ಮಹಾಲಿಂಗೇಶ್ವರನಿಗಾಗಿ ಸಾವಿರ ಕೇಸ್ ಬಿದ್ದರೂ ಹೆದರಲ್ಲ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: “ಭಕ್ತರ ಹಿತದೃಷ್ಟಿಯಿಂದ ಮತ್ತು ಮಹಾಲಿಂಗೇಶ್ವರ ಕ್ಷೇತ್ರಕ್ಕಾಗಿ ನನ್ನ ಮೇಲೆ ಸಾವಿರ ಕೇಸ್‌ಗಳು ದಾಖಲಾದರೂ ನಾನು ಹಿಂಜರಿಯುವುದಿಲ್ಲ. ದೇವರಿಗಾಗಿ ಮತ್ತು ಜನರಿಗಾಗಿ ಮಾಡುವ ಕೆಲಸದಲ್ಲಿ ಸದಾ ಸಿದ್ಧ,” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಖಡಕ್ ಆಗಿ ಹೇಳಿದ್ದಾರೆ.
ಏಪ್ರಿಲ್ 19ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಧ್ವಜಾರೋಹಣದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ಹಾಗೂ ತಮ್ಮ ವಿರುದ್ಧ ದಾಖಲಾದ ದೂರುಗಳ ಬಗ್ಗೆ ಸ್ಪಷ್ಟನೆ ನೀಡಿದರು.
ಪ್ರತಿ ವರ್ಷ ಉಳ್ಳಾಲ್ತಿ ಅಮ್ಮನವರು ಮತ್ತು ಮಹಾಲಿಂಗೇಶ್ವರ ದೇವರ ಭೇಟಿ ನಡೆಯುವ ಸಂದರ್ಭದಲ್ಲಿ ದಾರಿ ಅತ್ಯಂತ ಕಿರಿದಾಗಿರುತ್ತದೆ. ಸುಮಾರು 30 ರಿಂದ 40 ಸಾವಿರ ಭಕ್ತರು ಸೇರುವ ಈ ಜಾಗದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಶಾಸಕರು ತಿಳಿಸಿದರು.
“ರಾಜ್ಯದ ಬೇರೆಡೆ ಜನಸಂದಣಿಯಿಂದ ಆದ ಅನಾಹುತಗಳು ನಮಗೆ ತಿಳಿದಿದೆ. ನಾಳೆ ಹಳೆಯ ಕಟ್ಟಡ ಬಿದ್ದು ಯಾರಿಗಾದರೂ ಪ್ರಾಣಾಪಾಯವಾದರೆ ಮೊದಲು ಪ್ರಶ್ನಿಸುವುದು ಶಾಸಕರನ್ನೇ. ಹಾಗಾಗಿ ಭಕ್ತರ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.
ತೆರವುಗೊಳಿಸಲಾದ ಹಳೆಯ ಕಟ್ಟಡಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದ ಆದೇಶವಿತ್ತು ಎಂದು ತಿಳಿಸಿದ ಶಾಸಕರು, ಸದರಿ ಹಳೆಯ ಕಟ್ಟಡವನ್ನು ತೆರವುಗೊಳಿಸಲು ನ್ಯಾಯಾಲಯವೇ ಆದೇಶ ನೀಡಿದೆ ಎಂದರು.
“ನಮಗೆ ಆ ಜಾಗದ ಮೇಲೆ ಯಾವುದೇ ವೈಯಕ್ತಿಕ ಆಸಕ್ತಿಯಿಲ್ಲ. ಕೇವಲ ದಾರಿಯ ಅಗಲೀಕರಣ ಮತ್ತು ಭಕ್ತರ ಅನುಕೂಲಕ್ಕಾಗಿ ಈ ಕೆಲಸ ಮಾಡಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು.
ಒಂದು ವರ್ಷದ ಹಿಂದೆಯೇ ನಗರಸಭೆಯು ನ್ಯಾಯಾಲಯದ ಆದೇಶದಂತೆ ನಿರಾಳ ಹೋಟೆಲ್ ಅನ್ನು ಸೀಸ್ ಮಾಡಿತ್ತು.
ಶಾಸಕ ಅಶೋಕ್ ಕುಮಾರ್ ರೈ ಮತ್ತು ಈಶ್ವರ ಭಟ್ ಅವರ ಮೇಲೆ ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ನಾವು ಯಾರಿಗೂ ಅನ್ಯಾಯ ಮಾಡಲು ಹೋಗಿಲ್ಲ. ನಮ್ಮ ಮೇಲೆ ಕೇಸು ಹಾಕಿದವರ ಮೇಲೆ ದೇವಸ್ಥಾನದ ಭಕ್ತಾದಿಗಳೇ ಸಾರ್ವಜನಿಕ ಕೇಸು ನೀಡುತ್ತಾರೆ. ಮಹಾಲಿಂಗೇಶ್ವರ ದೇವರು ಯಾವುದೇ ಸಮಸ್ಯೆಯನ್ನು ಎದುರಿಸಲು ನಮಗೆ ಶಕ್ತಿ ನೀಡುತ್ತಾನೆ,” ಎಂದರು.
ಅಂತಿಮವಾಗಿ, ಉಳ್ಳಾಲ್ತಿ ಅಮ್ಮನವರ ಭೇಟಿ ಸ್ಥಳವನ್ನು ದೇವಸ್ಥಾನಕ್ಕೆ ಬಿಟ್ಟುಕೊಡಬೇಕು ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಸರ್ವತೋಮುಖವಾಗಿ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಗುರಿ ಎಂದು ಅವರು ಪುನರುಚ್ಚರಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























