ಮಂಗಳೂರು: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಒಣಗಿದ ಮರ; ಸಾರ್ವಜನಿಕರ ಆತಂಕ
ಮಂಗಳೂರು: ನಗರದ ಪಡೀಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ “ಪ್ರಜಾ ಸೌಧ”ದ ಪಕ್ಕದ ರಸ್ತೆಯಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯ ಕಾದಿದೆ. ಪಡೀಲ್ — ಬಜಾಲ್ ರಸ್ತೆಯ ಬದಿಯಲ್ಲಿರುವ ಬೃಹತ್ ಮರವೊಂದು ಸಂಪೂರ್ಣವಾಗಿ ಒಣಗಿ ಹೋಗಿದ್ದು, ಇಂದು ಅಥವಾ ನಾಳೆ ಬೀಳುವ ಆತಂಕಕಾರಿ ಸ್ಥಿತಿಯಲ್ಲಿದೆ.
ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಇದೇ ಒಣಗಿದ ಮರದ ತೀರಾ ಪಕ್ಕದಲ್ಲೇ ಆಟೋ ರಿಕ್ಷಾ ನಿಲ್ದಾಣ (ಪಾರ್ಕ್) ಇದೆ. ದಿನವಿಡೀ ಇಲ್ಲಿ ಹಲವಾರು ಆಟೋ ಚಾಲಕರು ಮತ್ತು ಪ್ರಯಾಣಿಕರು ಓಡಾಡುತ್ತಿರುತ್ತಾರೆ. ಮರವು ಯಾವುದೇ ಕ್ಷಣದಲ್ಲೂ ಉರುಳಿ ಬೀಳಬಹುದಾಗಿದ್ದು, ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.
“ಜಿಲ್ಲೆಯ ಉನ್ನತ ಅಧಿಕಾರಿಗಳು ಕೂರುವ ಜಿಲ್ಲಾಧಿಕಾರಿ ಕಚೇರಿಯ ಕೂಗಳತೆಯ ದೂರದಲ್ಲೇ ಇಂತಹದ್ದೊಂದು ಅಪಾಯ ಹೊಂಚು ಹಾಕುತ್ತಿದ್ದರೂ ಅಧಿಕಾರಿಗಳು ಗಮನ ಹರಿಸದಿರುವುದು ವಿಷಾದನೀಯ. ಮುಂದೆ ಸಂಭವಿಸಬಹುದಾದ ಪ್ರಾಣಾಪಾಯ ಅಥವಾ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಈ ಒಣಗಿದ ಮರವನ್ನು ಕಡಿದು ತೆರವುಗೊಳಿಸಬೇಕು” ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಒತ್ತಾಯಿಸಿದ್ದಾರೆ.
ಯಾವುದೇ ಅನಾಹುತ ನಡೆಯುವ ಮುನ್ನವೇ ಮಂಗಳೂರು ಮಹಾನಗರ ಪಾಲಿಕೆ ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮಳೆಗಾಲ ಕೂಡ ಆಗಿರುವುದರಿಂದ ತಕ್ಷಣಕ್ಕೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























