ಎಪ್ಸ್ಟೀನ್ ಫೈಲ್ಸ್ ಮತ್ತು ಅದಾನಿ ಪ್ರಕರಣದ ಒತ್ತಡಕ್ಕೆ ಮಣಿದು ಮೋದಿಯವರು ದೇಶವನ್ನು ಮಾರಿದ್ದಾರೆ: ರಾಹುಲ್ ಗಾಂಧಿ ಗಂಭೀರ ಆರೋಪ
ಭೋಪಾಲ್: ಅಮೆರಿಕದೊಂದಿಗೆ ಮಾಡಿಕೊಳ್ಳಲಾದ ಇತ್ತೀಚಿನ ವ್ಯಾಪಾರ ಒಪ್ಪಂದದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಫೈಲ್ ಗಳು ಮತ್ತು ಅದಾನಿ ವಿರುದ್ಧದ ಅಮೆರಿಕದ ಕ್ರಿಮಿನಲ್ ಪ್ರಕರಣದ ಒತ್ತಡಕ್ಕೆ ಮಣಿದು ಪ್ರಧಾನಿಯವರು ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಭೋಪಾಲ್‌ನಲ್ಲಿ ನಡೆದ ‘ಕಿಸಾನ್ ಮಹಾಚೌಪಾಲ್’ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ಮೋದಿ ಅವರು ಕೇಂದ್ರ ಸಚಿವ ಸಂಪುಟದ (Cabinet) ಸಮಾಲೋಚನೆ ಇಲ್ಲದೆಯೇ ಅವಸರದಲ್ಲಿ ಮಾಡಿಕೊಂಡಿದ್ದಾರೆ. ಕೃಷಿ, ದತ್ತಾಂಶ (Data) ಮತ್ತು ಜವಳಿ ಕ್ಷೇತ್ರಗಳಲ್ಲಿ ಅಮೆರಿಕಕ್ಕೆ ಶರಣಾಗುವ ಮೂಲಕ ದೇಶದ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ರಾಹುಲ್ ಕಿಡಿಕಾರಿದ್ದಾರೆ.
ಎಪ್ಸ್ಟೀನ್ ಫೈಲ್ಸ್ ಮತ್ತು ಬ್ಲ್ಯಾಕ್‌ಮೇಲ್: ಅಮೆರಿಕದಲ್ಲಿ ಇನ್ನೂ ಬಿಡುಗಡೆಯಾಗದ ಲಕ್ಷಾಂತರ ‘ಎಪ್ಸ್ಟೀನ್ ಫೈಲ್ಸ್’ಗಳಲ್ಲಿ ಪ್ರಮುಖ ಭಾರತೀಯರ ಹೆಸರುಗಳಿವೆ. ಅನಿಲ್ ಅಂಬಾನಿ ಮತ್ತು ಹರ್ದೀಪ್ ಪುರಿ ಅವರ ಹೆಸರುಗಳು ಅದರಲ್ಲಿವೆ ಎಂದು ಆರೋಪಿಸಿದ ರಾಹುಲ್, ಈ ಫೈಲ್ ಗಳನ್ನು ಬಳಸಿ ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದೆ ಎಂದು ಹೇಳಿದರು.
ಅದಾನಿ ಪ್ರಕರಣ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವು ನೇರವಾಗಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡಿದೆ. ಬಂಧನದ ಭೀತಿಯಿಂದಾಗಿ ಅದಾನಿ ವಿದೇಶಕ್ಕೆ ಹೋಗಲು ಹೆದರುತ್ತಿದ್ದಾರೆ ಮತ್ತು ಈ ಪ್ರಕರಣದಿಂದ ಪಾರಾಗಲು ಮೋದಿ ಅವರು ಅಮೆರಿಕದ ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡಿದ್ದಾರೆ ಎಂದು ಅವರು ದೂರಿದರು.
ರೈತರಿಗೆ ಮಾರಕ: ಸೋಯಾಬೀನ್, ಹತ್ತಿ, ಮೆಕ್ಕೆಜೋಳ ಮತ್ತು ಬೇಳೆಕಾಳುಗಳ ಭಾರತೀಯ ಮಾರುಕಟ್ಟೆಯನ್ನು ಅಮೆರಿಕಕ್ಕೆ ಮುಕ್ತಗೊಳಿಸುವ ಮೂಲಕ ಭಾರತೀಯ ರೈತರ ಬೆನ್ನಿಗೆ ಮೋದಿ ಅವರು ಚೂರಿ ಹಾಕಿದ್ದಾರೆ. ಈ ಒಪ್ಪಂದದಿಂದ ಅಮೆರಿಕದ ಅಗ್ಗದ ಕೃಷಿ ಉತ್ಪನ್ನಗಳು ಭಾರತಕ್ಕೆ ಲಗ್ಗೆ ಇಡಲಿವೆ, ಇದರಿಂದ ನಮ್ಮ ರೈತರು ಬೀದಿಗೆ ಬರಲಿದ್ದಾರೆ ಎಂದು ಎಚ್ಚರಿಸಿದರು.
ದತ್ತಾಂಶದ ಭದ್ರತೆ: 21ನೇ ಶತಮಾನದ ಅತ್ಯಂತ ಮೌಲ್ಯಯುತವಾದ ಭಾರತೀಯರ ದತ್ತಾಂಶವನ್ನು (Data) ಯಾವುದೇ ಅಡೆತಡೆಯಿಲ್ಲದೆ ಅಮೆರಿಕದ ಕಂಪನಿಗಳಿಗೆ ಹಸ್ತಾಂತರಿಸಲು ಈ ಒಪ್ಪಂದದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ರಾಹುಲ್ ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಷ್ಟ್ರೀಯ ಹಿತಾಸಕ್ತಿಯನ್ನು ಅಡವಿಟ್ಟು ಮಾಡುವ ಯಾವುದೇ ವ್ಯಾಪಾರ ಒಪ್ಪಂದವನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























