ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಲೆ; ವಿಡಿಯೋ ಮಾಡಿ ವಿಕೃತಿ ಮೆರೆದ ಪತಿ ಬಂಧನ - Mahanayaka

ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಲೆ; ವಿಡಿಯೋ ಮಾಡಿ ವಿಕೃತಿ ಮೆರೆದ ಪತಿ ಬಂಧನ

police.jpg
28/07/2026

ಬಾಗಲಕೋಟೆ: ಪತ್ನಿಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ ಬಳಿಕ ವಿಡಿಯೋ ಮಾಡಿ ವಿಕೃತಿ ಮೆರೆದ ಅಮಾನವೀಯ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿಯನ್ನು ಭಾಗ್ಯಶ್ರೀ (23) ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ಹಂತಕ ಪತಿ ಪ್ರವೀಣ ಜಗಳೂರು ಎಂಬಾತನನ್ನು ಬೀಳಗಿ ಪೊಲೀಸರು ಬಂಧಿಸಿದ್ದಾರೆ.
ಆರು ವರ್ಷಗಳ ಹಿಂದೆ ಭಾಗ್ಯಶ್ರೀ ಹಾಗೂ ಪ್ರವೀಣ ಅವರ ವಿವಾಹವಾಗಿದ್ದು, ದಂಪತಿಗೆ ಒಂದು ಗಂಡು ಮಗುವಿದೆ. ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಭಾಗ್ಯಶ್ರೀ ತಮ್ಮ ತವರೂರಾದ ಮಹಾಲಿಂಗಪುರಕ್ಕೆ ತೆರಳಿದ್ದರು. ಇತ್ತೀಚೆಗೆ ಹಿರಿಯರು ಮಧ್ಯಸ್ಥಿಕೆ ವಹಿಸಿ ತಿಳಿಹೇಳಿದ ಬಳಿಕ, ಎರಡು ತಿಂಗಳ ನಂತರ ಅವರು ಗಂಡನ ಮನೆಗೆ ಮರಳಿದ್ದರು.

ಆದರೆ, ಮನೆಗೆ ಬಂದ ಮರುದಿನವೇ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಮತ್ತೆ ಜಗಳ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಪ್ರವೀಣ, ಪತ್ನಿಗೆ ಕಟ್ಟಿಗೆಯಿಂದ ಭೀಕರವಾಗಿ ಹೊಡೆದು, ಬಳಿಕ ನೇಣು ಬಿಗಿದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿದ್ದ ಪತ್ನಿಯ ದೇಹದ ವಿಡಿಯೋ ಚಿತ್ರೀಕರಿಸಿದ ಆರೋಪಿ, ಅದನ್ನು ತನ್ನ ಸ್ನೇಹಿತರಿಗೆ ಹಾಗೂ ಪೋಷಕರಿಗೆ ಕಳುಹಿಸಿ ವಿಕೃತಿ ಮೆರೆದಿದ್ದಾನೆ. ಈ ವಿಚಾರ ತಿಳಿದ ಭಾಗ್ಯಶ್ರೀ ಅವರ ಪೋಷಕರು ಬೀಳಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರವೀಣನನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ದಾರ್ಥ ಗೋಯಲ್ ಹಾಗೂ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ