ಇರಾನ್ ನ ಸುಪ್ರೀಂ ನಾಯಕ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದಿಂದ ಭಾಗವಹಿಸಲಿದ್ದಾರೆ ಇಬ್ಬರು ಗಣ್ಯರು - Mahanayaka

ಇರಾನ್ ನ ಸುಪ್ರೀಂ ನಾಯಕ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದಿಂದ ಭಾಗವಹಿಸಲಿದ್ದಾರೆ ಇಬ್ಬರು ಗಣ್ಯರು

Ayatollah Khamenei.jpg
29/06/2026

ನವದೆಹಲಿ: ಇತ್ತೀಚೆಗೆ ಹತ್ಯೆಗೀಡಾದ ಇರಾನ್ ನ ಸುಪ್ರೀಂ ನಾಯಕ ಅಯತೊಲ್ಲಾ ಸಯ್ಯದ್ ಆಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪರವಾಗಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಅವರು ಭಾಗವಹಿಸಲಿದ್ದಾರೆ ಎಂದು ಇರಾನಿನ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಮಿಲಿಟರಿ ದಾಳಿಯಲ್ಲಿ ಸಾವನ್ನಪ್ಪಿದ ಇರಾನ್ ಸುಪ್ರೀಂ ನಾಯಕನ ಅಂತ್ಯಕ್ರಿಯೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಸದ್ಯ ಭಾರತದ ಪರವಾಗಿ ಈ ಇಬ್ಬರು ಗಣ್ಯರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಇರಾನ್ ಮಾಧ್ಯಮಗಳ ಪ್ರಕಾರ, ಸುಪ್ರೀಂ ನಾಯಕನ ಅಂತ್ಯಕ್ರಿಯೆಯ ವಿಧಿವಿಧಾನಗಳು ಜುಲೈ 4 ರಿಂದ ಆರಂಭವಾಗಲಿವೆ.

ಜುಲೈ 4: ದಕ್ಷಿಣ ಟೆಹ್ರಾನ್ನ ಪವಿತ್ರ ನಗರವಾದ ‘ಕೋಮ್’ನಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಜುಲೈ 7: ಕೋಮ್ ನಗರದ ಆಚರಣೆಗಳು ಮುಕ್ತಾಯಗೊಳ್ಳಲಿವೆ.

ಜುಲೈ 9: ಖಮೇನಿ ಅವರ ಹುಟ್ಟೂರಾದ ಆಗ್ನೇಯ ಇರಾನ್ನ ‘ಮಶಾದ್’ನಲ್ಲಿ ಅಂತಿಮ ಅಂತ್ಯಕ್ರಿಯೆ ನೆರವೇರಲಿದೆ.


Provided by
Provided by

ಸಾಮಾನ್ಯವಾಗಿ ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಮೃತದೇಹವನ್ನು 24 ಗಂಟೆಯೊಳಗೆ ದಫನ್ ಮಾಡಬೇಕಾಗಿದ್ದರೂ, ಯುದ್ಧದಂತಹ ವಿಶೇಷ ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ನೀಡಲಾಗುತ್ತದೆ.

20 ಮಿಲಿಯನ್ ಜನ ಸೇರುವ ನಿರೀಕ್ಷೆ:

ಟೆಹ್ರಾನ್, ಮಶಾದ್ ಮತ್ತು ಕೋಮ್ ನಗರಗಳಲ್ಲಿ ನಡೆಯಲಿರುವ ಈ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಸುಮಾರು 2 ಕೋಟಿ (20 ಮಿಲಿಯನ್) ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು 1989ರಲ್ಲಿ ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಅಂತ್ಯಕ್ರಿಯೆಗೆ ಬಂದಿದ್ದ 10 ಮಿಲಿಯನ್ ಜನರ ದಾಖಲೆಯನ್ನು ಮೀರಿಸುವ ಸಾಧ್ಯತೆಯಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಸೇರಿದಂತೆ ಹಲವು ಜಾಗತಿಕ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಖಮೇನಿ ಹತ್ಯೆಯ ಬೆನ್ನಲ್ಲೇ ಅವರ 56 ವರ್ಷದ ಪುತ್ರ ಮೊಜ್ತಾಬಾ ಹೊಸೈನಿ ಖಮೇನಿ ಇರಾನ್ನ ಹೊಸ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಅವರ ಪ್ರಸ್ತುತ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳಿದ್ದು, ಅವರು ಸದ್ಯ ಕೋಮಾದಲ್ಲಿದ್ದಾರೆ ಎಂದು ಅಮೆರಿಕದ ಪ್ರಮುಖ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆಗಳು ಆರಂಭವಾಗಿರುವ ಮಧ್ಯೆಯೇ ಈ ಅಂತ್ಯಕ್ರಿಯೆಯ ವೇಳಾಪಟ್ಟಿ ಅಧಿಕೃತಗೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ