ಶಿರ್ವ: ಮಹಿಳೆಯ ಚಿನ್ನದ ಸರ ಸುಲಿಗೆ; ಕೇವಲ ಮೂರು ಗಂಟೆಯೊಳಗೆ ಮೂವರು ಆರೋಪಿಗಳ ಬಂಧನ
ಉಡುಪಿ: ಜಿಲ್ಲೆಯ ಶಿರ್ವ ಸಮೀಪದ ಕುರ್ಕಾಲು ಗ್ರಾಮದ ಶಂಕರಪುರದಲ್ಲಿ ನಡೆದ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಪೊಲೀಸರು ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 21ರ ಶನಿವಾರ ಬೆಳಿಗ್ಗೆ, ಶಂಕರಪುರದ ಹೆಲೆನ್ ಡಿಸೋಜ (69) ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಮಲ್ಲಿಗೆ ಹೂವು ಕಟ್ಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಹಿಂದೆ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಆನಂದ್ ಎಂಬಾತ ತನ್ನಿಬ್ಬರು ಸ್ನೇಹಿತರೊಂದಿಗೆ ಬಾಡಿಗೆ ಕೋಣೆಯ ವಿಚಾರಿಸಲು ಬಂದಿದ್ದನು. ಆನಂತರ ಮೊಬೈಲ್ ಸಂಖ್ಯೆ ಕೇಳುವ ನೆಪದಲ್ಲಿ ಹೆಲೆನ್ ಅವರ ಹತ್ತಿರ ಬಂದ ಆರೋಪಿ, ಅವರ ಕುತ್ತಿಗೆಯಲ್ಲಿದ್ದ ಅಂದಾಜು 3.50 ಲಕ್ಷ ರೂಪಾಯಿ ಮೌಲ್ಯದ 28 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪಲಾಯನ ಮಾಡಿದ್ದನು. ಇದನ್ನು ತಡೆಯಲು ಬಂದ ಹೆಲೆನ್ ಅವರ ಅಕ್ಕ ತೆರಜ ಎಂಬವರನ್ನು ತಳ್ಳಿ ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗಿದ್ದರು.
ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಶಿರ್ವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳು ಪಲ್ಸರ್ ಬೈಕ್‌ನಲ್ಲಿ ಹೋಗಿರುವುದನ್ನು ಖಚಿತಪಡಿಸಿಕೊಂಡರು. ತಕ್ಷಣವೇ ಜಿಲ್ಲೆಯಾದ್ಯಂತ ನಾಕಾಬಂಧಿ ಹೇರಿ ಎಚ್ಚರಿಕೆ ನೀಡಲಾಯಿತು. ಇದರ ಫಲವಾಗಿ, ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬೈಂದೂರು ಪೊಲೀಸರು ಶಿರೂರು ಚೆಕ್‌ಪೋಸ್ಟ್ ಬಳಿ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು. ಬಂಧಿತರಿಂದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























