45 ಕೋಟಿ ಒಡೆಯನ ಹತ್ಯೆಗೆ ಪತ್ನಿಯೇ ನೀಡಿದಳು ಸುಪಾರಿ!: ಪ್ರಕರಣದ ಹಿಂದಿದೆ ಅನೈತಿಕ ಸಂಬಂಧ! - Mahanayaka

45 ಕೋಟಿ ಒಡೆಯನ ಹತ್ಯೆಗೆ ಪತ್ನಿಯೇ ನೀಡಿದಳು ಸುಪಾರಿ!: ಪ್ರಕರಣದ ಹಿಂದಿದೆ ಅನೈತಿಕ ಸಂಬಂಧ!

khanpur
03/12/2023

ಕಾನ್ಪುರ:  45 ಕೋಟಿಯ ಒಡೆಯ, ವೃತ್ತಿಯಲ್ಲಿ ಶಿಕ್ಷಕನಾಗಿರುವ ವ್ಯಕ್ತಿಯೋರ್ವ ಅಪಘಾತದಲ್ಲಿ ಮೃತಪಟ್ಟಿದ್ದ.  ಈ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಅಪಘಾತ ಪ್ರಕರಣ ಎಂದು ನಂಬಲಾಗಿತ್ತು. ಆದರೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆದಾಗ ಬೆಚ್ಚಿಬೀಳಿಸುವ ಪ್ರಕರಣವೊಂದು ಬಯಲಾಗಿದೆ.

ಹೌದು…! ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಕಾನ್ಪುರದಲ್ಲಿ,  ಶಿಕ್ಷಕ ಗೌತಮ್‌ ಎಂಬವರು ಸಾವನ್ನಪ್ಪಿದ ಶಿಕ್ಷಕರಾಗಿದ್ದಾರೆ. ರಾಜೇಶ್‌ ಗೌತಮ್‌ ಹಾಗೂ ಅವರ ಪತ್ನಿ ಪಿಂಕಿ ಬಹಳ ಅನ್ಯೋನ್ಯತೆಯಿಂದ ಜೀವಿಸ್ತಾ ಇದ್ರು. ಆದ್ರೆ 2021ರಲ್ಲಿ ಕಾನ್ಪುರದ ಕೊಯ್ಲಾ ನಗರದಲ್ಲಿ ಫ್ಲಾಟ್‌ ನಿರ್ಮಾಣ ಮಾಡಲು ರಾಜೇಶ್‌ ಗೌತಮ್‌ ಆರಂಭಿಸಿದ್ದರು. ಇಲ್ಲಿಂದ ಸಮಸ್ಯೆ ಆರಂಭವಾಗಿದೆ. ಮನೆ ನಿರ್ಮಾಣ ಕಾಮಗಾರಿ ನಡೆಸಲು ಬಂದಿದ್ದ ಶೈಲೇಂದ್ರ ಸೋಂಕರ್‌ ಎಂಬಾತ, ಶಿಕ್ಷಕ ರಾಜೇಶ್‌ ಗೌತಮ್‌ ಪತ್ನಿಯ ಮೇಲೆ ಕಣ್ಣಿಟ್ಟಿದ್ದ. ಆಕೆಯನ್ನು ಒಲಿಸಿಕೊಳ್ಳುವುದರಲ್ಲೂ ಯಶಸ್ವಿಯಾಗಿದ್ದ. ಇವರಿಬ್ಬರ ನಡುವೆ ಅನೈತಿಕ ಸಂಬಂಧ ಕೂಡ ಆರಂಭವಾಗಿದೆ. ಆದರೆ, ಈ ಸತ್ಯ ಹೆಚ್ಚು ದಿನ ಉಳಿಯಲಿಲ್ಲ. ರಾಜೇಶ್‌ ಗೌತಮ್‌ ಗೆ ಈ ಬಗ್ಗೆ ಅನುಮಾನ ಬಂದಾಗಲೇ ಆತ ಶೈಲೇಂದ್ರ ಸೋಂಕರ್‌ ನನ್ನು ತನ್ನ ಮನೆಗೆ ಬಾರದಂತೆ ಜೋರು ಮಾಡಿ ಮನೆಯಿಂದ ಹೊರದಬ್ಬಿದ್ದ.

ಶೈಲೇಂದ್ರ ಸೋಂಕರ್‌ ನನ್ನು ಮನೆಗೆ ಬಾರದಂತೆ ತಡೆಯುತ್ತಿದ್ದಂತೆಯೇ, ಆತನನ್ನು ಮುಗಿಸಬೇಕು ಎಂದು ಪತ್ನಿ ಪಿಂಕಿ ಹಾಗೂ ಶೈಲೇಂದ್ರ ಸೋಂಕರ್‌ ಪ್ಲ್ಯಾನ್‌ ಮಾಡಿದ್ದಾರೆ. ಒಂದು ಬಾರಿ ಆಹಾರದಲ್ಲಿ ವಿಷ ಹಾಕಿ ರಾಜೇಂದ್ರ ಗೌತಮ್‌ ನನ್ನು ಮುಗಿಸಲು ಮುಂದಾಗಿದ್ದಾರೆ. ಆದ್ರೆ, ಆತ ಚೇತರಿಸಿಕೊಂಡು ಅಪಾಯದಿಂದ ಪಾರಾಗಿದ್ದ. ಹೀಗಾಗಿ ದೊಡ್ಡ ಪ್ಲ್ಯಾನ್‌ ಮಾಡಬೇಕು ಎಂದು ಸಂಚು ಹೂಡಿದ್ದಾರೆ.

ಅಂತೆಯೇ ನಾಲ್ಕು ಲಕ್ಷ ರೂಪಾಯಿ ನೀಡಿ ಸುಪಾರಿ ಕಿಲ್ಲರ್ಸ್‌ ನ್ನು ಪತ್ನಿ ಪಿಂಕಿ ನೇಮಿಸಿದ್ದಾಳೆ. ನವೆಂಬರ್‌ 4ರಂದು ವಾಕಿಂಗ್‌ ಗೆ ತೆರಳಿದ್ದ ರಾಜೇಶ್‌ ಗೌತಮ್‌ ನ ಮೇಲೆ ಶೈಲೇಂದ್ರ ಮತ್ತು ಗ್ಯಾಂಗ್‌  ಕಾರು ಹರಿಸಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು. ಮೇಲ್ನೋಟಕ್ಕೆ ಇದೊಂದು ಅಪಘಾತ ಪ್ರಕರಣ ಎಂದೇ ಎಲ್ಲರೂ ನಂಬಿದ್ದರು.

ಪತ್ನಿಯ ಮೇಲೆ ಅನುಮಾನ:

ರಾಜೇಶ್‌ ಗೌತಮ್‌ ಅವರ ಸಹೋದರನಿಗೆ  ಈ ಸಾವಿನ ಬಗ್ಗೆ ಅನುಮಾನ ಮೂಡಿದೆ. ತಕ್ಷಣವೇ ಅವರು ಪೊಲೀಸರಿಗೆ ಅನುಮಾನ ವ್ಯಕ್ತಪಡಿಸಿ ದೂರನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ತನಿಖೆ ನಡೆಸಿದಾಗ, ಪಿಂಕಿ ಹಾಗೂ ಶೈಲೇಂದ್ರ ಕೊಲೆಗೆ ಸಂಚು ಹೂಡಿರುವ ಬಗ್ಗೆ ಮಾತನಾಡಿರುವ ಫೋನ್‌ ಕರೆಗಳು ಲಭ್ಯವಾಗಿದೆ. ಇದರ ಜೊತೆಗೆ ಮತ್ತೊಂದು ವಿಚಾರ ಕೂಡ ಬಯಲಾಗಿದೆ, ರಾಜೇಂದ್ರ ಗೌತಮ್‌ ಕೊಲೆ ನಡೆದ ದಿನ ಅವರ ಪುತ್ರ ತಂದೆಯ ಜೊತೆಗೆ ವಾಕಿಂಗ್‌ ಗೆ ಹೋಗಲು ಮುಂದಾಗಿದ್ದ. ಆದರೆ, ತಾಯಿ ಆತ ವಾಕಿಂಗ್‌ ಹೋಗದಂತೆ ತಡೆದು ಬಾತ್‌ ರೂಮ್‌ ನಲ್ಲಿ ಕೂಡಿ ಹಾಕಿದ್ದಳು. ಮಗನ ಸಾವನ್ನು ಪಿಂಕಿ ಬಯಸಿರಲಿಲ್ಲ ಎನ್ನುವುದು ತನಿಖೆಯ ಬಳಿಕ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ