ರಾಮ ಮಂದಿರ ದೇಣಿಗೆ ಕೊಳ್ಳೆ ಹೊಡೆದವರು ದೇಶದ ಸಂಪತ್ತು ಬಿಡುವರೇ?:  ಸಂತೋಷ್ ಬಜಾಲ್ ವಾಗ್ದಾಳಿ - Mahanayaka

ರಾಮ ಮಂದಿರ ದೇಣಿಗೆ ಕೊಳ್ಳೆ ಹೊಡೆದವರು ದೇಶದ ಸಂಪತ್ತು ಬಿಡುವರೇ?:  ಸಂತೋಷ್ ಬಜಾಲ್ ವಾಗ್ದಾಳಿ

santhosh bajal
29/06/2026

ಮಂಗಳೂರು: ರಾಮ ಮಂದಿರ ನಿರ್ಮಿಸುವ ಹೆಸರಿನಲ್ಲಿ ಸಂಘಪರಿವಾರ ನಡೆಸಿರುವ ಹಿಂಸಾಚಾರವನ್ನು ದೇಶದ ಜನತೆ ಇವತ್ತಿಗೂ ಮರೆತಿಲ್ಲ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.

ಕೋಮುವಾದಿಗಳ ಖಡ್ಗಕ್ಕೆ ಬಲಿಯಾದ ಕಾಂ. ಶ್ರೀನಿವಾಸ್ ಬಜಾಲ್ ಅವರ 24ನೇ ವರ್ಷದ ಹುತಾತ್ಮ ದಿನದ ಅಂಗವಾಗಿ, ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ವತಿಯಿಂದ ಬಜಾಲ್ ಪಕ್ಕಲಡ್ಕದ ಭಗತ್ ಸಿಂಗ್ ಭವನದಲ್ಲಿ ನಿನ್ನೆ (28-06-26) ನಡೆದ ಸಾಮರಸ್ಯ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಮನ ಹೆಸರಿನಲ್ಲಿ ಪ್ರಾರಂಭಿಸಿರುವ ಮತೀಯ ಧ್ರುವೀಕರಣದ ರಾಜಕಾರಣಕ್ಕೆ ಅದೆಷ್ಟೋ ಅಮಾಯಕ ಜೀವಗಳನ್ನು ಬಲಿಪಡೆದು ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ, ಇಂದು ಅದೇ ರಾಮ ಮಂದಿರದ ನಿರ್ಮಾಣದ ಹೆಸರಿನಲ್ಲಿ ದೇಣಿಗೆಗಳನ್ನೆಲ್ಲಾ ಕೊಳ್ಳೆ ಹೊಡೆಯಲು ನೇರ ಹೊಣೆಯಾಗಿದೆ. ಮಂದಿರದ ಹಣವನ್ನೇ ನುಂಗಿದವರು ದೇಶದ ಸಂಪತ್ತನ್ನು ನುಂಗದೆ ಬಿಡುವರೇ ಎಂದು ಅವರು ಪ್ರಶ್ನಿಸಿದರು.

ದೇಶವನ್ನು ಆಳುವ ಸರ್ಕಾರಗಳು ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ಜೊತೆಗೆ ಮತೀಯ ರಾಜಕಾರಣವನ್ನು ವ್ಯಾಪಕಗೊಳಿಸಿವೆ. ಬಿಜೆಪಿ ಸರ್ಕಾರದ ಧೋರಣೆಗಳನ್ನು ವಿರೋಧಿಸುವ ಜಾತ್ಯಾತೀಯ ಹಾಗೂ ಎಡಪಕ್ಷಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವ ಮತ್ತು ನೇರ ದಾಳಿ ನಡೆಸುವ ಹಿಂಸಾಚಾರ ಪ್ರವೃತ್ತಿಯನ್ನು ವ್ಯಾಪಕಗೊಳಿಸಲಾಗಿದೆ. ಡಿವೈಎಫ್ಐ ದೇಶದಾದ್ಯಂತ ಸಂಘಪರಿವಾರದ ಮತೀಯ ರಾಜಕಾರಣದ ಹಿಂಸಾಚಾರದ ವಿರುದ್ಧ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ನಿರಂತರ ರಾಜಿರಹಿತ ಹೋರಾಟಗಳನ್ನು ಪ್ರಾರಂಭದ ದಿನಗಳಿಂದಲೂ ನಡೆಸಿಕೊಂಡು ಬಂದಿದೆ. ಆ ಕಾರಣಕ್ಕೋಸ್ಕರ ಸಂಗಾತಿ ಶ್ರೀನಿವಾಸ್ ಬಜಾಲ್ ರಂತಹ ಅದೆಷ್ಟೋ ಕಾರ್ಯಕರ್ತರು ನೆಮ್ಮದಿಯ ನಾಳೆಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಸಂವಿಧಾನದ ಉಳಿವಿಗಾಗಿ, ಶಾಂತಿ ಸೌಹಾರ್ದತೆಯ ರಕ್ಷಣೆಗಾಗಿ, ಜನರ ಬದುಕಿನ ಪ್ರಶ್ನೆಗಳ ಇತ್ಯರ್ಥಕ್ಕಾಗಿ ನಡೆಸುವಂತಹ ಹೋರಾಟಗಳಲ್ಲಿ ಯಾವ ತ್ಯಾಗಕ್ಕೂ ಸಿದ್ಧ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸಲು ಡಿವೈಎಫ್ಐ ಸಂಘಟನೆ ಮುಂದಾಗಿದೆ. ಅಂತಹ ಹೋರಾಟಗಳಿಗೆ ಹುತಾತ್ಮರಾದ ಸಂಗಾತಿ ಶ್ರೀನಿವಾಸ್ ಬಜಾಲ್ ಅವರಂತಹ ಕಾರ್ಯಕರ್ತರು ಸ್ಪೂರ್ತಿ ಎಂದರು.

ಕಾರ್ಮಿಕ ಸಂಘಟನೆಯ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಹುತಾತ್ಮ ಸಂಗಾತಿ ಶ್ರೀನಿವಾಸ್ ಬಜಾಲ್ ಹೆಸರಿನಲ್ಲಿ ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಕಾರ್ಯಕ್ರಮವು ಅವರ ಆದರ್ಶ ಮತ್ತು ತತ್ವಗಳನ್ನು ಜೀವಂತವಿರಿಸುವ ಪ್ರಯತ್ನವಾಗಿದ್ದು, ಡಿವೈಎಫ್ಐ ಸಂಘಟನೆಯ ಈ ಕಾರ್ಯ ಶ್ಲಾಘನೀಯ. ಶ್ರೀನಿವಾಸರನ್ನು ಕೊಂದರೆ ಬಜಾಲ್ ಪರಿಸರದಲ್ಲಿ ಎಡಪಂಥೀಯ ಚಳುವಳಿಯನ್ನು ಮುಗಿಸಬಹುದೆಂಬ ಕೋಮುವಾದಿಗಳ ದುರುದ್ದೇಶಕ್ಕೆ ಸೋಲಾಗಿದೆ. ಕೊಲೆಗಟುಕರು ಶ್ರೀನಿವಾಸರನ್ನು ಎಲ್ಲಿಂದ ಮುಗಿಸಲು ಸಂಚು ರೂಪಿಸಿದ್ದರೋ, ಡಿವೈಎಫ್ಐ ಅಲ್ಲಿಂದಲೇ ಅವರ ಆದರ್ಶ ಮತ್ತು ತತ್ವಗಳನ್ನು ಎತ್ತಿಹಿಡಿಯಲು ಪ್ರಾರಂಭಿಸಿದೆ ಎಂದರು.


Provided by
Provided by

ವೇದಿಕೆಯಲ್ಲಿ ಕಾವುಬೈಲ್ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಬಿ. ನಾಗೇಶ್ ಶೆಟ್ಟಿ, ಬಜಾಲ್ ಹೋಲಿ ಸ್ಪಿರೀಟ್ ಚರ್ಚ್ ಸಮಿತಿಯ ಪದಾಧಿಕಾರಿ ಲಾರೆನ್ಸ್ ಡಿಸೋಜ, ಸ್ನೇಹ ಪಬ್ಲಿಕ್ ಶಾಲೆಯ ಮುಖ್ಯಸ್ಥರಾದ ಯೂಸಫ್ ಪಕ್ಕಲಡ್ಕ, ಸಿಪಿಐಎಂ ಸ್ಥಳೀಯ ಮುಖಂಡರಾದ ಅಶೋಕ್ ಸಾಲ್ಯಾನ್, ಗೀತಾ ಜಲ್ಲಿಗುಡ್ಡೆ ಹಾಗೂ ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಯಶ್ ರಾಜ್ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ವಹಿಸಿದ್ದರು. ಡಿವೈಎಫ್ಐ ಮುಖಂಡ ದೀರಾಜ್ ಬಜಾಲ್ ಸ್ವಾಗತಿಸಿದರು, ಜಗದೀಶ್ ಬಜಾಲ್ ನಿರೂಪಿಸಿದರು ಹಾಗೂ ದೀಪಕ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇದಿಕೆಯಲ್ಲಿ ಬಜಾಲ್ ವಿಭಾಗ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಹಾಗೆಯೇ ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ