಅವರು ಬಹುಸಂಖ್ಯಾತ ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.


Provided by

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ