ರಾಜ್ಯದ ಆಸ್ಪತ್ರೆ, ಶಾಲೆಗಳ ಕ್ಯಾಂಟೀನ್ ​ಗಳಲ್ಲಿ ಜಂಕ್‌ ಫುಡ್​ ಮಾರಾಟಕ್ಕೆ ಬ್ರೇಕ್‌: ಸಚಿವ ಯು.ಟಿ.ಖಾದರ್ - Mahanayaka

ರಾಜ್ಯದ ಆಸ್ಪತ್ರೆ, ಶಾಲೆಗಳ ಕ್ಯಾಂಟೀನ್ ​ಗಳಲ್ಲಿ ಜಂಕ್‌ ಫುಡ್​ ಮಾರಾಟಕ್ಕೆ ಬ್ರೇಕ್‌: ಸಚಿವ ಯು.ಟಿ.ಖಾದರ್

u t khadar
19/07/2026

ಮಂಗಳೂರು: ರಾಜ್ಯಾದ್ಯಂತ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್‌ ಗಳಲ್ಲಿ ಆರೋಗ್ಯಕರ ಆಹಾರ ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿ, ಜಂಕ್ ಫುಡ್‌ ಗಳ ಮಾರಾಟವನ್ನು ನಿಷೇಧಿಸುವ ನಿಯಮ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನ ಸರ್ಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ನಡೆದ ಕುಂದುಕೊರತೆ ಹಾಗೂ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಈ ಮಹತ್ವದ ನಿರ್ಧಾರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಯುವ ಜನತೆ ಜಂಕ್‌ ಫುಡ್‌ ಗೆ ಹೆಚ್ಚಾಗಿ ಅವಲಂಬಿತರಾಗುತ್ತಿದ್ದಾರೆ. ಇದು ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಶಾಲಾ ಮತ್ತು ಆಸ್ಪತ್ರೆ ಹಂತದಲ್ಲೇ ಇದನ್ನು ನಿಯಂತ್ರಿಸಲು ಎಸ್‌ಎಸ್‌ಎಲ್‌ಸಿವರೆಗಿನ ಶಾಲೆ ಹಾಗೂ ಆಸ್ಪತ್ರೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಹಾರ ಮತ್ತು ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದರು.

ಮಾಲ್‌ ಗಳು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಮಾರಾಟವಾಗುವ ಆಹಾರದ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷಿಸಲಾಗುವುದು. ಕಳಪೆ ಆಹಾರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಂಗಳೂರಿನಲ್ಲಿರುವ ಆಹಾರ ಗುಣಮಟ್ಟ ತಪಾಸಣಾ ಲ್ಯಾಬ್‌ ಅನ್ನು ಪಿಪಿಪಿ (PPP) ಮಾದರಿಯಲ್ಲಿ ಅತ್ಯುತ್ಕೃಷ್ಟ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳ ವೈದ್ಯರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ನಿಯಮದಲ್ಲಿರುವ ನ್ಯೂನತೆಗಳನ್ನು (ಪತಿ–ಪತ್ನಿ ಬೇರೆ ಬೇರೆ ಕಡೆ ವರ್ಗಾವಣೆ, ವಿಕಲಚೇತನರ ಸಮಸ್ಯೆಗಳು) ಸರಿಪಡಿಸಲು ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದ್ದು, ಮುಂದಿನ ವರ್ಗಾವಣೆ ವೇಳೆಗೆ ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದರೂ, ಸರ್ಕಾರ ರೋಗಿಯೊಬ್ಬರಿಗೆ ಎಷ್ಟು ಖರ್ಚು ಮಾಡುತ್ತದೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು. ಅದಕ್ಕಾಗಿ ಡಿಸ್ಚಾರ್ಜ್ ಆಗುವಾಗ ಹಣ ಪಡೆಯದೆಯೇ ಚಿಕಿತ್ಸಾ ವೆಚ್ಚದ ಬಿಲ್ ನೀಡುವ ವ್ಯವಸ್ಥೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದಲೇ ಪ್ರಾಯೋಗಿಕವಾಗಿ ಆರಂಭಿಸಿ, ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಅಂತ ತಿಳಿಸಿದ್ರು.

ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಎಂಆರ್‌ ಐ ಸ್ಕ್ಯಾನಿಂಗ್‌ ಗೆ ಬಳಸುವ ಹೀಲಿಯಂ ಕೆಮಿಕಲ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಹಳೆಯ ಮಿಷಿನ್‌ ಗಳಲ್ಲಿ ಸ್ಕ್ಯಾನಿಂಗ್ ಮಾಡಲು ತೊಂದರೆಯಾಗುತ್ತಿರುವುದನ್ನು ಗಮನಿಸಿದ ಸಚಿವರು, ರೋಗಿಗಳಿಗೆ ತೊಂದರೆಯಾಗದಂತೆ ವೆನ್ಲಾಕ್ ಆಸ್ಪತ್ರೆಯ ದರದಲ್ಲೇ ಕೆಎಂಸಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಕೊಡಲು ಸೂಚಿಸಿದರು.

ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಜಿ.ಪಂ. ಸಿಇಒ ವಿನಾಯಕ ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ