'ದಿಮಾಗಿ ನಕ್ಸಲ್ ಪಾರ್ಟಿ' ಇನ್ಸ್ಟಾಗ್ರಾಮ್ ಖಾತೆಗೆ 1.7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್! | ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ - Mahanayaka
9:45 PM Tuesday 8 - September 2026

‘ದಿಮಾಗಿ ನಕ್ಸಲ್ ಪಾರ್ಟಿ’ ಇನ್ಸ್ಟಾಗ್ರಾಮ್ ಖಾತೆಗೆ 1.7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್! | ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್

dimagi naxal janata party.jpg
17/08/2026

ಹೊಸದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ/ಆಲೋಚನಾ ನಕ್ಸಲರು) ಎಂಬ ಪದ ಬಳಸಿದ ಬೆನ್ನಲ್ಲೇ, ಇನ್ಸ್ಟಾಗ್ರಾಮ್ ನಲ್ಲಿ ‘ದಿಮಾಗಿ ನಕ್ಸಲ್ ಪಾರ್ಟಿ’ (Dimagi Naxal Party) ಹೆಸರಿನ ಹೊಸ ಖಾತೆಯೊಂದು ಭಾರಿ ವೈರಲ್ ಆಗಿದೆ. ಈ ಖಾತೆಯು ಆರಂಭವಾದ ಕೆಲವೇ ದಿನಗಳಲ್ಲಿ 1.7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಪಡೆದುಕೊಂಡಿದೆ.

@dimaginaxalparty ಎಂಬ ಹೆಸರಿನ ಈ ಖಾತೆಯು ತನ್ನನ್ನು ‘ದಿಮಾಗಿ ನಕ್ಸಲ್ ಪಾರ್ಟಿ’ಯ ಅಧಿಕೃತ ಪುಟ ಎಂದು ಕರೆದುಕೊಂಡಿದ್ದು, “ಆಲೋಚಿಸಿ, ಸಂಶೋಧಿಸಿ, ಪ್ರತಿರೋಧಿಸಿ” (Think, Research, Resist) ಎಂಬ ಘೋಷವಾಕ್ಯವನ್ನು ನೀಡಿದೆ.
ಈ ಖಾತೆಯು ಹಾಸ್ಯನಟ ಕುನಾಲ್ ಕಮ್ರಾ, ಯೂಟ್ಯೂಬರ್ ಧ್ರುವ್ ರಾಠಿ, ನಟ ಪ್ರಕಾಶ್ ರಾಜ್, ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ಸೋನಾಕ್ಷಿ ಸಿನ್ಹಾ ಹಾಗೂ ಪತ್ರಕರ್ತ ರವೀಶ್ ಕುಮಾರ್ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳನ್ನು ಫಾಲೋ ಮಾಡುತ್ತಿತ್ತು. ಈ ಇನ್ ಸ್ಟಾಗ್ರಾಮ್ ಪೇಜ್ ಸೈಬರ್ ದಾಳಿಗೆ ಒಳಗಾಗಿದೆ ಎಂದು ಸ್ಟೋರಿಗಳನ್ನು ಹಾಕಿದ ಕೆಲವೇ ಸಮಯದಲ್ಲಿ ಸದ್ಯ ಪ್ರಸ್ತುತವಾಗಿ ನಿಷ್ಕ್ರಿಯಗೊಂಡಿದೆ (Unavailable).

ಆಗಸ್ಟ್ 15ರಂದು ಕೆಂಪುಕೋಟೆಯಿಂದ ಮಾತನಾಡಿದ್ದ ಪ್ರಧಾನಿ ಮೋದಿ, “ಅರಣ್ಯ ಪ್ರದೇಶಗಳಿಂದ ಸಶಸ್ತ್ರ ನಕ್ಸಲಿಸಂ ಅನ್ನು ಹದ್ದುಬಸ್ತಿಗೆ ತರಲಾಗಿದೆ, ಆದರೆ ‘ದಿಮಾಗಿ ನಕ್ಸಲರು’ ಇನ್ನೂ ಸಕ್ರಿಯರಾಗಿದ್ದಾರೆ” ಎಂದು ಹೇಳಿದ್ದರು.

ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರತಿಕ್ರಿಯಿಸಿ, “ನಾನು ‘ದಿಮಾಗಿ ನಕ್ಸಲ್’ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ” ಎಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು, ಪ್ರಧಾನಿಯವರ ಹೇಳಿಕೆಯು ಪ್ರತಿಪಕ್ಷಗಳಿಗಲ್ಲ, ಬದಲಿಗೆ ಪ್ರತ್ಯೇಕತಾವಾದ ಹಾಗೂ ನಕ್ಸಲಿಸಂ ಅನ್ನು ಬೆಂಬಲಿಸುವ ಮಾನಸಿಕತೆಗೆ ಸಂಬಂಧಿಸಿದ್ದು ಎಂದು ತಿಳಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

mobil chat sitesi