ಕಮಲ್ ಹಾಸನ್ ಹೇಳಿಕೆಗೆ ತನ್ನ ಹೆಸರು ಎಳೆದು ತಂದವರಿಗೆ ಖಡಕ್ ಉತ್ತರ ನೀಡಿದ ಶಿವರಾಜ್ ಕುಮಾರ್ - Mahanayaka

ಕಮಲ್ ಹಾಸನ್ ಹೇಳಿಕೆಗೆ ತನ್ನ ಹೆಸರು ಎಳೆದು ತಂದವರಿಗೆ ಖಡಕ್ ಉತ್ತರ ನೀಡಿದ ಶಿವರಾಜ್ ಕುಮಾರ್

shivaraj kumar
31/05/2025

ಬೆಂಗಳೂರು: ತಮಿಳಿನಿಂದಲೇ ಕನ್ನಡ ಜನಿಸಿದೆ ಎಂದು ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಕೆಲವರು ನಟ ಶಿವರಾಜ್ ಕುಮಾರ್  ಅವರ ಹೆಸರನ್ನು ಎಳೆದು ತಂದಿದ್ದಾರೆ. ಈ ವಿವಾದದ ಬೆನ್ನಲ್ಲೇ ಮೌನವಾಗಿದ್ದ ನಟ ಶಿವರಾಜ್ ಕುಮಾರ್ ಇದೀಗ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡವೇ ನನ್ನ ಮೊದಲ ಆದ್ಯತೆ, ಇದು ಮೊದಲ ಬಾರಿಯಲ್ಲ, ಪ್ರತಿಬಾರಿಯೂ ಕನ್ನಡದ ವಿಷಯ ಬಂದಾಗೆಲ್ಲ ನಾನು ನಿಂತಿದ್ದೇನೆ. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ ಎಂಬುದು ಕರ್ನಾಟಕದ ಜನರಿಗೆ ಗೊತ್ತಿದೆ, ಅದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಶಿವರಾಜ್ ಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಅಂದಿನ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೆ ಎಂದು ಶಿವರಾಜ್ ಕುಮಾರ್ ಹೇಳಿದರು. ಇದೇ ವೇಳೆ ಈ ವಿವಾದಕ್ಕೆ ನಿಮ್ಮ ಹೆಸರು ಎಳೆದುತರಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಇರಲಿ ತೊಂದರೆ ಇಲ್ಲ, ನಾನು ಅದರ ಬಗ್ಗೆ ಎಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿದ್ದೇನೆ. ನಾನು ಕಲೆಗಾಗಿ ಬದುಕುತ್ತಿರುವವನು, ಕಲೆಯಿಂದಲೇ ನಾವು, ಎಲ್ಲ ಭಾಷೆಗಳ ಬಗ್ಗೆಯೂ ಗೌರವ ಇದೆ, ಆದರೆ ಕನ್ನಡ ಭಾಷೆಯ ವಿಷಯ ಬಂದಾಗೆಲ್ಲ ಚಿತ್ರರಂಗದ ಪರವಾಗಿ ಬರುವವರಲ್ಲಿ ಮೊದಲಿಗೆ ನಾನಾಗಿರುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

‘ಕಮಲ್ ಹಾಸನ್ ಅವರ ಅಭಿಮಾನಿ ನಾನು, ಆದರೆ ವೇದಿಕೆ ಮೇಲೆ ಏನು ಮಾತನಾಡಬೇಕು, ಬಿಡಬೇಕು ಎಂಬುದು ಅವರ ಆಯ್ಕೆ. ಆದರೆ ಅವರಿಂದ ಈಗ ಏನು ಬಯಸುತ್ತಿದ್ದಾರೋ ಅದು ಮಾಧ್ಯಮಗಳ ಬಯಕೆ. ಅಂದು ಕಮಲ್ ಮಾತಿಗೆ ನಾನು ಚಪ್ಪಾಳೆ ಹೊಡೆಯುತ್ತಿರುವಂತೆ ದೃಶ್ಯಗಳನ್ನು ಜೋಡಿಸಿ ಕೆಲವರು ತೋರಿಸುತ್ತಿದ್ದಾರೆ. ದಯವಿಟ್ಟು ಅದನ್ನು ಮಾಡಬೇಡಿ, ನಾನು ಕಲಾವಿದ, ಈ ಎಡಿಟಿಂಗ್ ಗಳು ಹೇಗೆ ಆಗುತ್ತವೆ ಎಂಬುದು ನನಗೆ ಗೊತ್ತಿದೆ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

‘ಕಮಲ್ ಹಾಸನ್ ಅವರು ಅಂದು ಆ ಮಾತು ಆಡಿದಾಗ ಅಲ್ಲಿ ಎಲ್ಲರೂ ಇದ್ದರು, ಮಾಧ್ಯಮಗಳ ಮುಂದೆಯೇ ಅವರು ಆ ಮಾತನ್ನಾಡಿದ್ದರು. ಆದರೆ ಅಂದೇ ಆ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದರೆ ವಿಷಯ ಇಷ್ಟು ದೊಡ್ಡದಾಗಿ ಆಗುತ್ತಲೇ ಇರಲಿಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತು ನಾನು ಏನು ಎಂದು, ನನ್ನ ತಂದೆಗೆ ಗೊತ್ತು’ ಎಂದು ಶಿವರಾಜ್ ಕುಮಾರ್ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ