ಪ್ರಧಾನಿ ಮೋದಿ ಮಾಸ್ಕ್ ಧರಿಸಿ ಮೊಬೈಲ್ ಶಾಪ್ ದರೋಡೆ ಮಾಡಿದ ಖದೀಮ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಭಿಲ್ವಾರಾ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕರೆಡಾ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಮೊಬೈಲ್ ಶಾಪ್ ಒಂದರಲ್ಲಿ ವಿಚಿತ್ರ ಹಾಗೂ ಆಘಾತಕಾರಿ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ (ಮಾಸ್ಕ್) ಧರಿಸಿ ಬಂದ ಕಳ್ಳನೊಬ್ಬ ಮೊಬೈಲ್ ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದಾನೆ.
ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಕಳ್ಳರು ಅಂಗಡಿಯಿಂದ ಸುಮಾರು 4 ರಿಂದ 5 ಲಕ್ಷ ರೂಪಾಯಿ ಮೌಲ್ಯದ 35 ರಿಂದ 40 ಸ್ಮಾರ್ಟ್‌ಫೋನ್ ಗಳನ್ನು ದೋಚಿದ್ದಾರೆ. ಮಂಗಳವಾರ ಮುಂಜಾನೆ ಅಂಗಡಿ ಮಾಲೀಕ ಲಕ್ಷ್ಮಣ್ ಸೇನ್ ಅವರು ಎಂದಿನಂತೆ ವ್ಯಾಪಾರಕ್ಕಾಗಿ ಶಾಪನ್ನು ತೆರೆದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ ದುಬಾರಿ ಮೊಬೈಲ್ ಫೋನ್ ಗಳ ಬಾಕ್ಸ್‌ಗಳು ಖಾಲಿಯಾಗಿ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಅವರು ದಿಗ್ಭ್ರಮೆಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕರೆಡಾ ಪೊಲೀಸ್ ಠಾಣಾಧಿಕಾರಿ ಪುರನ್ ಮಲ್ ಮೀನಾ ಅವರು ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಳ್ಳರ ಗ್ಯಾಂಗ್ ನಲ್ಲಿದ್ದ ಓರ್ವ ಆರೋಪಿ ಪ್ರಧಾನಿ ಮೋದಿ ಅವರ ಮಾಸ್ಕ್ ಧರಿಸಿ ಕಳ್ಳತನ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಇದೇ ಕಳ್ಳರ ಗ್ಯಾಂಗ್ ಅದೇ ರಾತ್ರಿ ಬೀಜ್ ಗೋದಾಮ್ ಚೌರಸ್ತಾ ಬಳಿ ಇರುವ ಮತ್ತೊಂದು ಮೊಬೈಲ್ ಅಂಗಡಿಯ ಶಟರ್ ಲಾಕ್ ಮುರಿದು ಒಳನುಗ್ಗಲು ಯತ್ನಿಸಿದೆ. ಆದರೆ ಆ ಪ್ರಯತ್ನ ವಿಫಲವಾಗಿದೆ. ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲೂ ಸಹ ಪ್ರಧಾನಿ ಮೋದಿ ಮಾಸ್ಕ್ ಧರಿಸಿದ್ದ ಅದೇ ಆರೋಪಿ ಪತ್ತೆಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ಕರೆಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಪುರನ್ ಮಲ್ ಮೀನಾ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























