'ವಂದೇ ಮಾತರಂ' ಗೀತೆ ನುಡಿಸುವಾಗ ಅಡ್ಡಿ ಆರೋಪ: ಸೋನಿಯಾ ಗಾಂಧಿ, ರಾಹುಲ್ ವಿರುದ್ಧದ ದೂರು ದೆಹಲಿ ಪೊಲೀಸರಿಂದ ಪರಿಶೀಲನೆ - Mahanayaka
12:17 AM Tuesday 8 - September 2026

‘ವಂದೇ ಮಾತರಂ’ ಗೀತೆ ನುಡಿಸುವಾಗ ಅಡ್ಡಿ ಆರೋಪ: ಸೋನಿಯಾ ಗಾಂಧಿ, ರಾಹುಲ್ ವಿರುದ್ಧದ ದೂರು ದೆಹಲಿ ಪೊಲೀಸರಿಂದ ಪರಿಶೀಲನೆ

vandemataram.jpg
17/08/2026

ನವದೆಹಲಿ: ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಹಾಡುವಾಗ ಅಡ್ಡಿಪಡಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಕುರಿತು ದೆಹಲಿ ಪೊಲೀಸರು ಪರಿಶೀಲನೆ (ವಿಚಾರಣೆ) ನಡೆಸುತ್ತಿದ್ದಾರೆ.

ಆಗಸ್ಟ್ 15 ರಂದು ದೆಹಲಿಯ ಎಐಸಿಸಿ (AICC) ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಕೀಲ ಶುಭ್ ಶರ್ಮಾ ಮತ್ತು ವಕೀಲ ಕುನಾಲ್ ವಿನಾಯಕ್ ಅವರು ಐಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಂದೇ ಮಾತರಂ ಗೀತೆ ನುಡಿಸಲಾಗುತ್ತಿದ್ದಾಗ ಸೋನಿಯಾ ಗಾಂಧಿ ಅವರು ಗೀತೆಯನ್ನು ಮುಂದುವರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವ ರೀತಿಯಲ್ಲಿ ಸನ್ನೆಗಳು ಹಾಗೂ ಸಂವಹನ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಷ್ಟ್ರೀಯ ಗೀತೆ ಗಾಯನದ ಸಮಯದಲ್ಲಿ ರಾಹುಲ್ ಗಾಂಧಿ ಅವರು, “ನಾವು ವಂದೇ ಮಾತರಂ ಹಾಡುತ್ತಿಲ್ಲ” ಎಂದು ಹೇಳಿದ್ದು ಕೇಳಿಬಂದಿದೆ ಎಂದು ದೂರುದಾರರು ಪ್ರತಿಪಾದಿಸಿದ್ದಾರೆ. ದೂರುದಾರರು ವೀಡಿಯೊ ತುಣುಕುಗಳು ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿ ಈ ದೂರು ನೀಡಿದ್ದು, ಸರಿಯಾದ ಕಾನೂನು ಪ್ರಕ್ರಿಯೆಯಡಿ ಎಫ್ಐಆರ್ (FIR) ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.

ದೆಹಲಿ ಪೊಲೀಸರು ನೀಡಿರುವ ಮಾಹಿತಿಯಂತೆ, ಪ್ರಸ್ತುತ ಈ ದೂರಿನ ಪ್ರಾಥಮಿಕ ಪರಿಶೀಲನೆ ಮಾತ್ರ ನಡೆಯುತ್ತಿದ್ದು, ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ವಿರುದ್ಧ ಇದುವರೆಗೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ದೂರಿನಲ್ಲಿ ಮಾಡಲಾಗಿರುವ ಆರೋಪಗಳ ಸತ್ಯಾಸತ್ಯತೆ ಮತ್ತು ಅದರ ಹಿಂದಿನ ಉದ್ದೇಶವನ್ನು ತನಿಖೆಯ ಮೂಲಕ ಸ್ಪಷ್ಟಪಡಿಸಿಕೊಳ್ಳಬೇಕಿದೆ ಎಂದು ತಿಳಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

mobil chat sitesi