ಕರಾಳ ಪಾತಕ ಲೋಕವೂ ನಿರ್ಲಿಪ್ತ ಸಮಾಜವೂ - Mahanayaka

ಕರಾಳ ಪಾತಕ ಲೋಕವೂ ನಿರ್ಲಿಪ್ತ ಸಮಾಜವೂ

na divakara
19/05/2024

ನಿತ್ಯ ಸಂಭವಿಸುತ್ತಿರುವ ಪಾತಕ ಕೃತ್ಯಗಳನ್ನು ಸರ್ಕಾರ–ಸಮಾಜ ತೆರೆದ ಕಣ್ಣಿನಿಂದ ನೋಡಬೇಕಿದೆ


Provided by
  • ನಾ ದಿವಾಕರ

ದೇಶದ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಕಾನೂನು ನ್ಯಾಯ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣದ ಧ್ವನಿ ಗಟ್ಟಿಯಾಗಿ ಕೇಳುತ್ತಲೇ ಇದ್ದರೂ, ದಿನದಿಂದ ದಿನಕ್ಕೆ ಮಹಿಳೆಯೇ ಏಕೆ ಪಾತಕ ಕೃತ್ಯಗಳಿಗೆ ಬಲಿಯಾಗುತ್ತಿದ್ದಾಳೆ ? ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳದೆ ಹೋದರೆ ಬಹುಶಃ ನಮ್ಮ ಪ್ರಜ್ಞೆ ಸತ್ತಿದೆ ಎಂದೇ ಹೇಳಬೇಕು. ನಿರ್ಭಯ ಪ್ರಕರಣದ ನಂತರ ವರ್ಮಾ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಠಿಣ ಕಾನೂನುಗಳು ಭಾರತದ ಮಹಿಳಾ ಸಮೂಹದಲ್ಲಿ ಒಂದು ಆಶಾಭಾವನೆಯನ್ನು ಮೂಡಿಸಿದ್ದವು. ಎಂತಹುದೇ ಕಠಿಣ ಕಾನೂನುಗಳಿದ್ದರೂ ಪಾತಕ ಲೋಕವೇನೂ ಸರಿದಾರಿಗೆ ಬರುವುದಿಲ್ಲ ಎಂಬ ವಾಸ್ತವದ ಅರಿವಿದ್ದರೂ ಸಹ ದೇಶದ ನಾಗರಿಕರಲ್ಲಿ, ಮಹಿಳೆಯರ ನಡುವೆ ಒಂದು ಭರವಸೆಯ ಕಿಡಿಯನ್ನಾದರೂ ಸೃಷ್ಟಿಸುತ್ತದೆ ಎಂಬ ಭಾವನೆ ಮೂಡಿತ್ತು

ಆದರೆ ಕಾನೂನುಗಳಾಗಲೀ, ಆಡಳಿತಾತ್ಮಕ ಉಪಕ್ರಮಗಳಾಗಲೀ ಪಿತೃಪ್ರಧಾನ ಸಮಾಜದಲ್ಲಿ ಬೇರೂರಿರುವ ಪುರುಷಾಧಿಪತ್ಯದ ಅಹಮಿಕೆ ಮತ್ತು ಯಜಮಾನಿಕೆಯನ್ನು ಭೇದಿಸುವುದಿಲ್ಲ ಎಂಬ ವಾಸ್ತವ ದಿನದಿಂದ ದಿನಕ್ಕೆ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಮತ್ತೊಂದೆಡೆ ಮಹಿಳಾ ದೌರ್ಜನ್ಯಗಳು ಅವ್ಯಾಹತವಾಗಿ, ನಿರ್ಭಿಡೆಯಿಂದ ನಡೆಯುತ್ತಿದ್ದು ಭ್ರೂಣಾವಸ್ಥೆಯಿಂದ ವೃದ್ಧಾವಸ್ಥೆಯವರೆಗೆ ಮಹಿಳೆಯ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಭಂಗಗೊಳಿಸಲಾಗುತ್ತಿದೆ. ಸರ್ಕಾರಗಳ ಹತ್ತಾರು ಮಹಿಳಾ ಸಬಲೀಕರಣದ ಯೋಜನೆಗಳ ಹೊರತಾಗಿಯೂ, ತಳಮಟ್ಟದ ಲಿಂಗ ಸೂಕ್ಷ್ಮತೆಯ ಕಾರ್ಯಕ್ರಮಗಳ ಹೊರತಾಗಿಯೂ ಏಕೆ ಹೀಗಾಗುತ್ತಿದೆ ? ಲೈಂಗಿಕ ದೌರ್ಜನ್ಯ, ತಾರತಮ್ಯ, ಅತ್ಯಾಚಾರಗಳನ್ನು ದಿನನಿತ್ಯ ವರದಿಮಾಡುವ ಸರ್ಕಾರದ ಅಧಿಕೃತ ಏಜೆನ್ಸಿಗಳನ್ನೂ ಕಾಡಬೇಕಾದ ಪ್ರಶ್ನೆ ಇದು.

ಪಾತಕ ಲೋಕದ ವಿಕೃತಿಗಳು

ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿಯ ಅನುಸಾರ ಕರ್ನಾಟಕದಲ್ಲಿ 2024ರ ಮೊದಲ ನಾಲ್ಕು ತಿಂಗಳಲ್ಲೇ 430 ಕೊಲೆ, 198 ಅತ್ಯಾಚಾರ, 2327 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಪ್ರತಿವರ್ಷವೂ ಹೆಚ್ಚಾಗಿ ದಾಖಲಾಗುತ್ತಿದ್ದರೂ ಸರ್ಕಾರಗಳು ತಮ್ಮ ಆಡಳಿತ ವ್ಯವಸ್ಥೆಯನ್ನು ಸೂಕ್ಷ್ಮಗೊಳಿಸುವತ್ತ ಯೋಚಿಸದಿರುವುದು ಈ ಪರಿಸ್ಥಿತಿಗೆ ಕಾರಣ ಎನ್ನುವುದು ಸ್ಪಷ್ಟ. 2022ರಲ್ಲಿ 537 ಅತ್ಯಾಚಾರಗಳು, 2023ರಲ್ಲಿ 609 ಪ್ರಕರಣಗಳು ದಾಖಲಾಗಿದ್ದು, ಈ ವರ್ಷದ ಆರಂಭದಲ್ಲೇ 198 ಅತ್ಯಾಚಾರಗಳು ಸಂಭವಿಸಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2022 ರಲ್ಲಿ 5862, 2023ರಲ್ಲಿ 6486 ಮತ್ತು ಈ ವರ್ಷದಲ್ಲಿ 2327 ದಾಖಲಾಗಿವೆ. ಇದು ಏನನ್ನು ಸೂಚಿಸುತ್ತದೆ ?

ಬೇಟಿ ಪಡಾವೋ ಬೇಟಿ ಬಚಾವೋ ಘೋಷಣೆಯಿಂದ ಗೃಹಲಕ್ಷ್ಮಿ-ಶಕ್ತಿ ಯೋಜನೆಗಳವರೆಗೆ ವಿಸ್ತರಿಸುವ ಆಳ್ವಿಕೆಯ ಅಂಗಳದಲ್ಲಿ ಧ್ವನಿಸಲೇಬೇಕಾದ ಗಹನವಾದ ಪ್ರಶ್ನೆ ಇದು. ಕಳೆದ ಎರಡು ತಿಂಗಳಲ್ಲೇ ರಾಜ್ಯದಲ್ಲಿ ನಾಲ್ಕು ಹತ್ಯೆಗಳು ನಡೆದಿದ್ದು, ಬಲಿಯಾದ ಯುವತಿಯರೆಲ್ಲರೂ ತಮ್ಮ ಸ್ನೇಹಿತನಿಂದಲೇ ಹತ್ಯೆಗೀಡಾಗಿದ್ದಾರೆ. ರಾಜಕೀಯ ಪಕ್ಷಗಳಿಗೆ ಈ ನಾಲ್ಕೂ ಹತ್ಯೆಗಳು ಕೇವಲ ಅಧಿಕಾರ ರಾಜಕಾರಣದ ಪಗಡೆ ಕಾಯಿಗಳಾಗಿ ಕಾಣುತ್ತವೆ. ಮುಖ್ಯಮಂತ್ರಿ-ಗೃಹ ಮಂತ್ರಿಗಳ ರಾಜೀನಾಮೆಯಿಂದ ಹಿಡಿದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವವರೆಗೂ ರಾಜಕೀಯ ಆಗ್ರಹಗಳು ಕೇಳಿಬರುತ್ತವೆ. ಮಹಿಳಾ ದೌರ್ಜನ್ಯಗಳ ಕಾರಣಕ್ಕಾಗಿಯೇ ಚುನಾಯಿತ ಸರ್ಕಾರಗಳು ಪದಚ್ಯುತವಾಗುವುದೇ ಆದರೆ ಭಾರತದಲ್ಲಿ ಯಾವುದೇ ಸರ್ಕಾರಕ್ಕೂ ಅಧಿಕಾರದಲ್ಲಿರುವ ನೈತಿಕತೆ ಇರುವುದಿಲ್ಲ. ದಪ್ಪ ಚರ್ಮದ ರಾಜಕಾರಣಿಗಳಿಂದಲೇ ಆವರಿಸಲ್ಪಟ್ಟಿರುವ ಭಾರತದ ಪ್ರಜಾತಂತ್ರದಲ್ಲಿ ಅಂತಹ ನೈತಿಕತೆ ಇದ್ದಿದ್ದರೆ ಬಹುಶಃ ಮಹಿಳೆಯರು ನೆಮ್ಮದಿಯಿಂದ ಉಸಿರಾಡಬಹುದಿತ್ತು. ಮಣಿಪುರ ಈ ನಿಟ್ಟಿನಲ್ಲಿ ಜ್ವಲಂತ ನಿದರ್ಶನವಾಗಿ ನಮ್ಮ ನಡುವೆ ನಿಂತಿದೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ರಾಜ್ಯದ ಮೂವರು ಯುವತಿಯರು ಹತ್ಯೆಗೀಡಾಗಿದ್ದಾರೆ. ಮೂವರೂ ಮಾಡಿದ ದೊಡ್ಡ ʼ ಅಪರಾಧ ʼ ಎಂದರೆ ಪ್ರೀತಿಸಲು ನಿರಾಕರಿಸಿದ್ದು !!! ಅಂದರೆ 21ನೆಯ ಶತಮಾನದ ಭಾರತೀಯ ಸಮಾಜ ಮಹಿಳೆಯಿಂದ ಪ್ರೀತಿಯನ್ನು ನಿರಾಕರಿಸುವ ಹಕ್ಕನ್ನೂ ಕಸಿದುಕೊಂಡಿದೆಯೇ ? ನೇಹಾ, ಮೀನಾ, ಅಂಜಲಿ ಈ ಮೂರೂ ಹೆಣ್ಣುಮಕ್ಕಳು ಬಲಿಯಾಗಿರುವುದು ಒಂದು ಕ್ರೂರ/ವಿಕೃತ ಮನಸ್ಥಿತಿಗೆ ಅಥವಾ ಕಾನೂನು ಪರಿಭಾಷೆಯಲ್ಲಿ ಪಾತಕಿ ಕೃತ್ಯಕ್ಕೆ ಎಂದು ಹೇಳಿದರೆ ಅದು ಅರ್ಧಸತ್ಯವಾದೀತು. ಬೆಂಗಳೂರಿನ ಜನನಿಬಿಡ ಸುಬ್ರಮಣ್ಯಪುರದಲ್ಲಿ ಪ್ರಬುದ್ಧ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಇದೂ ಸಹ ಇತರ ಮೂರು ಘಟನೆಗಳ ಜಾಡನ್ನೇ ಹಿಡಿದಿರುವ ಸಾಧ್ಯತೆಗಳಿವೆ. ಇಲ್ಲಿ ನಮ್ಮನ್ನು ಕಾಡಬೇಕಿರುವುದು ಈ ಮನಸ್ಥಿತಿಯ ಹಿಂದಿರುವ ಒಂದು ಸಾಮಾಜಿಕ ಆಯಾಮ ಮತ್ತು ಈ ಸಮಾಜದ ಒಳಸೂಕ್ಷ್ಮಗಳು. ಇದನ್ನು ಗಮನಿಸದೆ ಹೋದರೆ ಕಲಿತ ಪ್ರಜ್ಞಾವಂತ ಸಮಾಜ ಇನ್ನೂ ಅಂಧಕಾರದಲ್ಲಿದೆ ಎಂದೇ ಅರ್ಥಮಾಡಿಕೊಳ್ಳಬಹುದು.

ಏಕೆಂದರೆ ಈ ನಾಲ್ಕೂ ಹೀನ-ಹೇಯ-ಅಮಾನುಷ ಕೃತ್ಯಗಳನ್ನೂ ಮೀರಿಸುವಂತಹ ಘಟನೆಗಳು ಹಾಸನದಲ್ಲಿ ನಡೆದಿವೆ. ನೂರಾರು ಮಹಿಳೆಯರ ಘನತೆಯ ಬದುಕಿನ ಹಕ್ಕನ್ನೇ ಕಸಿದುಕೊಂಡಿರುವ ಕಿರಾತಕ ಕೃತ್ಯಗಳು ಅಲ್ಲಿ ನಡೆದಿವೆ. ಪುರುಷಾಧಿಪತ್ಯದ ಕಾಮತೃಷೆಗೆ ಮೂವರು ಯುವತಿಯರು ಜೀವ ತೆತ್ತಿದ್ದರೆ ಇಲ್ಲಿ ಈ ಕಾಮತೃಷೆಯ ಪರಾಕಾಷ್ಠೆಗೆ ನೂರಾರು ಮಹಿಳೆಯರು ತಮ್ಮ ಘನತೆಯ ಬದುಕನ್ನು ಕಳೆದುಕೊಳ್ಳುವಂತಾಗಿದೆ. ಎರಡೂ ಸಂದರ್ಭಗಳಲ್ಲಿ ನಾಗರಿಕ ಸಮಾಜ ಯೋಚಿಸಬೇಕಿರುವುದು ಸಮಾಜದಲ್ಲಿ ಮಹಿಳೆ ಹೊಂದಿರುವ ಸ್ಥಾನಮಾನಗಳ ಬಗ್ಗೆ. ಗ್ರಾಂಥಿಕವಾಗಿ ಮಹಿಳಾ ಸಮೂಹಕ್ಕೆ ನೀಡಲಾಗುವ ಸಾಂವಿಧಾನಿಕ-ಕಾನೂನಾತ್ಮಕ ರಕ್ಷಣಾ ಕವಚಗಳನ್ನು ಸುಲಭವಾಗಿ ಭೇದಿಸುವ ತಂತ್ರಗಾರಿಕೆಯನ್ನು ಪುರುಷ ಸಮಾಜ ರೂಢಿಸಿಕೊಂಡಿರುವುದು ಈ ಘಟನೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಕೊಡಲಾಗುವ ಹಣವನ್ನೂ ತಮ್ಮ ಧಾರ್ಮಿಕ ಚಟುವಟಿಕೆಗಳಿಗೆ ಕಸಿದುಕೊಳ್ಳುವ ಒಂದು ಪುರುಷಾಧಿಪತ್ಯದ ಸಮಾಜದ ನಡುವೆ ಈ ಸೂಕ್ಷ್ಮವಾದ ಪ್ರಶ್ನೆಗೆ ಉತ್ತರ ದೊರೆಯಲು ಸಾಧ್ಯವೇ ?

ಪಾತಕ ಲೋಕದ ಸಾಮಾಜಿಕ ಆಯಾಮ

ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅಪರಾಧವನ್ನೂ, ಪಾತಕಿಗಳ ಮತೀಯ ಅಸ್ಮಿತೆಗೆ ಅನುಗುಣವಾಗಿ ಪರಾಮರ್ಶಿಸುವ ಒಂದು ವಿಕೃತ ರಾಜಕೀಯ ಪರಂಪರೆಯ ನಡುವೆಯೇ ಈ ಪ್ರಕರಣಗಳಲ್ಲಿ ಮಹಿಳಾ ಸಂಕುಲದ ಅಸ್ತಿತ್ವ, ಅಸ್ಮಿತೆ ಹಾಗೂ ಹೆಣ್ತನದ ಘನತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನೇಹಾ, ಮೀನಾ ಮತ್ತು ಅಂಜಲಿ ಮೂವರೂ ಸಹ ತಮ್ಮ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿರುವುದು ಈ ಘಟನೆಗಳಲ್ಲಿ ಸ್ಪಷ್ಟವಾಗಿದೆ. ತನ್ನ ಬದುಕನ್ನು ರೂಪಿಸಿಕೊಳ್ಳಲು ತನ್ನ ಸ್ವ ಇಚ್ಚೆಯಂತೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕು ಸಾಂವಿಧಾನಿಕವಾಗಿ ಪ್ರಾಪ್ತವಾಗಿದೆ. ಆದರೆ ಈ ಗ್ರಾಂಥಿಕ ಹಕ್ಕುಗಳನ್ನು ನಿರಾಕರಿಸುವುದಷ್ಟೇ ಅಲ್ಲದೆ, ನಿರಾಕರಿಸಿದ ಪಕ್ಷದಲ್ಲಿ ಬದುಕುವ ಹಕ್ಕನ್ನೂ ಕಸಿದುಕೊಳ್ಳುವಂತಹ ಒಂದು ಸಮಾಜ ನಮ್ಮ ನಡುವೆ ಇರುವುದು ಏನನ್ನು ಸೂಚಿಸುತ್ತದೆ ? ಇದೇ ಪ್ರಶ್ನೆಯನ್ನು ಹಾಸನಕ್ಕೆ ವಿಸ್ತರಿಸಿದಾಗ, ತಮ್ಮ ನಿತ್ಯ ಬದುಕಿನ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಧಿಕಾರ ಕೇಂದ್ರಗಳನ್ನು, ಆಡಳಿತ ಕೇಂದ್ರಗಳನ್ನು ಸಂಪರ್ಕಿಸುವ ಹೆಣ್ಣು ಮಕ್ಕಳೂ ಸಹ ತಮ್ಮ ಘನತೆಯ ಬದುಕಿನ ಹಕ್ಕುಗಳನ್ನು ಕಳೆದುಕೊಂಡಿರುವುದು ಕಂಡುಬರುತ್ತದೆ.

ಸರ್ಕಾರ ಮಹಿಳೆಯರ ಜೀವನೋಪಾಯಕ್ಕಾಗಿ ನೀಡುವ ಅಲ್ಪಹಣವನ್ನು ಧಾರ್ಮಿಕ ಅಚರಣೆಗಳಿಗಾಗಿ ಕಸಿದುಕೊಳ್ಳುವುದಕ್ಕೂ, ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳಿಗಾಗಿ ಅಧಿಕಾರಸ್ಥರನ್ನು ಸಂಪರ್ಕಿಸುವ ಮಹಿಳೆಯರನ್ನು ಕಾಮತೃಷೆ ತೀರಿಸುವ ಸರಕುಗಳಂತೆ ಬಳಸಿಕೊಳ್ಳುವುದಕ್ಕೂ ತಾತ್ವಿಕವಾಗಿ ಯಾವ ವ್ಯತ್ಯಾಸ ಕಾಣಲು ಸಾಧ್ಯ ? ಎರಡೂ ಸಹ ಮಹಿಳೆಯನ್ನು ವ್ಯಕ್ತಿಗತವಾಗಿ, ಸಾಮೂಹಿಕವಾಗಿ ಅಧೀನದಲ್ಲಿರಿಸುವ ಒಂದು ಪಿತೃಪ್ರಧಾನ ತಂತ್ರಗಾರಿಕೆಯಾಗೇ ಕಾಣುವುದಿಲ್ಲವೇ ? ಒಂದರಲ್ಲಿ ಜೀವ ಹರಣವಾಗುತ್ತದೆ ಮತ್ತೊಂದರಲ್ಲಿ ಜೀವನ-ಜೀವನೋಪಾಯದ ಹರಣವಾಗುತ್ತದೆ. ಒಂದು ಮಾನಗೆಟ್ಟ ಪುರುಷಾಧಿಪತ್ಯ ವ್ಯವಸ್ಥೆಯಲ್ಲಿ ಮಾತ್ರ ಇಂತಹ ಹೇಯ ಕೃತ್ಯಗಳನ್ನು, ಅಮಾನುಷತೆಯನ್ನು ಸಹಿಸಿಕೊಳ್ಳಲು ಸಾಧ್ಯ. ಈ ನೊಂದ ಮಹಿಳೆಯರಿಗೆ, ಮಕ್ಕಳನ್ನು ಕಣ್ಣೆದುರಿನಲ್ಲೇ ಕಳೆದುಕೊಂಡ ತಾಯಂದಿರಿಗೆ ಸಾಂತ್ವನ ಹೇಳುವ ಕ್ಷಮತೆ ಅಥವಾ ನೈತಿಕ ಅರ್ಹತೆ ನಮ್ಮ ಸಮಾಜಕ್ಕಿದೆಯೇ ? ಈ ಪ್ರಶ್ನೆ ನಾಗರಿಕರನ್ನು-ರಾಜಕೀಯ ವ್ಯವಸ್ಥೆಯನ್ನು ಕಾಡಲೇಬೇಕಿದೆ.

ಕಾನೂನು ಸುವ್ಯವಸ್ಥೆಯ ಆಡಳಿತ ಯಂತ್ರಗಳಿಗೂ ಸಮಾಜವನ್ನು ಆವರಿಸುತ್ತಿರುವ ಪಾತಕ ಜಗತ್ತಿಗೂ ನಡುವೆ ಅಪಾರ ಅಂತರ ಇರುವುದನ್ನು ಇಲ್ಲಿ ಸೂಕ್ಷ್ಮತೆಯಿಂದ ಗಮನಿಸಬೇಕಿದೆ. ಪೊಲೀಸ್, ನ್ಯಾಯವ್ಯವಸ್ಥೆ ಹಾಗೂ ಇತರ ಸಾಂಸ್ಥಿಕ ನೆಲೆಗಳಲ್ಲಿ ಅಪರಾಧಗಳನ್ನು ನಿರ್ಬಂಧಿಸಬೇಕಾದ, ತಡೆಗಟ್ಟಬೇಕಾದ ಘಟನೆಗಳೆಂದಷ್ಟೇ ಭಾವಿಸಲಾಗುತ್ತದೆ. ಆದರೆ ಈ ಅಪರಾಧಗಳು ಸಂಭವಿಸುವ ತಳಮಟ್ಟದ ಸಮಾಜದಲ್ಲಿ ನೆಲದ ವಾಸ್ತವಗಳು ಬೇರೆಯೇ ಆಗಿರುತ್ತವೆ. ಅದರಲ್ಲೂ ದಲಿತರು, ಮಹಿಳೆಯರು, ಅಸ್ಪೃಶ್ಯರು ಹಾಗೂ ಇನ್ನಿತರ ತಳಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳು ಬಾಹ್ಯ ಸಮಾಜದ ದೃಷ್ಟಿಯಲ್ಲಿ ಪಾತಕ ಕೃತ್ಯಗಳು ಎನಿಸುವುದೇ ಇಲ್ಲ. ಹಾಗಾಗಿಯೇ ಹಾಸನದಂತಹ ಘಟನೆಗಳೂ ಸಹ ನಮ್ಮ ಸಾರ್ವಜನಿಕ ಪ್ರಜ್ಞೆಯನ್ನು ವಿಚಲಿತಗೊಳಿಸುವುದಿಲ್ಲ.

ಸಾಮಾಜಿಕ ಪ್ರಜ್ಞೆಯ ಕೊರತೆ

ಪ್ರಜ್ಞಾವಂತ ಸಮಾಜವನ್ನು ನಿರ್ದೇಶಿಸುವ ಹಾಗೂ ಸಾರ್ವಜನಿಕ ಪ್ರಜ್ಞೆಯನ್ನು ಆರೋಗ್ಯಕರವಾಗಿಸುವ ಜವಾಬ್ದಾರಿಯನ್ನು ಹೊತ್ತಿರುವ ನಾಗರಿಕರಲ್ಲಿ , ಬೌದ್ಧಿಕ ವಲಯಗಳಲ್ಲಿ ಹಾಗೂ ಸಮಾಜದ ವಿವಿಧ ಸ್ತರಗಳಲ್ಲಿ ಲಿಂಗ ಸೂಕ್ಷ್ಮತೆಯ ಕೊರತೆ ಇರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಗಮನಿಸಬೇಕಿದೆ. ಚುನಾಯಿತ ಸರ್ಕಾರಗಳಿಗೆ ಮತ್ತು ವಿರೋಧ ಪಕ್ಷಗಳಿಗೆ ಸಮಾಜದಲ್ಲಿ ಸಂಭವಿಸುವ ಎಲ್ಲ ಅಪರಾಧಗಳೂ ಪರಸ್ಪರ ದೋಷಾರೋಪಣೆಯ ವಸ್ತುಗಳಾಗಿಯೇ ಕಾಣುತ್ತವೆ. ಯಾರ ಆಳ್ವಿಕೆಯಲ್ಲಿ ಎಷ್ಟು ಅಪರಾಧಗಳು ಸಂಭವಿಸಿವೆ ಎಂಬ ಅಂಕಿಅಂಶಗಳೇ ನಿರ್ಣಾಯಕವಾಗುತ್ತವೆ. ಹಾಸನದಲ್ಲಿ ನಡೆದಿರುವ ಭೀಕರ ಘಟನೆಗಳನ್ನೂ ಸಹ ಇದೇ ಮಸೂರದಿಂದ ನೋಡುವ ದಾರ್ಷ್ಟ್ಯತೆಯನ್ನು ರಾಜಕೀಯ ಪಕ್ಷಗಳು ಪ್ರದರ್ಶಿಸಿವೆ. ಆದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಕಲಿತ ಸಮಾಜವೊಂದು ನಮ್ಮ ನಡುವೆ ಜೀವಂತವಾಗಿದೆ ಅಲ್ಲವೇ ? ವಿಶ್ವವಿದ್ಯಾಲಯಗಳಲ್ಲಿ, ಸಂಘಟನೆಗಳ ರೂಪದಲ್ಲಿ, ಸಾಂಸ್ಥಿಕ ನೆಲೆಗಳಲ್ಲಿ, ವಿದ್ಯುನ್ಮಾನ-ಮುದ್ರಣ-ಸಾಮಾಜಿಕ ಮಾಧ್ಯಮಗಳ ರೂಪದಲ್ಲಿ ಇನ್ನೂ ಉಸಿರಾಡುತ್ತಿದೆಯಲ್ಲವೇ ? ಈ ಸಮಾಜ ಏನು ಮಾಡುತ್ತಿದೆ ?

ಮೂಕ ಪ್ರೇಕ್ಷಕನಾಗಿದೆ ಎಂದಾದರೆ ಏಕೆ ಹೀಗೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಇದು ಕೇವಲ ಕಾನೂನು-ಪೊಲೀಸು-ತನಿಖಾ ವಲಯವನ್ನು ಕಾಡುವ ಅಥವಾ ನ್ಯಾಯ ವ್ಯವಸ್ಥೆಯ ನಿಷ್ಕರ್ಷೆಗೆ ಒಳಗಾಗಬೇಕಾದ ಪ್ರಶ್ನೆಗಳಲ್ಲ. ಇದು ಆಧುನಿಕ ಸಮಾಜವನ್ನು ನಿರಂತರವಾಗಿ ಕಾಡಬೇಕಾದ ಮನುಜ ಸಂವೇದನೆ, ನೈತಿಕತೆ ಮತ್ತು ಮಾನವೀಯತೆಯ ಪ್ರಶ್ನೆ. ರಾಜಕೀಯ ಪಕ್ಷಗಳಿಗೆ ಇದು ಚುನಾವಣಾ ಮಾರುಕಟ್ಟೆಯ ಸರಕು. ಆದರೆ ನಾಗರಿಕರಿಗೆ ಇದು ಮನೆಯೊಳಗಿನ ಒಂದು ಬಿಕ್ಕಟ್ಟು ಎಂದೇ ತೋರಬೇಕಲ್ಲವೇ ? ಸಮಾಜದಲ್ಲಿ ಢಾಳಾಗಿ ಕಾಣುತ್ತಿರುವ ಲಿಂಗ ಸೂಕ್ಷ್ಮತೆಯ ಕೊರತೆಯನ್ನು ಸರಿಪಡಿಸುವುದು ಹೇಗೆ ? ಎಲ್ಲಿಂದ ಆರಂಭಿಸಬೇಕು ? ಸಮಾಜದ ಯಾವ ಸ್ತರದಲ್ಲಿ ಯಾವ್ಯಾವ ಆಯಾಮಗಳಲ್ಲಿ ಲಿಂಗಸೂಕ್ಷ್ಮತೆಯನ್ನು ಬೆಳೆಸುವ ಉಪಕ್ರಮಗಳನ್ನು ಕೈಗೊಳ್ಳಬೇಕು ? ಒಂದು ವರ್ಗದ ಮಹಿಳೆಯರಲ್ಲೂ ಕಾಣಬಹುದಾದ ಈ ಕೊರತೆಯನ್ನು ನಿವಾರಿಸಲು ಸಮಾಜದ ಬೌದ್ಧಿಕ ವಲಯ ಹೇಗೆ ಸ್ಪಂದಿಸಬೇಕು ?

ಈ ಎಲ್ಲ ಪ್ರಶ್ನೆಗಳಿಗೂ ನಾಗರಿಕರಾಗಿ ನಾವು ಉತ್ತರ ಶೋಧಿಸಬೇಕಿದೆ. ಪ್ರಸಕ್ತ ಸನ್ನಿವೇಶವನ್ನು ಗಮನಿಸಿದಾಗ ಇದು ಕೇವಲ ಸ್ತ್ರೀವಾದಿಗಳ, ಮಹಿಳಾ ಚಳುವಳಿಗಳ ಮತ್ತು ಪ್ರಗತಿಪರ ಸಂಘಟನೆಗಳನ್ನು ಮಾತ್ರ ಕಾಡುತ್ತಿರುವುದು ಸ್ಪಷ್ಟವಾಗುತ್ತದೆ. ಇದೇ ಚಳುವಳಿಗಳನ್ನು ಅವಹೇಳನ ಮಾಡುವ, ಆಂದೋಲನ ಜೀವಿಗಳೆಂದು ಜರೆಯುವ, ಕೆಲವೊಮ್ಮೆ ದೇಶದ್ರೋಹಿಗಳೆಂದೂ ಬಣ್ಣಿಸುವ ಹಿತವಲಯದ- ಕಲಿತ ಸಮಾಜವೊಂದು ಏನು ಮಾಡುತ್ತಿದೆ ? ಈ ಸಮಾಜದೊಳಗಿಂದ ಯಾವ ಸ್ಪಂದನೆ ಅಥವಾ ಕ್ಷೀಣ ದನಿ ಕೇಳಿಬರುತ್ತಿದೆ ? ಹಿಂದೂ-ಮುಸ್ಲಿಂ-ದಲಿತ-ಕ್ರೈಸ್ತ ಮೊದಲಾದ ಅಸ್ಮಿತೆಗಳಿಂದಾಚೆಗೆ ನೋಡುವ ವ್ಯವಧಾನವನ್ನೇ ಕಳೆದುಕೊಂಡಿರುವ ಸಮಾಜದ ವಿವಿಧ ವರ್ಗಗಳು, ಒಟ್ಟಾರೆ ಮಹಿಳಾ ಸಮೂಹದ ಅಸ್ತಿತ್ವ ಮತ್ತು ಘನತೆಯನ್ನೇ ಧಿಕ್ಕರಿಸುತ್ತಿರುವ ಪಿತೃಪ್ರಧಾನತೆಯ ಪುರುಷಾಧಿಪತ್ಯವನ್ನು ಏಕೆ ಪ್ರಶ್ನಿಸುತ್ತಿಲ್ಲ ?

ಪ್ರತಿಯೊಂದು ಜಾತಿ, ಮತ ಮತ್ತು ಸಮುದಾಯದ ಅಂತರಾತ್ಮವನ್ನು ಕಾಡಬೇಕಾದ ಪ್ರಶ್ನೆ ಇದು. ಅಧಿಕಾರ ರಾಜಕಾರಣದ ವ್ಯಾಪ್ತಿಯಿಂದ ಹೊರತಾಗಿ ಸಮಾಜವನ್ನು ಕಾಡಬೇಕಾದ ಪ್ರಶ್ನೆ ಇದು. ಮಣಿಪುರದಿಂದ ಹಾಸನದವರೆಗೆ ಕಾಡಬೇಕಾದ ಜ್ವಲಂತ ಪ್ರಶ್ನೆ ಇದು. ಕೇವಲ ಪುರುಷ ಸಮಾಜವನ್ನಷ್ಟೇ ಅಲ್ಲದೆ ಮಹಿಳಾ ಸಮುದಾಯವನ್ನೂ ಕಾಡಬೇಕಾದ ಪ್ರಶ್ನೆ ಇದು. ಇಡೀ ಸಮಾಜವನ್ನು, ಅದರಲ್ಲೂ ಯುವ ಪೀಳಿಗೆಯನ್ನು ವ್ಯವಸ್ಥಿತವಾಗಿ ಆವರಿಸುತ್ತಿರುವ ಕ್ರೌರ್ಯ ಮತ್ತು ಹಿಂಸಾತ್ಮಕ ಧೋರಣೆಗೆ ಪಿತೃಪ್ರಧಾನತೆಯ ಯಜಮಾನಿಕೆ ಒಂದು ರಕ್ಷಾ ಕವಚವನ್ನು ಒದಗಿಸುವುದರಿಂದಲೇ, ಪಾತಕ ಕೃತ್ಯಗಳಿಗೆ ಬಲಿಯಾಗುವವರ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ಸಾಮಾಜಿಕ ವಾಸ್ತವವನ್ನು, ಸಾಂಸ್ಕೃತಿಕ ಸೂಕ್ಷ್ಮವನ್ನು ವಿಶಾಲ ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಈ ರಕ್ಷಾ ಕವಚವನ್ನು ಯಥಾಸ್ಥಿತಿಯಲ್ಲಿ ಅಥವಾ ಇನ್ನೂ ಹೆಚ್ಚಿನ ಆಸ್ಥೆ ವಹಿಸಿ ಕಾಪಾಡುವ ಒಂದು ರಾಜಕೀಯ ವ್ಯವಸ್ಥೆ ನಮ್ಮನ್ನು ಆಳುತ್ತಿದೆ. ಇಲ್ಲಿ ಮನುಜ ಸೂಕ್ಷ್ಮತೆಯನ್ನೇ ಅಸ್ಮಿತೆಗಳ ಆಧಾರದಲ್ಲಿ ತುಂಡರಿಸಿ ಛಿದ್ರಗೊಳಿಸಲಾಗಿದೆ. ಇನ್ನು ಲಿಂಗ ಸೂಕ್ಷ್ಮತೆಯನ್ನು ಎಲ್ಲಿಂದ ಹುಡುಕುವುದು ?

ಈ ಜಿಜ್ಞಾಸೆ ನಮ್ಮನ್ನು ಗಂಭೀರ ಆಲೋಚನೆಗೆ ದೂಡುವುದೇ ಆದರೆ ಕಲಿತ ಸಮಾಜದ ಬೌದ್ಧಿಕ ವಲಯ ಜಾಗೃತವಾಗಿ ದೇಶದ ಮಹಿಳಾ ಸಂಕುಲಕ್ಕೆ ಘನತೆಯಿಂದ ಬದುಕುವ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿದೆ. ಕೆಲವು ಮನಸ್ಸುಗಳಾದರೂ ಹೀಗೆ ಯೋಚಿಸುತ್ತಿರುವ ಹೊತ್ತಿನಲ್ಲಿ ಯುವ ಸಮೂಹವನ್ನು ಇದೇ ಹಾದಿಯಲ್ಲಿ ಜಾಗೃತಗೊಳಿಸುವತ್ತ ನಾವು ಸಾಗಬೇಕಿದೆ. ಇದು ನಮ್ಮ ಚಾರಿತ್ರಿಕ ಜವಾಬ್ದಾರಿ ಎಂದರಿತು ಮುನ್ನಡೆಯೋಣವೇ ?


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ