ಜುಲೈ 1 ರಿಂದ ಪಾಸ್’ಪೋರ್ಟ್ ಶುಲ್ಕ ಭಾರಿ ಏರಿಕೆ: ಹೊಸ ದರಗಳ ವಿವರ ಇಲ್ಲಿದೆ
ನವದೆಹಲಿ: ವಿದೇಶ ಪ್ರಯಾಣ ಬೆಳೆಸುವವರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದೆ.ಹೊಸ ಪಾಸ್ಪೋರ್ಟ್ ಪಡೆಯುವ ಮತ್ತು ನವೀಕರಣ ಮಾಡುವ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಈ ವರ್ಷದ ಜುಲೈ 1 ರಿಂದಲೇ ಜಾರಿಗೆ ಬರಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪಾಸ್ಪೋರ್ಟ್ ಕಾಯ್ದೆ 1967ರ ಅಡಿಯಲ್ಲಿ ಸಚಿವಾಲಯವು ‘ಪಾಸ್ಪೋರ್ಟ್ ತಿದ್ದುಪಡಿ ನಿಯಮಗಳು, 2026’ ಅನ್ನು ಹೊರಡಿಸಿದ್ದು, ಜುಲೈ ಅಥವಾ ಆ ಬಳಿಕ ಸಲ್ಲಿಕೆಯಾಗುವ ಎಲ್ಲಾ ಹೊಸ ಅರ್ಜಿಗಳಿಗೆ ಈ ಹೊಸ ದರಗಳೇ ಅನ್ವಯವಾಗಲಿವೆ.
ಹೊಸ ನಿಯಮಾವಳಿಗಳ ಪ್ರಕಾರ, 15 ವರ್ಷ ಮೇಲ್ಪಟ್ಟ ಹಿರಿಯರಿಗೆ 36 ಪುಟಗಳ ಸಾಮಾನ್ಯ ಪಾಸ್ಪೋರ್ಟ್ ದರವನ್ನು ಈ ಹಿಂದಿನ 1,500 ರೂಪಾಯಿಗಳಿಂದ 2,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದೇ ವಿಭಾಗದಲ್ಲಿ ತತ್ಕಾಲ್ ಪಾಸ್ಪೋರ್ಟ್ ದರ 5,000 ರೂಪಾಯಿಗಳಾಗಲಿದ್ದು, 60 ಪುಟಗಳ ಸಾಮಾನ್ಯ ಪಾಸ್ಪೋರ್ಟ್ಗೆ 3,500 ರೂಪಾಯಿ ಹಾಗೂ 60 ಪುಟಗಳ ತತ್ಕಾಲ್ ಪಾಸ್ ಪೋರ್ಟ್ಗೆ 6,000 ರೂಪಾಯಿ ನಿಗದಿಪಡಿಸಲಾಗಿದೆ. ವಯಸ್ಕರ ವಿಭಾಗದಲ್ಲಿ ನೀಡಲಾಗುವ ಪಾಸ್ ಪೋರ್ಟ್ಗಳು ಎಂದಿನಂತೆ 10 ವರ್ಷಗಳ ಅವಧಿಗೆ ಸಿಂಧುತ್ವ ಹೊಂದಿರಲಿವೆ.
ಇನ್ನು 18 ವರ್ಷದೊಳಗಿನ ಅಪ್ರಾಪ್ತರಿಗೆ 36 ಪುಟಗಳ ಸಾಮಾನ್ಯ ಪಾಸ್ಪೋರ್ಟ್ ಶುಲ್ಕ 1,750 ರೂಪಾಯಿ ಹಾಗೂ ತತ್ಕಾಲ್ ಪಾಸ್ಪೋರ್ಟ್ ಶುಲ್ಕ 4,250 ರೂಪಾಯಿ ಆಗಲಿದೆ. ಅಪ್ರಾಪ್ತರಿಗೆ ನೀಡಲಾಗುವ ಪಾಸ್ ಪೋರ್ಟ್ಗಳು 5 ವರ್ಷ ಅಥವಾ ಅವರಿಗೆ 18 ವರ್ಷ ತುಂಬುವವರೆಗೆ ಚಾಲ್ತಿಯಲ್ಲಿರಲಿವೆ. ಇದರೊಂದಿಗೆ ಪಾಸ್ಪೋರ್ಟ್ ಕಳೆದುಹೋದರೆ ಅಥವಾ ಹಾನಿಯಾಗಿದ್ದರೆ ಬದಲಿ ಪಾಸ್ಪೋರ್ಟ್ ಪಡೆಯುವ ದರವನ್ನು ಸಹ ಹೆಚ್ಚಿಸಲಾಗಿದ್ದು, 36 ಪುಟಗಳ ಸಾಮಾನ್ಯ ಯೋಜನೆಗೆ 5,000 ರೂಪಾಯಿ ಹಾಗೂ ತತ್ಕಾಲ್ ಗೆ 7,500 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 60 ಪುಟಗಳ ಹಾನಿಯಾದ ಅಥವಾ ಕಳೆದುಹೋದ ಪಾಸ್ಪೋರ್ಟ್ ಬದಲಿಗೆ ಸಾಮಾನ್ಯ ಯೋಜನೆಗೆ 6,000 ರೂಪಾಯಿ ಮತ್ತು ತತ್ಕಾಲ್ಗೆ 8,500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಅಪ್ರಾಪ್ತರ ಕಳೆದುಹೋದ ಅಥವಾ ಹಾನಿಯಾದ ಪಾಸ್ಪೋರ್ಟ್ ಬದಲಿಗೆ ಸಾಮಾನ್ಯಕ್ಕೆ 4,250 ರೂಪಾಯಿ ಹಾಗೂ ತತ್ಕಾಲ್ಗೆ 6,750 ರೂಪಾಯಿ ವೆಚ್ಚವಾಗಲಿದೆ.
ಕೇವಲ ಹೊಸ ಪಾಸ್ ಪೋರ್ಟ್ ಮಾತ್ರವಲ್ಲದೆ ಇತರ ಸೇವೆಗಳ ಶುಲ್ಕವೂ ದುಬಾರಿಯಾಗಿದೆ. ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC), ಸರೆಂಡರ್ ಸರ್ಟಿಫಿಕೇಟ್ ಮತ್ತು ಗ್ಲೋಬಲ್ ಎಂಟ್ರಿ ಪ್ರೋಗ್ರಾಂ ವೆರಿಫಿಕೇಶನ್ನಂತಹ ಸೇವೆಗಳ ಶುಲ್ಕವನ್ನು ಭಾರತದಲ್ಲಿ 750 ರೂಪಾಯಿ ಹಾಗೂ ವಿದೇಶಗಳಲ್ಲಿ 40 ಡಾಲರ್ ಗೆ ಏರಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























