ಬಸ್ಸಿನಲ್ಲಿ ಗುಪ್ತಾಂಗ ಪ್ರದರ್ಶಿಸಿ, ಲೈಂಗಿಕ ಕಿರುಕುಳ: ಕಂಡೆಕ್ಟರ್ ಬಂಧನ
ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅವರ ಮುಂದೆ ವಿಕೃತಿ ಪ್ರದರ್ಶಿಸಿದ ಆರೋಪದಲ್ಲಿ ಖಾಸಗಿ ಬಸ್ ಕಂಡಕ್ಟರ್ ನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಶನಿವಾರ (ಜುಲೈ 11) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಲ್ಲೇರಿ ನಿವಾಸಿ ಇರ್ಫಾನ್ (32) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು, ಮಂಗಳೂರು ಮತ್ತು ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ.
ಜುಲೈ 9ರ ಗುರುವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಮಂಗಳೂರು ಮತ್ತು ವಿಟ್ಲ ನಡುವೆ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಈ ಅಸಹ್ಯಕರ ಘಟನೆ ನಡೆದಿದೆ. ಬಸ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಂಡಕ್ಟರ್ ಇರ್ಫಾನ್ ವಿಕೃತವಾಗಿ ವರ್ತಿಸಲು ಆರಂಭಿಸಿದ್ದಾನೆ.
ವಿದ್ಯಾರ್ಥಿನಿಯರ ಎದುರೇ ತನ್ನ ಮರ್ಮಾಂಗ ಪ್ರದರ್ಶಿಸಿ, ವಿದ್ಯಾರ್ಥಿನಿಯರನ್ನು ಬಸ್ ನ ಹಿಂದಿನ ಸೀಟಿಗೆ ಬರುವಂತೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವಿಕೃತ ಹಾಗೂ ಅಸಭ್ಯ ವರ್ತನೆಯಿಂದ ತೀವ್ರ ಆಘಾತಕ್ಕೊಳಗಾದ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿನಿಯರ ದೂರಿನ ಅನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಂಡಕ್ಟರ್ ನನ್ನು ಬಂಧಿಸಿದ್ದು, ಸದ್ಯ ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























