ಸಚಿವರ ಮನೆಯಲ್ಲಿ ಸಭೆ ನಡೆಸಲು ಸಾಧ್ಯವಿಲ್ಲ: ಕೇಂದ್ರಕ್ಕೆ CJP ತಿರುಗೇಟು; ಮೌನವೃತ ಆರಂಭಿಸಿದ ಅಣ್ಣಾ ಹಜಾರೆ,  ಜುಲೈ 24ಕ್ಕೆ ದೇಶವ್ಯಾಪಿ ಪ್ರತಿಭಟನೆ - Mahanayaka

ಸಚಿವರ ಮನೆಯಲ್ಲಿ ಸಭೆ ನಡೆಸಲು ಸಾಧ್ಯವಿಲ್ಲ: ಕೇಂದ್ರಕ್ಕೆ CJP ತಿರುಗೇಟು; ಮೌನವೃತ ಆರಂಭಿಸಿದ ಅಣ್ಣಾ ಹಜಾರೆ,  ಜುಲೈ 24ಕ್ಕೆ ದೇಶವ್ಯಾಪಿ ಪ್ರತಿಭಟನೆ

cjp protest
23/07/2026

ನವದೆಹಲಿ: ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡುವಿನ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದೆ. ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಕಡೆಯಿಂದ ಮಾತುಕತೆಗೆ ಆಹ್ವಾನ ಬಂದಿದ್ದರೂ, ಚರ್ಚೆ ನಡೆಯಬೇಕಾದ ಸ್ಥಳದ ವಿಚಾರದಲ್ಲಿ ಎರಡೂ ಕಡೆಯವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಸಂಸತ್ತಿನ ಕಲಾಪಗಳ ಮೇಲೆಯೂ ಈ ಪ್ರತಿಭಟನೆಯ ಬಿಸಿ ತಟ್ಟಿದ್ದು, ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷಾ ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ (ವಿಶೇಷ ಕ್ಷಿಪ್ರ ನ್ಯಾಯಾಲಯ) ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಕೇಂದ್ರದ ಆಹ್ವಾನ, CJP ತಿರಸ್ಕಾರ:

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಪ್ರತಿಭಟನಾಕಾರರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ನಡ್ಡಾ ಅವರ ನಿವಾಸ ಅಥವಾ ಕಚೇರಿಯಲ್ಲಿ ಮುಕ್ತವಾಗಿ ಚರ್ಚಿಸಲು ಸಿದ್ಧ ಎಂದು ಸರ್ಕಾರ ಹೇಳಿದೆ. ಆದರೆ, ಸಚಿವರ ನಿವಾಸದಲ್ಲಿ ಮಾತುಕತೆ ನಡೆಸಲು CJP ವಕ್ತಾರರು ನಿರಾಕರಿಸಿದ್ದಾರೆ.

“ಮಾತುಕತೆಗೆ ನಮಗೇನೂ ಅಭ್ಯಂತರವಿಲ್ಲ, ಆದರೆ ಸಚಿವರ ಮನೆಯಲ್ಲಿ ಸಭೆ ನಡೆಯುವುದಿಲ್ಲ. ಚರ್ಚೆಯು ಜಂತರ್ ಮಂತರ್‌ನಲ್ಲಿ ಅಥವಾ ‘ಕಾನ್‌ ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ದಂತಹ ತಟಸ್ಥ ಸ್ಥಳದಲ್ಲಿ (Neutral Venue) ನಡೆಯಬೇಕು. ಕೇವಲ ಬಾಯಿ ಮಾತಿನ ಭರವಸೆಗಳ ಬದಲಿಗೆ ನಿರ್ದಿಷ್ಟ ಪರಿಹಾರ/ಫಲಿತಾಂಶ ಸಿಗಬೇಕು” ಎಂದು CJP ವಕ್ತಾರರು ಪಟ್ಟು ಹಿಡಿದಿದ್ದಾರೆ.

ಜುಲೈ 24ಕ್ಕೆ ದೇಶವ್ಯಾಪಿ ಪ್ರತಿಭಟನೆ:

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವ CJP, ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದು, ಜುಲೈ 24ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.

ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಪ್ರಧಾನಿ ಮೋದಿ ಘೋಷಣೆ:

ವಿದ್ಯಾರ್ಥಿಗಳ ಹಿತರಕ್ಷಣೆ ಅತ್ಯಂತ ಮುಖ್ಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ವಿಚಾರಣೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಾತರಿಪಡಿಸಲು ‘ಫಾಸ್ಟ್ ಟ್ರ್ಯಾಕ್’ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಅಣ್ಣಾ ಹಜಾರೆ ಮೌನ ವ್ರತ ಪ್ರತಿಭಟನೆ:

ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ (ಅಹಮದ್‌ ನಗರ) ಮೌನ ವ್ರತ (ಮೌನ್ ಆಂದೋಲನ) ಪ್ರಾರಂಭಿಸಿದ್ದಾರೆ.

ಸಂಸತ್ತಿನಲ್ಲಿ ಕೋಲಾಹಲ:

ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ವಿರೋಧ ಪಕ್ಷಗಳ ತೀವ್ರ ಗೊಂದಲ, ಪ್ರತಿಭಟನೆಯಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಪದೇ ಪದೇ ಮುಂದೂಡಲ್ಪಟ್ಟವು. ಶಿಕ್ಷಣ ಸಚಿವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದರೆ, ಯಾವುದೇ ಪೂರ್ವಾಪೇಕ್ಷಿತ ಷರತ್ತುಗಳಿಲ್ಲದೆ ಚರ್ಚೆಗೆ ಸಿದ್ಧ ಎಂದು ಸರ್ಕಾರ ತಿಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ