ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಸಿಟ್ಟು: 20 ದಿನದ ಮೊಮ್ಮಗಳನ್ನೇ ಉಸಿರುಗಟ್ಟಿಸಿ ಕೊಂದ ಅಜ್ಜಿ!
ಭೋಪಾಲ್: ಗಂಡು ಮಗು ಜನಿಸಲಿಲ್ಲ ಎಂಬ ಕಾರಣಕ್ಕೆ 20 ದಿನದ ಹಸುಗೂಸನ್ನು ಸ್ವಂತಜ್ಜಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಮಧ್ಯಪ್ರದೇಶದ ಟಿಕಮ್ಗಢ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ರೇಖಾ (60) ಎಂಬ ಮಹಿಳೆಯನ್ನು ಪಾಲೇರಾ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಟಿಕಮ್ಗಢ್ ಜಿಲ್ಲೆಯ ‘ಬನ್ನೆ ಬುಜುರ್ಗ್’ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಪೋಖನ್ ಎಂಬ ಮಹಿಳೆ 20 ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇವರ ಪತಿ ಧನಿರಾಮ್ ದೆಹಲಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಪೋಖನ್ ಹೆಣ್ಣು ಮಗುವಿಗೆ ಜನ್ಮ ನೀಡಿದಂದಿನಿಂದ ಅಜ್ಜಿ ರೇಖಾ ಅಸಮಾಧಾನಗೊಂಡಿದ್ದರು. “ಗಂಡು ಮಗುವಿಗೆ ಜನ್ಮ ನೀಡಲಿಲ್ಲ” ಎಂದು ಸೊಸೆಗೆ ನಿರಂತರವಾಗಿ ಕಿರುಕುಳ ಹಾಗೂ ಟೀಕೆ ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರ ಮಾಹಿತಿಯಂತೆ, ರಾತ್ರಿ ಸುಮಾರು 3 ಗಂಟೆಯ ಸುಮಾರಿಗೆ ತಾಯಿ ಮತ್ತು ಮಗು ನಿದ್ರಿಸುತ್ತಿದ್ದಾಗ, ಅಜ್ಜಿ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಹೋಗಿ ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ಮಗುವಿನ ಮೃತದೇಹವನ್ನು ತಾಯಿಯ ಪಕ್ಕದಲ್ಲೇ ತಂದಿಟ್ಟಿದ್ದಾಳೆ.
ಬೆಳಿಗ್ಗೆ ತಾಯಿ ಎದ್ದು ನೋಡಿದಾಗ ಮಗು ಸ್ಪಂದಿಸದಿರುವುದನ್ನು ಕಂಡು ಆತಂಕಗೊಂಡು ಕಿರುಚಾಡಿದ್ದಾಳೆ. ಈ ವೇಳೆ ಅಜ್ಜಿ ಮಗುವಿನದ್ದು ಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾಳೆ ಹಾಗೂ ಸ್ಥಳೀಯ ಮೂಢನಂಬಿಕೆಯ ಆಚರಣೆಗಳನ್ನು ಮಾಡಲು ಮುಂದಾಗಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕೆ ಪಾಲೇರಾ ಠಾಣೆಯ ಪೊಲೀಸರು ಮಗುವಿನ ಕತ್ತಿನ ಭಾಗದಲ್ಲಿದ್ದ ಗುರುತುಗಳನ್ನು ಗಮನಿಸಿ ಶಂಕೆ ವ್ಯಕ್ತಪಡಿಸಿದ್ದಾರೆ. ತಾಯಿ ಮತ್ತು ಅಜ್ಜಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಂದಿದೆ.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಅಜ್ಜಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























