ಜಾತ್ರೆ ಮುಗಿದ ಮೇಲೆ ಅಂಗಡಿಗಳ ರಿಯಾಯಿತಿ ದರದ ಸ್ಟಾಕ್ ಕ್ಲಿಯರೆನ್ಸ್ ಬಜೆಟ್: ಹೆಚ್.ಡಿ.ಕುಮಾರಸ್ವಾಮಿ - Mahanayaka
11:40 PM Wednesday 9 - September 2026

ಜಾತ್ರೆ ಮುಗಿದ ಮೇಲೆ ಅಂಗಡಿಗಳ ರಿಯಾಯಿತಿ ದರದ ಸ್ಟಾಕ್ ಕ್ಲಿಯರೆನ್ಸ್ ಬಜೆಟ್: ಹೆಚ್.ಡಿ.ಕುಮಾರಸ್ವಾಮಿ

kumaraswamy
18/02/2023

ಬೆಂಗಳೂರು: ಮೂರು ತಿಂಗಳಲ್ಲಿ ಚುನಾವಣೆ ಇಟ್ಟುಕೊಂಡು ಶಾಸ್ತ್ರಕ್ಕೆ ಮಂಡಿಸಿರುವ ರಾಜ್ಯ ಮುಂಗಡ ಪತ್ರ ರಾಜ್ಯದ ಜನರ ಸಂಕಷ್ಟಗಳನ್ನು ಪರಿಹಾರ ಮಾಡಲು ಮೂರು ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇನ್ನೂ ಸರಳವಾಗಿ ಹೇಳುವುದಾದರೆ, ವರ್ಷಕ್ಕೊಮ್ಮೆ ಜಾತ್ರೆ ಮುಗಿದ ಮೇಲೆ ಅಲ್ಲಿನ ಅಂಗಡಿಗಳು ಸ್ಟಾಕ್ ಕ್ಲಿಯರೆನ್ಸ್ ಸೇಲ್ ಬೋರ್ಡ್ ಹಾಕಿ ರಿಯಾಯಿತಿ ದರದ ಘೋಷಣೆ ಮಾಡುತ್ತವೆ, ಹಾಗಿದೆ ಈ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ನೀಡಿದ್ದಾರೆ.

ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮೂರು ವರ್ಷಗಳಲ್ಲಿ ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದೆ. ಕೈಗಾರಿಕೆ, ಮೂಲಸೌಕರ್ಯ, ಸಾರಿಗೆ, ಶಿಕ್ಷಣ, ಕೃಷಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಬಸವಳಿದಿದೆ. ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ದುಸ್ಥಿತಿ ಬಂದಿದೆ. ಕೇಂದ್ರ ಸರಕಾರವು ರಾಜ್ಯಕ್ಕೆ ಅನುದಾನವನ್ನು ಭಿಕ್ಷೆಯಂತೆ ಹಾಕುತ್ತಿದೆ. ಇನ್ನು ಈ ಬಜೆಟ್ಟಿನ ಹಣೆಬರಹಕ್ಕೆ ದಿಕ್ಕೆಲ್ಲಿ ಎಂದು ಮಾಜಿ ಮುಖ್ಯಮಂತ್ರಿ ಅವರು ಕಟುವಾಗಿ ಟೀಕಿಸಿದ್ದಾರೆ.

ಬೊಮ್ಮಾಯಿ ಬಜೆಟ್​ಗೆ ಯಾವುದೇ ಮಹತ್ವ ಇಲ್ಲ. ಇದು ಅತ್ಯಂತ ನೀರಸ, ಮಾತ್ರವಲ್ಲ ನಿರುಪಯುಕ್ತ ಕೂಡ. ಚುನಾವಣೆ ನಂತರ ಬರುವ ಸರಕಾರ ಮಂಡಿಸುವ ಬಜೆಟ್ ಜಾರಿಗೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎನ್ನುವುದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ಸಂಗತಿ ಎಂದು ಅವರು ತಿಳಿಸಿದ್ದಾರೆ.

ನಾನು ಪಂಚರತ್ನ ರಥಯಾತ್ರೆ ನಡೆಸುವಾಗ ರಾಜ್ಯದ ಉದ್ದಗಲಕ್ಕೂ ಶಾಲೆ ಮಕ್ಕಳ ಕಷ್ಟವನ್ನು ಕಂಡೆ. ಶಾಲೆಗೆ ಹೋಗಲು ಬಸ್ ಇಲ್ಲದೆ ಕಾಡುಮೇಡುಗಳಲ್ಲಿ, ಕ್ರೂರ ಮೃಗಗಳ ಭೀತಿಯ ನಡುವೆ ನಡೆದು ಹೋಗುತಿದ್ದರು. ಅನೇಕ ಕಡೆ ಶಾಲೆ ಕಾಲೇಜುಗಳು ಕುಸಿದು ಬೀಳುವ ಸ್ಥಿತಿಯಲ್ಲಿದ್ದವು. ಈ ಬಗ್ಗೆ ನಾನು ದನಿಯತ್ತಿ ಸರಕಾರವನ್ನು ಒತ್ತಾಯ ಮಾಡಿದ್ದೆ. ಈಗ ಮಕ್ಕಳ ಬಸ್ಸು ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ, ಈ ಯೋಜನೆಯನ್ನು ಚುನಾವಣೆಗೆ ಮೊದಲೇ ಜಾರಿ ಮಾಡುತ್ತಾರಾ? ಅಥವಾ ಚುನಾವಣೆ ನಂತರ ಜಾರಿ ಮಾಡುತ್ತಾರಾ? ಎನ್ನುವುದಕ್ಕೆ ಮುಖ್ಯಮಂತ್ರಿಗಳು ಏನೂ ಹೇಳಿಲ್ಲ, ಬುದ್ದಿವಂತಿಕೆಯಿಂದ ಜಾರಿಕೊಂಡಿದ್ದಾರೆ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿಗಳು.

ಇನ್ನು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುತ್ತಿರುವ ಬೆಂಗಳೂರು ಕೊಳಚೆ ನೀರಿನ ಮೂರನೇ ಹಂತದ ಸಂಸ್ಕರಣೆ ಬಗ್ಗೆ, ಟರ್ಸರಿ ಘಟಕ ಹಾಕುವ ಬಗ್ಗೆ ನೂರಾರು ಸಲ ನಾನು ಒತ್ತಾಯ ಮಾಡಿದ್ದೆ. ಆದರೆ, ಆ ನೀರು ಶುದ್ಧವಾಗಿದೆ, ಕುಡಿಯಲು ಯೋಗ್ಯವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೇಳಿಕೆ ನೀಡಿದ್ದರು. ಈಗ ಟರ್ಸರಿ ಘಟಕ ಹಾಕುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಂದರೆ, ಈ ಸರಕಾರಕ್ಕೆ ತಾನು ಮಾಡಿದ ಪಾಪದ ಅರಿವಾಗಿದೆ ಸರಿ, ಆದರೆ; ಟರ್ಸರಿ ಘಟಕ ಸ್ಥಾಪನೆ ಮಾಡುವುದು ಯಾವಾಗ? ಎಂದು ಅವರು ಕೇಳಿದ್ದಾರೆ.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ವಿಚಾರದ ಬಗ್ಗೆ ಹೇಳುವುದಾದರೆ, ರೈತರು ಸಾಲಗಾರನಾಗದಂತೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕು. ಈ ಕುಮಾರಸ್ವಾಮಿ‌ ಇಲ್ಲದಿದ್ದರೆ ಈ ವೇಳೆಗೆ ಎಲ್ಲಾ ಡಿಸಿಸಿ ಬ್ಯಾಂಕ್ ಗಳು ದಿವಾಳಿಯೆದ್ದು ಹೋಗುತ್ತಿದ್ದವು. ಆ ಬ್ಯಾಂಕ್​​ಗಳಿಗೆ ಶಕ್ತಿ‌ ತುಂಬಿರೋದು ನಾನು. ಅದರಿಂದಲೇ ಈಗ ಬಿಜೆಪಿ ಸರಕಾರ ಸಾಲ ಕೊಡುತ್ತೇವೆ ಎಂದು ಹೇಳುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಯಿಂದ ರಾಮನಗರದಲ್ಲಿ ರಾಮಮಂದಿರ ಕಟ್ಟಲು  ಸಾಧ್ಯವಿಲ್ಲ. ರಾಮಮಂದಿರ ಘೋಷಣೆ ಬಜೆಟ್ ಬುಕ್‌ನಲ್ಲೇ ಉಳಿಯುತ್ತದೆ. ರಾಮಮಂದಿರ ನಿರ್ಮಾಣ ನನ್ನಿಂದ ಸಾಧ್ಯ. ರಾಮನಗರದಲ್ಲಿ ಯಾವುದೇ ಜಪ ಮಾಡಿದರು ಏನೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti