ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ದಕ್ಷಿಣ ಕನ್ನಡದಲ್ಲಿ ಶಾಂತಿ ಕೆಡುತ್ತಿದೆ: ಶೋಭಾ ಕರಂದ್ಲಾಜೆ - Mahanayaka

ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ದಕ್ಷಿಣ ಕನ್ನಡದಲ್ಲಿ ಶಾಂತಿ ಕೆಡುತ್ತಿದೆ: ಶೋಭಾ ಕರಂದ್ಲಾಜೆ

shobha karandlaje
31/05/2025

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಲೆಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಕೆಡುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಅವರು ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಶಾಂತಿ ಕೆಡಲು ಕಾಂಗ್ರೆಸ್ ಸರಕಾರ, ಅವರ ಇಬ್ಬಗೆಯ ನೀತಿ ಹಾಗೂ ತುಷ್ಟೀಕರಣದ ನೀತಿ ಕಾರಣ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸಲ್ಮಾನರಿಗೆ ರಕ್ಷಣೆ ಇಲ್ಲ; ಅವರು ಮಾತನಾಡುವ ಹಾಗೆ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದರು ಎಂದರಲ್ಲದೆ, ದಿನೇಶ್ ಗುಂಡೂರಾವ್ ಅವರು ಏನು ಮಾತನಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು. ಯಾರು ರಕ್ಷಣೆ ಕೊಡಬೇಕು? ಯಾಕೆ ರಕ್ಷಣೆ ಸಿಗುತ್ತಿಲ್ಲ?. ದಿನೇಶ್ ಗುಂಡೂರಾವ್ ಅವರ ನೀತಿ ಕೇವಲ ತುಷ್ಟೀಕರಣ ಮತ್ತು ಮತಬ್ಯಾಂಕನ್ನು ತೋರಿಸುತ್ತದೆ ಎಂದು ದೂರಿದರು.

ಮತಬ್ಯಾಂಕ್ ಬಿಟ್ಟು ಬೇರೇನೂ ಕಾಂಗ್ರೆಸ್ಸಿಗರಿಗೆ ಕಾಣುತ್ತಿಲ್ಲ; ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯೇ ಉದಾಹರಣೆ ಎಂದು ದೂರಿದರು. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಸರಕಾರಿ ಯೋಜನೆ ಬೇಕು. ಆದರೆ ನಾವು ಬೇಡ ಎಂದಿದ್ದಾರೆ; ಇದರ ಅರ್ಥ ಏನು ಎಂದು ಪ್ರಶ್ನಿಸಿದರು. ಯಾರು ನಿಮಗೆ ಮತ ಹಾಕಿದ್ದಾರೋ ಅವರಿಗೆ ಮಾತ್ರ ಗ್ಯಾರಂಟಿ ಕೊಡುವವರೇ? ಅವರು ಮಾತ್ರ ಸರಕಾರಿ ಯೋಜನೆಯ ಸೌಲಭ್ಯ ಪಡೆಯಬೇಕೇ ಎಂದು ಪ್ರಶ್ನಿಸಿದರು.

ನಿಮ್ಮ ಉದ್ದೇಶ ಏನು? ನಿಮ್ಮ ಮಾತೇನು ಎಂದು ನಮಗೆ ಅರ್ಥವಾಗುತ್ತಿಲ್ಲ. ಹಿಂದೆ ಸಿದ್ದರಾಮಯ್ಯನವರು ಜಾತಿ ಜಾತಿಯನ್ನು ಒಡೆಯಲು ಶುರು ಮಾಡಿದ್ದರು. 2013ರ ಸರಕಾರದಲ್ಲೂ ಜಾತಿ ಜಾತಿ ನಡುವೆ ವೈಷಮ್ಯ ತಂದಿತು. ಲಿಂಗಾಯತರನ್ನು ಒಡೆದಿದ್ದರು. ಕೇವಲ ಒಂದು ಜಾತಿಯವರಿಗೆ ಮಾತ್ರ ಶಾಲಾ ಪ್ರವಾಸ ಮಾಡಿದ್ದರು ಎಂದು ಆರೋಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ