ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 46 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶ - Mahanayaka
12:10 PM Wednesday 22 - April 2026

ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 46 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶ

20/04/2026

ಮಂಗಳೂರು: ನಗರದ ಜೆಪ್ಪಿನಮೊಗರು ಬಳಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪೆರ್ಮನ್ನೂರು ಗ್ರಾಮದ ಪಿಲಾರು ಹೊಸಗದ್ದೆ ನಿವಾಸಿ ಫರ್ವೇಝ್ ಯಾನೆ ದಾವೂದ್ ಫರ್ವೇಝ್ (40) ಮತ್ತು ಪಿಲಾರಿನ ನಝರತ್ ಅಲಿ (37) ಎಂದು ಗುರುತಿಸಲಾಗಿದೆ.

ಆರೋಪಿಗಳು ಬೈಕ್‌ ನಲ್ಲಿ ಬೃಹತ್ ಪ್ರಮಾಣದ ಎಂಡಿಎಂಎ (MDMA) ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಂದಾಜು 46,50,000 ರೂ. ಮೌಲ್ಯದ 465.8 ಗ್ರಾಂ ತೂಕದ ಎಂಡಿಎಂಎ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ತನಿಖೆಯ ಪ್ರಕಾರ, ಪ್ರಮುಖ ಆರೋಪಿ ಫರ್ವೇಝ್ ಹೊರ ಜಿಲ್ಲೆಗಳಿಂದ ಮಾದಕ ವಸ್ತುವನ್ನು ತಂದು ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ. ಈತನ ವಿರುದ್ಧ ಈಗಾಗಲೇ ಪಾಂಡೇಶ್ವರ, ಬಂದರು, ವಾಮಂಜೂರು, ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ನಝರತ್ ಅಲಿ ಈ ವ್ಯವಹಾರಕ್ಕೆ ಸಹಕರಿಸುತ್ತಿದ್ದ ಎಂದು ತಿಳಿದುಬಂದಿದೆ.

ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ