ಲಸಿಕೆಯಿಂದ ಮಗು ಸತ್ತು ಹೋಯ್ತು ಎಂದಿದ್ದ ತಾಯಿ ನಿಜವಾದ ಹಂತಕಿ:  ಅಂದು ಕಣ್ಣೀರು ಹಾಕಿದ್ದಾಕೆಯ ಅಸಲಿ ಮುಖ ಜಗಜ್ಜಾಹೀರು! - Mahanayaka

ಲಸಿಕೆಯಿಂದ ಮಗು ಸತ್ತು ಹೋಯ್ತು ಎಂದಿದ್ದ ತಾಯಿ ನಿಜವಾದ ಹಂತಕಿ:  ಅಂದು ಕಣ್ಣೀರು ಹಾಕಿದ್ದಾಕೆಯ ಅಸಲಿ ಮುಖ ಜಗಜ್ಜಾಹೀರು!

andrea shaw
10/07/2026

ವಾಷಿಂಗ್ಟನ್: ಬಾಲ್ಯದ ನಿಯಮಿತ ಲಸಿಕೆಗಳಿಂದಲೇ ತನ್ನ 18 ತಿಂಗಳ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕವಾಗಿ ಸುಳ್ಳು ಆರೋಪ ಮಾಡಿದ್ದ ಅಮೆರಿಕದ ಮಹಿಳೆಯೊಬ್ಬಳ ಅಸಲಿ ಮುಖ ಬಯಲಾಗಿದೆ. ಆಕೆಯೇ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದ್ದು, ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಅಮೆರಿಕದ ಇದಾಹೊ (Idaho) ಪ್ರಾಂತ್ಯದ ಆಂಡ್ರಿಯಾ ಶಾ (23) ಎಂಬಾಕೆಯೇ ಈ ಕೃತ್ಯ ಎಸಗಿದ ಕ್ರೂರಿ ತಾಯಿ.

ಮೇ 2025ರಲ್ಲಿ ಆಂಡ್ರಿಯಾಳ 18 ತಿಂಗಳ ಅವಳಿ ಮಕ್ಕಳಾದ ಡಲ್ಲಾಸ್ ಮತ್ತು ಟೈಸನ್ ನಿಗೂಢವಾಗಿ ಸಾವನ್ನಪ್ಪಿದ್ದರು. ಮಕ್ಕಳ ಸಾವಿನ ಬೆನ್ನಲ್ಲೇ ಈಕೆ ಲಸಿಕೆ ವಿರೋಧಿ ಚಳವಳಿಯ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದಳು. ಜ್ವರ ಮತ್ತು ಇತರ ಸಾಮಾನ್ಯ ಕಾಯಿಲೆಗಳಿಗೆ ನೀಡಲಾಗುವ ಲಸಿಕೆಯನ್ನು ಪಡೆದ ಕೆಲವೇ ದಿನಗಳಲ್ಲಿ ತನ್ನ ಮಕ್ಕಳು ತೀವ್ರ ಸುಸ್ತು ಮತ್ತು ಭೇದಿಯಿಂದ ಬಳಲಿ ಮೃತಪಟ್ಟಿದ್ದಾರೆ ಎಂದು ಆಕೆ ಆನ್‌ಲೈನ್ ಕಾರ್ಯಕ್ರಮಗಳಲ್ಲಿ ಕಣ್ಣೀರು ಹಾಕಿದ್ದಳು. ಅಷ್ಟೇ ಅಲ್ಲದೆ, ಲಸಿಕೆಗಳ ಸುರಕ್ಷತೆಯ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿ ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ವಿರುದ್ಧ ಹೂಡಲಾದ ಮೊಕದ್ದಮೆಯಲ್ಲೂ ಈಕೆ ಭಾಗಿಯಾಗಿದ್ದಳು.

ತನಿಖೆಯಲ್ಲಿ ಬಯಲಾದ ಸತ್ಯ:

ಸುಮಾರು ಒಂದು ವರ್ಷಗಳ ಕಾಲ ನಡೆದ ಸುದೀರ್ಘ ಪೊಲೀಸ್ ತನಿಖೆಯ ನಂತರ, ಜೂನ್ 29ರಂದು ನ್ಯಾಯಾಲಯದ ಗ್ರಾಂಡ್ ಜ್ಯೂರಿ ಆಂಡ್ರಿಯಾಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆಕೆ ಉದ್ದೇಶಪೂರ್ವಕವಾಗಿಯೇ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ (Suffocation) ಕೊಂದಿದ್ದಾಳೆ ಎಂದು ಪ್ರಾಸಿಕ್ಯೂಟರ್‌ ಗಳು ಸಾಬೀತುಪಡಿಸಿದ್ದಾರೆ.

ಜೂನ್ 30ರಂದು ಆಕೆಯನ್ನು ಪೊಲೀಸರು ಬಂಧಿಸಿದ್ದು, ಸದ್ಯ ಆಕೆಗೆ $2 ಮಿಲಿಯನ್ (ಸುಮಾರು 16 ಕೋಟಿಗೂ ಅಧಿಕ ರೂಪಾಯಿ) ಬಾಂಡ್‌ ನೊಂದಿಗೆ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಒಂದು ವೇಳೆ ಕೋರ್ಟ್‌ನಲ್ಲಿ ಈಕೆಯ ಮೇಲಿನ ಆರೋಪ ಸಂಪೂರ್ಣ ಸಾಬೀತಾದರೆ, ಈಕೆಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಸಾಧ್ಯತೆಯಿದೆ.

ವಿಷಾದದ ಸಂಗತಿಯೆಂದರೆ, ಆಂಡ್ರಿಯಾ ಇತ್ತೀಚೆಗಷ್ಟೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯದ ಕೋರ್ಟ್ ಆದೇಶದ ಪ್ರಕಾರ, ಈಕೆಗೆ ತನ್ನ ನವಜಾತ ಶಿಶು ಸೇರಿದಂತೆ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಸಂಪರ್ಕಿಸಲು ಅವಕಾಶ ನೀಡಲಾಗಿಲ್ಲ. ಲಸಿಕೆಯ ಮೇಲೆ ಗೂಬೆ ಕೂರಿಸಿ, ಹೆತ್ತ ಮಕ್ಕಳನ್ನೇ ಕೊಂದ ತಾಯಿಯ ಈ ಕ್ರೂರ ಕೃತ್ಯ ಈಗ ಅಮೆರಿಕಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ