ಭಾರತದ ಚುನಾವಣಾ ವ್ಯವಸ್ಥೆಗೆ ಟ್ರಂಪ್ ಶ್ಲಾಘನೆ: 'ಪ್ರತಿಯೊಬ್ಬ ಮತದಾರನ ಬಳಿಯೂ ವೈಯಕ್ತಿಕ ಗುರುತಿನ ಚೀಟಿ ಇದೆ' - Mahanayaka
1:32 AM Tuesday 8 - September 2026

ಭಾರತದ ಚುನಾವಣಾ ವ್ಯವಸ್ಥೆಗೆ ಟ್ರಂಪ್ ಶ್ಲಾಘನೆ: ‘ಪ್ರತಿಯೊಬ್ಬ ಮತದಾರನ ಬಳಿಯೂ ವೈಯಕ್ತಿಕ ಗುರುತಿನ ಚೀಟಿ ಇದೆ’

trump
18/08/2026

ವಾಷಿಂಗ್ಟನ್ / ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೊಂದಿಗಿನ ಸಂಭಾಷಣೆಯನ್ನು ನೆನಪಿಸಿಕೊಂಡಿರುವ ಟ್ರಂಪ್, ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಾದ ಮತದಾರರ ಗುರುತಿನ ಚೀಟಿ ನಿಯಮ ಜಾರಿಗೆ ತರಲು ಭಾರತ ಮಾದರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಟ್ರಂಪ್, “ಈ ತಿಂಗಳ ಆರಂಭದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನಮ್ಮ ಆಡಳಿತಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದರು — ‘ಖಾತರಿಪಡಿಸಿದ ಫೋಟೋ ಗುರುತಿನ ಚೀಟಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆಗಳನ್ನು ಹೇಗೆ ನಡೆಸುತ್ತೀರಿ?'” ಎಂದು ನೆನಪಿಸಿಕೊಂಡಿದ್ದಾರೆ.

ಭಾರತದ ಮತದಾನದ ಪ್ರಮಾಣ ಮತ್ತು ಪಾರದರ್ಶಕತೆಯನ್ನು ಮೆಚ್ಚಿದ ಅವರು, “ಭಾರತದ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬರೋಬ್ಬರಿ 64.6 ಕೋಟಿ (646,000,000) ಮತದಾರರು ಭಾಗವಹಿಸಿದ್ದರು! ಅದರಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಜನರು ಮಾತ್ರ ಅಂಚೆ (Mail–in) ಮೂಲಕ ಮತ ಚಲಾಯಿಸಿದ್ದಾರೆ. ಉಳಿದ ಪ್ರತಿಯೊಬ್ಬ ಮತದಾರನ ಬಳಿಯೂ ಮಾನ್ಯವಾದ ಫೋಟೋ ಗುರುತಿನ ಚೀಟಿ (Photo ID) ಇತ್ತು” ಎಂದು ಬರೆದುಕೊಂಡಿದ್ದಾರೆ.

‘ಸೇವ್ ಅಮೆರಿಕ ಆಕ್ಟ್’ ಜಾರಿಗೆ ಪಟ್ಟು:

ಅಮೆರಿಕದ ಫೆಡರಲ್ ಚುನಾವಣೆಗಳಲ್ಲಿ ಮತ ಚಲಾಯಿಸಲು ಬಯಸುವ ಪ್ರತಿಯೊಬ್ಬ ನಾಗರಿಕನೂ ಅಮೆರಿಕದ ಪೌರತ್ವ ಸಾಬೀತುಪಡಿಸುವುದು ಮತ್ತು ಫೋಟೋ ಗುರುತಿನ ಚೀಟಿ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸುವ ‘ಸೇವ್ ಅಮೆರಿಕ ಆಕ್ಟ್’ (SAVE America Act) ಮಸೂದೆಯನ್ನು ತಕ್ಷಣವೇ ಸಂಸತ್ತಿನಲ್ಲಿ ಪಾಸ್ ಮಾಡಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ.

“ಅಮೆರಿಕದ ಚುನಾವಣೆಗಳ ನಿರ್ಧಾರವನ್ನು ಕೇವಲ ಅಮೆರಿಕದ ನಾಗರಿಕರು ಮಾತ್ರ ಮಾಡಬೇಕು,” ಎಂದು ಶ್ವೇತಭವನ (White House) ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದೆ. ಭಾರತ ಮತ್ತು ಬ್ರೆಜಿಲ್ ದೇಶಗಳು ಮತದಾರರ ಗುರುತನ್ನು ಬಯೋಮೆಟ್ರಿಕ್ ಡೇಟಾಬೇಸ್‌ ಗೆ ಲಿಂಕ್ ಮಾಡಿದ್ದರೆ, ಅಮೆರಿಕದಲ್ಲಿ ಇಂದಿಗೂ ನಾಗರಿಕತ್ವ ಘೋಷಣೆಗೆ ಸ್ವಯಂ–ದೃಢೀಕರಣವನ್ನೇ (Self-attestation) ಹೆಚ್ಚಾಗಿ ನೆಚ್ಚಿಕೊಳ್ಳಲಾಗಿದೆ ಎಂದು ಆಡಳಿತ ವ್ಯವಸ್ಥೆ ಕಳವಳ ವ್ಯಕ್ತಪಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi