ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಪತಿಯನ್ನು ಕೊಂದ ಪತ್ನಿ: ಗಲ್ಫ್ ನಿಂದ ಮರಳಿದಾತನಿಗೆ ಪತ್ನಿ—ಪ್ರಿಯಕರನಿಂದ ಸ್ಕೆಚ್!
ಹೈದರಾಬಾದ್: ಗಲ್ಫ್ನಿಂದ ಮರಳಿದ್ದ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಂಬಿಸಲು ಯತ್ನಿಸಿದ ಭೀಕರ ಘಟನೆ ನಿಜಾಮಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸಂಧ್ಯಾ, ಆಕೆಯ ಪ್ರಿಯಕರ ಎಂ. ಅನಿಲ್ ಮತ್ತು ಆತನ ಸ್ನೇಹಿತ ವೆಂಕಟ ಸಾಯಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡಿ. ಪ್ರಶಾಂತ್ ಕೊಲೆಯಾದ ದುರ್ದೈವಿ. ಈತ ಕಳೆದ ಜೂನ್ 27 ರಂದು ಗಲ್ಫ್ ದೇಶದಿಂದ ತಾಯ್ನಾಡಿಗೆ ಮರಳಿದ್ದನು. ಆದರೆ, ಜೂನ್ 30 ರಂದು ಆತ ನಿಗೂಢವಾಗಿ ಸಾವನ್ನಪ್ಪಿದ್ದನು. ಪ್ರಶಾಂತ್ ಮಂಚದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪತ್ನಿ ಸಂಧ್ಯಾ ಆತನ ಪೋಷಕರಿಗೆ ತಿಳಿಸಿದ್ದಳು. ಆದರೆ ಮಗನ ಸಾವಿನ ಬಗ್ಗೆ ಅನುಮಾನಗೊಂಡ ಪ್ರಶಾಂತ್ ತಾಯಿ ಶ್ಯಾಮಲಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಈ ನಡುಕ ಹುಟ್ಟಿಸುವ ಕೊಲೆ ರಹಸ್ಯ ಬಯಲಾಗಿದೆ.
ತಾರಸಿಯಿಂದ ತಳ್ಳಿದರೂ ಬದುಕುಳಿದಿದ್ದ!
ಪೊಲೀಸ್ ತನಿಖೆಯ ಪ್ರಕಾರ, ಪತ್ನಿ ಸಂಧ್ಯಾ ತನಗೆ ಹಾಗೂ ತನ್ನ ಪ್ರಿಯಕರ ಅನಿಲ್ ನ ಸಂಬಂಧಕ್ಕೆ ಪ್ರಶಾಂತ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದಳು. ಇದಕ್ಕಾಗಿ ಅನಿಲ್ ತನ್ನ ಸ್ನೇಹಿತ ವೆಂಕಟ ಸಾಯಿ ಸಹಾಯ ಪಡೆದಿದ್ದನು. ಜೂನ್ 28 ರಂದು ವೆಂಕಟ ಸಾಯಿ ಪ್ರಶಾಂತ್ ನನ್ನು ಮದ್ಯಪಾನ ಮಾಡಲು ಆಹ್ವಾನಿಸಿದ್ದನು. ಪಾರ್ಟಿ ಮುಗಿದ ನಂತರ ಪ್ರಶಾಂತ್ ನನ್ನು ಮೊದಲ ಮಹಡಿಯ ತಾರಸಿಗೆ ಕರೆದೊಯ್ದು ಅಲ್ಲಿಂದ ಕೆಳಗೆ ತಳ್ಳಲಾಗಿತ್ತು. ಆದರೆ ಅದೃಷ್ಟವಶಾತ್ ಪ್ರಶಾಂತ್ ಆ ಪೆಟ್ಟಿನಿಂದ ಬದುಕುಳಿದಿದ್ದನು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಮರುದಿನವೇ ಡಿಸ್ಚಾರ್ಜ್ ಮಾಡಲಾಗಿತ್ತು.
ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿದ ಪತ್ನಿ!
ತಾರಸಿಯಿಂದ ಬಿದ್ದರೂ ಪತಿ ಬದುಕುಳಿದಿದ್ದರಿಂದ, ಎಲ್ಲಿ ಸಿಕ್ಕಿಬೀಳುತ್ತೇವೆಯೋ ಎಂಬ ಭಯ ಸಂಧ್ಯಾ ಮತ್ತು ಅನಿಲ್ ಗೆ ಶುರುವಾಗಿತ್ತು. ಹೀಗಾಗಿ ಅದೇ ದಿನ ರಾತ್ರಿ ಆತನನ್ನು ಹೇಗಾದರೂ ಮಾಡಿ ಕೊಲ್ಲಲು ನಿರ್ಧರಿಸಿದರು. ಸಂಧ್ಯಾ ವೃತ್ತಿಯಲ್ಲಿ ನರ್ಸ್ (ಶುಶ್ರೂಷಕಿ) ಆಗಿದ್ದಳು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಪ್ರಶಾಂತ್ ಕೈಗೆ ಕ್ಯಾನುಲಾ (ಸೂಜಿ ಮತ್ತು ಟ್ಯೂಬ್) ಹಾಗೆಯೇ ಇತ್ತು.
ಇದನ್ನೇ ಬಳಸಿಕೊಂಡ ನರ್ಸ್ ಸಂಧ್ಯಾ, ಆ ಕ್ಯಾನುಲಾ ಮೂಲಕವೇ ಪ್ರಶಾಂತ್ ದೇಹಕ್ಕೆ ತೀವ್ರ ನಿಶ್ಯಕ್ತಿ ತರುವ ದ್ರಾವಣ ಹಾಗೂ ಬಾತ್ ರೂಮ್ ತೊಳೆಯುವ ಟಾಯ್ಲೆಟ್ ಕ್ಲೀನರ್ ಲಿಕ್ವಿಡ್ ಅನ್ನು ಇಂಜೆಕ್ಟ್ ಮಾಡಿದ್ದಾಳೆ. ವಿಷಕಾರಿ ದ್ರಾವಣ ದೇಹದ ನರಗಳಿಗೆ ಹರಡಿ ಪ್ರಶಾಂತ್ ತೀವ್ರವಾಗಿ ಒದ್ದಾಡಿ ಸಾವನ್ನಪ್ಪಿದ್ದಾನೆ. ಆ ಬಳಿಕ ಆತನ ಶವವನ್ನು ಮಂಚದಿಂದ ಕೆಳಗೆ ತಳ್ಳಿ, ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ನಾಟಕವಾಡಿದ್ದರು.
ಸದ್ಯ ನಿಜಾಮಾಬಾದ್ ದಕ್ಷಿಣ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಮೂವರೂ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಪ್ರಿಯಕರನ ಮೋಹಕ್ಕಾಗಿ ನರ್ಸ್ ಪತ್ನಿಯೊಬ್ಬಳು ತನ್ನದೇ ಪತಿಯ ನರಕ್ಕೆ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಕೊಂದಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























