ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ; ಚೂರಿಯಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ - Mahanayaka

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ; ಚೂರಿಯಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ

belthangady attempted kidnapping
09/02/2026

ಬೆಳ್ತಂಗಡಿ: ಸ್ಕೂಟರ್‌ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿ ಬಂದ ಅಪರಿಚಿತರು ಅಪಹರಿಸಲು ಯತ್ನಿಸಿದ ಆಘಾತಕಾರಿ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಘಟನೆಯ ವಿವರ: ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿಯಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸೋಮವಾರ (ಫೆಬ್ರವರಿ 9) ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಮನೆಯಿಂದ ಸ್ಕೂಟರ್‌ ನಲ್ಲಿ ಸಂತೆಕಟ್ಟೆಗೆ ಬಸ್ ಹಿಡಿಯಲು ತೆರಳುತ್ತಿದ್ದರು. ಈ ವೇಳೆ ನಂಬರ್ ಪ್ಲೇಟ್‌ ಗೆ ಬಟ್ಟೆ ಕಟ್ಟಿದ್ದ ಕಾರಿನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಆಕೆಯ ಸ್ಕೂಟರ್‌ ಗೆ ಅಡ್ಡಗಟ್ಟಿದ್ದಾರೆ. ಬಳಿಕ ಬಾಲಕಿಯನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.

ತಪ್ಪಿಸಿಕೊಂಡ ಬಾಲಕಿ: ದುಷ್ಕರ್ಮಿಗಳ ಕೃತ್ಯದಿಂದ ಬೆಚ್ಚಿಬಿದ್ದ ವಿದ್ಯಾರ್ಥಿನಿ ಜೋರಾಗಿ ಕೂಗಾಡಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇದೇ ಸಮಯದಲ್ಲಿ ಹಿಂಭಾಗದಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಭಯಗೊಂಡು, ಬಾಲಕಿಯ ಕೈ ಹಾಗೂ ಬೆರಳಿಗೆ ಚೂರಿಯಿಂದ ಚುಚ್ಚಿ ಗಾಯಗೊಳಿಸಿ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಆಸ್ಪತ್ರೆಗೆ ದಾಖಲು: ಹಲ್ಲೆಯಿಂದ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣವೇ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ