ಇನ್ಸ್’ಪೆಕ್ಟರ್ ಸಂದೇಶ್ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಆರೋಪ: ಇನ್ಸ್’ಪೆಕ್ಟರ್ ವಿರುದ್ಧ ಶಿಸ್ತು ಕ್ರಮ, ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲ: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು: ಮೂಡುಬಿದಿರೆ ಪೊಲೀಸ್ ಇನ್ಸ್’ಪೆಕ್ಟರ್ ಸಂದೇಶ್ ಪಿ.ಜಿ. ಅವರ ದುರ್ನಡತೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮೂಡುಬಿದಿರೆ ಇನ್ಸ್’ಪೆಕ್ಟರ್ ವಿರುದ್ಧ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಎಂಬವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಬಗ್ಗೆ ಮಂಗಳೂರು ನಗರ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರು ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.
ಇನ್ಸ್’ಪೆಕ್ಟರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳದ ಆರೋಪಗಳಿಗೆ ಪೂರಕವಾದ ಯಾವುದೇ ಸತ್ಯಾಂಶ ಅಥವಾ ಸಾಕ್ಷ್ಯಾಧಾರಗಳು ತನಿಖೆಯಲ್ಲಿ ಕಂಡುಬಂದಿಲ್ಲ. ಈ ಆರೋಪಗಳು ದುರುದ್ದೇಶಪೂರಿತವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋಗಳು ತಮ್ಮದೇ ಎಂದು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಯಾವುದೇ ದೂರು ನೀಡಿಲ್ಲ.
ಆಡಿಯೋ ಮತ್ತು ವಿಡಿಯೋಗಳಲ್ಲಿ ಕಂಡುಬಂದಿರುವ ಅಧಿಕಾರಿಯ ದುರ್ನಡತೆಯನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ಶಿಸ್ತು ಕ್ರಮ ಜರುಗಿಸಲಾಗಿದೆ. “ಠಾಣೆಗೆ ಬರುವ ಮಹಿಳೆಯರಿಗೆ ರಕ್ಷಣೆ ನೀಡುವುದು ಮತ್ತು ಅವರೊಂದಿಗೆ ಗೌರವದಿಂದ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯ. ಈ ಘಟನೆಯು ಇಲಾಖೆಗೆ ಒಂದು ಪಾಠವಾಗಿದ್ದು, ಇಂತಹ ವರ್ತನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು,” ಎಂದು ಕಮಿಷನರ್ ತಿಳಿಸಿದ್ದಾರೆ.
ಅಲ್ಲದೆ, ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ದೂರುಗಳನ್ನು ನೀಡಿ ತನಿಖೆಯ ಹಾದಿ ತಪ್ಪಿಸುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























