ಇರಾನ್ ಜೊತೆ ದೊಡ್ಡ ಡೀಲ್ ಮಾಡಿದ್ದೇವೆ ಎಂದ ಟ್ರಂಪ್: ಅದು ನಿಮ್ಮ ಸೋಲಿನ ಡೀಲ್ ಎಂದ ಇರಾನ್
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಇರಾನ್ ದೇಶವು ಅಮೆರಿಕದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿದೆ ಮತ್ತು ಇರಾನ್ನಿಂದ ನಮಗೆ ಭಾರಿ ಮೌಲ್ಯದ “ಉಡುಗೊರೆ” (Present) ದೊರೆತಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ನಮಗೆ ಬಹಳ ದೊಡ್ಡ ಉಡುಗೊರೆಯನ್ನು ನೀಡಿದೆ, ಇದು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ಆದರೆ ಅದು ಏನು ಎಂಬ ಗುಟ್ಟನ್ನು ನಾನು ಈಗಲೇ ಬಿಟ್ಟುಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದು ಪರಮಾಣು ವಿಚಾರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ತೈಲ ಮತ್ತು ಅನಿಲಕ್ಕೆ (Oil and Gas) ಸಂಬಂಧಿಸಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್ ನ ಹೊಸ ನಾಯಕತ್ವವು ನೀಡಿರುವ ಈ ಉಡುಗೊರೆಯು, ನಾವು ಸರಿಯಾದ ವ್ಯಕ್ತಿಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಇರಾನ್ ನ ನೌಕಾಪಡೆ, ವಾಯುಪಡೆ ಮತ್ತು ಸಂವಹನ ವ್ಯವಸ್ಥೆಗಳು ಸಂಪೂರ್ಣವಾಗಿ ನಾಶವಾಗಿವೆ. ಅವರ ಹೆಚ್ಚಿನ ಕ್ಷಿಪಣಿಗಳು ಈಗ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾರು ತಾನೇ ಒಪ್ಪಂದಕ್ಕೆ ಬರಲು ಇಷ್ಟಪಡುವುದಿಲ್ಲ?” ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಗಳನ್ನು ಇರಾನ್ ನಿರಾಕರಿಸಿದೆ. “ನಿಮ್ಮ ಸೋಲನ್ನು ಒಪ್ಪಂದ ಎಂದು ಬಿಂಬಿಸಬೇಡಿ. ನೀವು ನಿಮ್ಮೊಂದಿಗೇ ಮಾತುಕತೆ ನಡೆಸುತ್ತಿದ್ದೀರಿ” ಎಂದು ಇರಾನ್ ಸೇನಾ ವಕ್ತಾರರು ವ್ಯಂಗ್ಯವಾಡಿದ್ದಾರೆ. ಯಾವುದೇ ನೇರ ಮಾತುಕತೆ ನಡೆಯುತ್ತಿಲ್ಲ ಎಂದು ಇರಾನ್ ಸ್ಪೀಕರ್ ಕೂಡ ಇದನ್ನು ‘ಫೇಕ್ ನ್ಯೂಸ್’ ಎಂದು ಕರೆದಿದ್ದಾರೆ.
ಅಮೆರಿಕವು ಪಾಕಿಸ್ತಾನದ ಮೂಲಕ ಇರಾನ್ ಗೆ 15 ಅಂಶಗಳ ಶಾಂತಿ ಯೋಜನೆಯನ್ನು ಕಳುಹಿಸಿದೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಒಟ್ಟಾರೆಯಾಗಿ, ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿಯನ್ನು ಕಡಿಮೆ ಮಾಡಲು ಮತ್ತು ಲಕ್ಷಾಂತರ ಜೀವಗಳನ್ನು ಉಳಿಸಲು ತಾನು ಮಾತುಕತೆಯಲ್ಲಿ ತೊಡಗಿರುವುದಾಗಿ ಟ್ರಂಪ್ ಪ್ರತಿಪಾದಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























