ರಾಮಮಂದಿರ ದೇಣಿಗೆ ಕಳ್ಳತನ: ಆರೋಪಿಗಳು ಮುಸ್ಲಿಮರಾಗಿದ್ದರೆ ಎನ್ ಕೌಂಟರ್, ಬುಲ್ಡೋಜರ್ ದಾಳಿ ನಡೆಯುತ್ತಿತ್ತು: ಓವೈಸಿ ತೀವ್ರ ವಾಗ್ದಾಳಿ - Mahanayaka

ರಾಮಮಂದಿರ ದೇಣಿಗೆ ಕಳ್ಳತನ: ಆರೋಪಿಗಳು ಮುಸ್ಲಿಮರಾಗಿದ್ದರೆ ಎನ್ ಕೌಂಟರ್, ಬುಲ್ಡೋಜರ್ ದಾಳಿ ನಡೆಯುತ್ತಿತ್ತು: ಓವೈಸಿ ತೀವ್ರ ವಾಗ್ದಾಳಿ

asaduddin owaisi
30/06/2026

ಬಿಜ್ನೋರ್: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಎಐಎಂಐಎಂ (AIMIM) ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಜಾರಿಯಲ್ಲಿ ಯುಪಿ ಸರ್ಕಾರವು ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್‌ ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, “ಒಂದು ವೇಳೆ ರಾಮಮಂದಿರ ಟ್ರಸ್ಟ್‌ ನಲ್ಲಿ ಯಾರಾದರೂ ಮುಸ್ಲಿಂ ಸದಸ್ಯರಿದ್ದು, ಇಂತಹ ಹಗರಣ ಬೆಳಕಿಗೆ ಬಂದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ತಕ್ಷಣವೇ ಆ ವ್ಯಕ್ತಿಯ ಎನ್‌ ಕೌಂಟರ್ ಆಗುತ್ತಿತ್ತು ಮತ್ತು ಆತನ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗುತ್ತಿತ್ತು,” ಎಂದು ವ್ಯಂಗ್ಯವಾಡಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದ್ದರೂ, ಯಾರ ಮನೆಯನ್ನೂ ಧ್ವಂಸಗೊಳಿಸಿಲ್ಲ ಎಂದು ಬೆಟ್ಟು ಮಾಡಿದ ಅವರು, ವ್ಯಕ್ತಿಗಳ ಗುರುತನ್ನು ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದರು.

ಇದೇ ವೇಳೆ ಕಾನೂನು ಸುವ್ಯವಸ್ಥೆ ವಿಚಾರವಾಗಿ ರಾಜ್ಯ ಸರ್ಕಾರದ ನೀತಿಗಳನ್ನು ಟೀಕಿಸಿದ ಓವೈಸಿ, ಮುಸ್ಲಿಮರಿಗೆ ರಾಜಕೀಯ ನಾಯಕತ್ವವನ್ನು ನಿರಾಕರಿಸಲಾಗುತ್ತಿದೆ ಮತ್ತು ಅವರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಇತರೆ ರಾಜಕೀಯ ಪಕ್ಷಗಳ ವಿರುದ್ಧವೂ ಕಿಡಿಕಾರಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಐಎಂಐಎಂ ಯಾವುದೇ ರಾಜಕೀಯ ಶಕ್ತಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದೆ ಎಂದು ತಿಳಿಸಿದ ಅವರು, ಮುಸ್ಲಿಂ ಸಮುದಾಯವು ರಾಜಕೀಯವಾಗಿ ಜಾಗೃತರಾಗಬೇಕು ಮತ್ತು ಭವಿಷ್ಯದ ಪೀಳಿಗೆಗಾಗಿ ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ