ಉಜ್ಬೇಕಿಸ್ತಾನ್ ನಲ್ಲಿ ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ಕೊಲೆ: ಬಲವಂತದ ಧರ್ಮ ಮತಾಂತರದ ಆರೋಪ
ನವದೆಹಲಿ: ಉಜ್ಬೇಕಿಸ್ತಾನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಕೇರಳ ಮೂಲದ 21 ವರ್ಷದ ವಿದ್ಯಾರ್ಥಿನಿಯನ್ನು ಸಹಪಾಠಿಯೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಧರ್ಮ ಮತಾಂತರ ಹೊಂದುವಂತೆ ಆಕೆಗೆ ನಿರಂತರವಾಗಿ ನೀಡಲಾಗುತ್ತಿದ್ದ ಒತ್ತಡ ಹಾಗೂ ಕಿರುಕುಳವೇ ಈ ಕೊಲೆಗೆ ಕಾರಣ ಎಂದು ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಕೇರಳದ ಹರಿಪ್ಪಾಡ್ ಮೂಲದ ಸಾವರಿಯಾ ಬಸಂತ್ ಉಜ್ಬೇಕಿಸ್ತಾನ್ ನ ಬುಖಾರಾ ಸ್ಟೇಟ್ ಮೆಡಿಕಲ್ ಇನ್ ಸ್ಟಿಟ್ಯೂಟ್ ನಲ್ಲಿ ಮೊದಲ ವರ್ಷದ ವೈದ್ಯಕೀಯ (MBBS) ವಿದ್ಯಾರ್ಥಿನಿಯಾಗಿದ್ದರು. ಇವರನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿಯಾದ, ಅದೇ ಕಾಲೇಜಿನ ಸಹಪಾಠಿ ಸದರುಲ್ ಅನಾಮ್ (22) ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಜ್ಬೇಕಿಸ್ತಾನ್ ಪೊಲೀಸರು ಆರೋಪಿ ಅನಾಮ್ ನನ್ನು ಈಗಾಗಲೇ ಬಂಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಾವರಿಯಾ ತನ್ನ ಧರ್ಮವನ್ನು ಬದಲಾಯಿಸುವಂತೆ ಆರೋಪಿ ನೀಡುತ್ತಿದ್ದ ಒತ್ತಾಯಕ್ಕೆ ಮಣಿಯದಿದ್ದಾಗ, ಆಕೆಯ ಮೇಲೆ ನಿರಂತರವಾಗಿ ದೈಹಿಕ ಹಲ್ಲೆ ನಡೆಸಲಾಗುತ್ತಿತ್ತು ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕಿರುಕುಳದ ಬಗ್ಗೆ ಕಾಲೇಜಿನ ಇತರ ಸಹಪಾಠಿಗಳಿಗೂ ತಿಳಿದಿತ್ತು ಎಂದು ಕುಟುಂಬದವರು ಹೇಳಿದ್ದಾರೆ.
ಸಾವರಿಯಾ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದ್ದು, ಕುಟುಂಬದವರ ಮನವಿಯ ಮೇರೆಗೆ ಕೇರಳದ ಆಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ಆಕೆಯ ಮೇಲೆ ದೈಹಿಕ ಹಲ್ಲೆ ನಡೆದಿರುವ ಗುರುತುಗಳು ಪತ್ತೆಯಾಗಿವೆ ಎಂದು ಹರಿಪ್ಪಾಡ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಂದೆಯ ದೂರಿನ ಮೇರೆಗೆ ಕೇರಳದಲ್ಲೂ ಕೊಲೆ ಪ್ರಕರಣ ದಾಖಲಾಗಿದ್ದು, ವಿದೇಶದಲ್ಲಿ ನಡೆದ ಈ ಅಪರಾಧದ ಕಾನೂನು ಪ್ರಕ್ರಿಯೆಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಉಜ್ಬೇಕಿಸ್ತಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತ ಕುಟುಂಬಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ತಿಳಿಸಿದೆ. ರಾಯಭಾರ ಕಚೇರಿಯ ರಾಯಭಾರಿಗಳು ಈಗಾಗಲೇ ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದು, ಪ್ರಕರಣದ ಮುಂದಿನ ತನಿಖೆಗಾಗಿ ಉಜ್ಬೇಕಿಸ್ತಾನ್‌ನ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























