ತಿಪಟೂರು: ಗಾನಕೋಗಿಲೆ ಎಸ್. ಜಾನಕಿಯವರಿಗೆ 'ನುಡಿ ನಮನ': ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಸಾಮಗ್ರಿ ವಿತರಣೆ - Mahanayaka

ತಿಪಟೂರು: ಗಾನಕೋಗಿಲೆ ಎಸ್. ಜಾನಕಿಯವರಿಗೆ ‘ನುಡಿ ನಮನ’: ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಸಾಮಗ್ರಿ ವಿತರಣೆ

tipaturu
23/07/2026

ತಿಪಟೂರು: ಸಂಗೀತ ಕ್ಷೇತ್ರದಲ್ಲಿ ತಮ್ಮ ಸುಮಧುರ ಗಾಯನವನ್ನೇ ಉಸಿರಾಗಿಸಿಕೊಂಡು, ಕೋಟ್ಯಂತರ ಜನರ ಮನ ಗೆದ್ದಿದ್ದ ಗಾನಕೋಗಿಲೆ, ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ಅಮ್ಮನವರ ನೆನಪಿನಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಹಾಗೂ ‘ನುಡಿ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತಾಲೂಕಿನ ಮೀಸೆ ತಿಮ್ಮನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ, ಅಗಲಿದ ಗಾಯಕಿಯ ಸ್ಮರಣಾರ್ಥವಾಗಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಮಾದಿಹಳ್ಳಿ ಉಮೇಶ್, “ಕನ್ನಡ ಚಿತ್ರರಂಗ ಸೇರಿದಂತೆ ಸಂಗೀತ ಕ್ಷೇತ್ರದಲ್ಲಿ ಜಾನಕಮ್ಮನವರ ಸ್ವರ ಮಾಧುರ್ಯಕ್ಕೆ ಮನಸೋಲದವರೇ ಇಲ್ಲ. ಸುಮಾರು 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಅವರು, 30ಕ್ಕೂ ಹೆಚ್ಚು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಗಾಯನ ಸಂಯೋಜನೆ ಮಾಡುವ ಮೂಲಕ ಭಾರತೀಯ ಚಿತ್ರರಂಗದ ವರ್ಚಸ್ಸನ್ನು ಜಗತ್ತಿನಾದ್ಯಂತ ಹೆಚ್ಚಿಸಿದ್ದಾರೆ” ಎಂದು ಸ್ಮರಿಸಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷ ತೋಂಟರಾಧ್ಯ ಮಾತನಾಡಿ, “ನಮ್ಮ ಗ್ರಾಮೀಣ ಶಾಲೆಯನ್ನು ಗುರುತಿಸಿ, ಸಂಗೀತ ಲೋಕದ ಧ್ರುವತಾರೆ ಜಾನಕಮ್ಮನವರ ಹೆಸರಿನಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಶೈಕ್ಷಣಿಕ ಪರಿಕರ ವಿತರಿಸಿರುವುದು ಸಂಗೀತ ಲೋಕಕ್ಕೆ ಸಲ್ಲಿಸಿದ ಗೌರವವಾಗಿದೆ. 60 ವರ್ಷಗಳ ಸುದೀರ್ಘ ಸಂಗೀತ ಪಯಣದಲ್ಲಿ 4 ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ 33 ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅವರ ಅದ್ಭುತ ಕಂಠಕ್ಕೆ ಸರಿಸಾಟಿ ಇಲ್ಲ” ಎಂದರು.

ಹಿರಿಯ ಮುಖಂಡ ಭಾಸ್ಕರ್ ಮಾತನಾಡಿ, “ಕುಗ್ರಾಮದ ಮಕ್ಕಳನ್ನು ಗುರುತಿಸಿ ಎಸ್. ಜಾನಕಿ ಅಮ್ಮನವರ ಕೊಡುಗೆಯನ್ನು ನೆನಪಿಸುವ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಜಯಕರ್ನಾಟಕ ಜನಪರ ವೇದಿಕೆಯ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ. ತಾಲೂಕಿನಲ್ಲಿ ಈ ಸಂಘಟನೆಯು ನೂರಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಜಾನಕಮ್ಮನವರ ಹಾಡುಗಳು ಎಂದೆಂದಿಗೂ ಜನಪ್ರಿಯ ಹಾಗೂ ಅಜರಾಮರ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ, ಇತ್ತೀಚೆಗೆ ಅಗಲಿದ ಹಿರಿಯರಾದ ಶ್ರೀಮತಿ ಚನ್ನಮ್ಮ ದೇವೇಗೌಡ ಹಾಗೂ ‘ಅಮೃತವಾಣಿ’ ದಿನಪತ್ರಿಕೆಯ ಸಹ-ಸಂಪಾದಕಿ ಶ್ರೀಮತಿ ಕಮಲ ಗಂಗಾಹನುಮಯ್ಯನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಹಾಗೂ ಆಯೋಜಕ ಬಿ.ಟಿ. ಕುಮಾರ್, ಮುಖಂಡ ಆರ್.ವಿ. ನಟರಾಜು, ಮಾನ್ಯಶ್ರೀ ಕೋಕನೆಟ್ನ ಧನಂಜಯ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಪಾರ್ವತಿಬಾಯಿ, ಲಕ್ಷ್ಮಣ್ ನಾಯಕ್, ಶಾಲೆಯ ಮುಖ್ಯ ಶಿಕ್ಷಕ ಬುದ್ಧ ಪ್ರಸಾದ್, ಸಹ ಶಿಕ್ಷಕಿ ಶೋಭಕುಮಾರಿ, ಹಿರಿಯ ವಿದ್ಯಾರ್ಥಿ ಸಂಘದ ಮೋಹನ್, ಶಾಲಾ ಜಮೀನಿನ ದಾನಿ ಗಿರಿಜಮ್ಮ ಸೇರಿದಂತೆ ಗ್ರಾಮಸ್ಥರಾದ ರಾಮನಾಯಕ್, ವಿನಯ್, ಮಲ್ಲಿಕಾರ್ಜುನಯ್ಯ, ಪವನ್, ರವಿ, ಆನಂದಕುಮಾರ್, ಪೂಜಾ, ರೇಖಾ, ಅನಿತಾ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಕುಪ್ಪಾಳು ಧರಣೇಶ್


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ