ನಡು ರಸ್ತೆಯಲ್ಲಿ ಪ್ರೇಯಸಿ ಮೇಲೆ ಇಟ್ಟಿಗೆಯಿಂದ ಹಲ್ಲೆ: ಪೊಲೀಸರು ಹಿಡಿದಾಗ ನಾನು ನಿವೃತ್ತ ಐಎಎಸ್ ಅಧಿಕಾರಿ ಪುತ್ರ ಎಂದ! - Mahanayaka

ನಡು ರಸ್ತೆಯಲ್ಲಿ ಪ್ರೇಯಸಿ ಮೇಲೆ ಇಟ್ಟಿಗೆಯಿಂದ ಹಲ್ಲೆ: ಪೊಲೀಸರು ಹಿಡಿದಾಗ ನಾನು ನಿವೃತ್ತ ಐಎಎಸ್ ಅಧಿಕಾರಿ ಪುತ್ರ ಎಂದ!

kanpur
06/07/2026

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಾರಿನಲ್ಲಿ ಹೋಗುತ್ತಿದ್ದಾಗ ನಡೆದ ಜಗಳದ ಬಳಿಕ ಪ್ರೇಯಸಿಯನ್ನು ರಸ್ತೆಗೆ ಎಳೆದು ಹಾಕಿ, ಇಟ್ಟಿಗೆಯಿಂದ ತಲೆಗೆ ಜಜ್ಜಿದ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಐಐಟಿ ಕಾನ್ಪುರದಲ್ಲಿ (IIT–Kanpur) ಕೆಲಸ ಮಾಡುವ 38 ವರ್ಷದ ಮಹಿಳೆಯನ್ನು ಆಕೆಯ ಪ್ರಿಯಕರ ದೇವಾಶಿಶ್ ನಿಗಮ್ (38) ಎಂಬಾತ ಶನಿವಾರ ಸಂಜೆ ಕಾರಿನಲ್ಲಿ ಪಿಕ್ ಮಾಡಿಕೊಂಡಿದ್ದನು. ಇಬ್ಬರೂ ಬಿಠೂರ್‌ನ ಬ್ರಹ್ಮಾವರ್ತ ಘಾಟ್‌ ಕಡೆಗೆ ಪ್ರಯಾಣಿಸುತ್ತಿದ್ದಾಗ ಕಾರಿನೊಳಗೆ ತೀವ್ರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಂಧಾನ ಬಳಿಯ ಸರ್ವಿಸ್ ರಸ್ತೆಯಲ್ಲಿ ದೇವಾಶಿಶ್ ಕಾರನ್ನು ನಿಲ್ಲಿಸಿದ್ದಾನೆ.

ಆಪತ್ತಿನ ಮುನ್ಸೂಚನೆ ಸಿಗುತ್ತಿದ್ದಂತೆ ಮಹಿಳೆ ಕಾರಿನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆರೋಪಿ, ರಸ್ತೆ ಬದಿಯಲ್ಲಿದ್ದ ಇಟ್ಟಿಗೆಯನ್ನು ತಂದು ಕಾರಿನ ಗಾಜಿಗೆ ಎರಡೂ ಮೂರು ಬಾರಿ ಜೋರಾಗಿ ಹೊಡೆದು ಜಜ್ಜಿ ಬಾಗಿಲು ತೆರೆದಿದ್ದಾನೆ. ನಂತರ ಮಹಿಳೆಯನ್ನು ಕಾರಿನಿಂದ ಹೊರಗೆ ಎಳೆದು ಹಾಕಿ, ಅದೇ ಇಟ್ಟಿಗೆಯಿಂದ ಆಕೆಯ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಮನಬಂದಂತೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾನೆ.

ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಹಾದಿಹೋಕರು ಮತ್ತು ಸಾರ್ವಜನಿಕರು ತಕ್ಷಣವೇ ಆರೋಪಿ ದೇವಾಶಿಶ್‌ ನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಆತನಿಗೆ ಚೆನ್ನಾಗಿ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರಿಗೇ ಬೆದರಿಕೆ ಹಾಕಿದ ಆರೋಪಿ!

ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗಲೂ ಆರೋಪಿ ದೇವಾಶಿಶ್ ತನ್ನ ಅಹಂಕಾರ ಪ್ರದರ್ಶಿಸಿದ್ದಾನೆ. ಪೊಲೀಸರನ್ನೇ ಹೆದರಿಸಲು ಯತ್ನಿಸಿದ ಆತ, “ನನ್ನ ತಾಯಿ ನಿವೃತ್ತ ಐಎಎಸ್ (IAS) ಅಧಿಕಾರಿ” ಎಂದು ಕೂಗಾಡಿದ್ದಾನೆ.

ಪ್ರಸ್ತುತ ಸಂತ್ರಸ್ತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡಿಸಿಪಿ (ವೆಸ್ಟ್) ಎಸ್.ಎಂ. ಕಾಸಿಂ ಅಬಿದಿ ಅವರು ಘಟನೆಯ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ