ಸೋನಮ್ ವಾಂಗ್ ಚುಕ್ ಅವರನ್ನು ಕಿಡ್ ನ್ಯಾಪ್ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ: ದೆಹಲಿ ಪೊಲೀಸ್ ವಿರುದ್ಧ ಸಿಜೆಪಿ ಅಭಿಜೀತ್ ದಿಪ್ಕೆ ವಾಗ್ದಾಳಿ
ನವದೆಹಲಿ: ನೀಟ್ ಯುಜಿ (NEET UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳದಿಂದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ತೆರವುಗೊಳಿಸಿರುವುದನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ತೀವ್ರವಾಗಿ ಖಂಡಿಸಿದ್ದಾರೆ.
ದೆಹಲಿ ಪೊಲೀಸರು ವಾಂಗ್ ಚುಕ್ ಅವರನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಿರುವ ದಿಪ್ಕೆ, “ಸೋನಮ್ ವಾಂಗ್ ಚುಕ್ ಅವರನ್ನು ಅಪಹರಿಸುವ ಮೂಲಕ ದೆಹಲಿ ಪೊಲೀಸರು ದೊಡ್ಡ ತಪ್ಪು ಮಾಡಿದ್ದಾರೆ” ಎಂದು ಗುಡುಗಿದ್ದಾರೆ.
ಈ ಪ್ರತಿಭಟನೆಯ ಪ್ರಮುಖ ಮುಖವಾಗಿ ಗುರುತಿಸಿಕೊಂಡಿರುವ ಸೋನಮ್ ವಾಂಗ್‌ಚುಕ್ ಅವರು ಕಳೆದ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿರುವ ವೈದ್ಯರ ಪ್ರಕಾರ, ಉಪವಾಸದ ಅವಧಿಯಲ್ಲಿ ಅವರು ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದು, ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಇದೇ ವೇಳೆ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿರುವ ಅಭಿಜೀತ್ ದಿಪ್ಕೆ, “ಸೋನಮ್ ವಾಂಗ್ ಚುಕ್ ಅವರನ್ನು ಅಪಹರಿಸಿ ನೀವು ದೊಡ್ಡ ತಪ್ಪು ಮಾಡಿದ್ದೀರಿ. ಇದರಿಂದಾಗಿ ಜಂತರ್ ಮಂತರ್ ಈಗ ಪ್ರತಿಭಟನಾಕಾರರಿಂದ ತುಂಬಿ ಹೋಗಿದೆ. ಇನ್ನು ಮುಂದೆಯೂ ನೀವು ನಮ್ಮನ್ನು ಇಲ್ಲಿ ತಡೆದರೆ, ಇಡೀ ದೆಹಲಿಯೇ ಪ್ರತಿಭಟನಾಕಾರರಿಂದ ತುಂಬಿ ಹೋಗಲಿದೆ,” ಎಂದು ಎಚ್ಚರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























