ದಾಂಡೇಲಿ ಸ್ಟರ್ಲಿಂಗ್ ರೆಸಾರ್ಟ್ ನಲ್ಲಿ ಜಿಪ್ ಲೈನ್ ದುರಂತ: 30–40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗನಿಗೆ ಗಂಭೀರ ಗಾಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಾಂಡೇಲಿಯ ‘ಸ್ಟರ್ಲಿಂಗ್ ರಿವರ್ ರೆಸಾರ್ಟ್’ನಲ್ಲಿ ಜಿಪ್ ಲೈನ್ ಆಟವಾಡುವಾಗ ಭೀಕರ ದುರಂತವೊಂದು ಸಂಭವಿಸಿದೆ. ಜಿಪ್ ಲೈನ್ ನ ಲಾಕ್ ಕಟ್ ಆದ ಪರಿಣಾಮ ವಿಜಯಪುರ ಮೂಲದ ಯುವಕರೊಬ್ಬರು 30 ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಜಯಪುರ ನಗರದ ನಿವಾಸಿ ಕುಬೇರ ಸುರಪುರ ಗಾಯಗೊಂಡ ಯುವಕ. ಕಳೆದ ಜುಲೈ 3 ರಂದು ಕುಬೇರ ಅವರು ತಮ್ಮ ಸಹೋದರ ಪ್ರಶಾಂತ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ ಗೆ ಪ್ರವಾಸಕ್ಕೆ ಬಂದಿದ್ದಾಗ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಹೋದರನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ದೃಶ್ಯ:
ಕುಬೇರ ಅವರು ಜಿಪ್ ಲೈನ್ ನಲ್ಲಿ ಸಾಗುತ್ತಿದ್ದಾಗ ಹಠಾತ್ತನೆ ಅದರ ಲಾಕ್ ಕಟ್ ಆಗಿದೆ. ಪರಿಣಾಮ ಅವರು ಸುಮಾರು 30 ರಿಂದ 40 ಅಡಿ ಎತ್ತರದಿಂದ ನೇರವಾಗಿ ಕೆಳಗೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಕೆಳಗೆ ನಿಂತು ವಿಡಿಯೋ ಮಾಡುತ್ತಿದ್ದ ಅವರ ಸಹೋದರ ಪ್ರಶಾಂತ ಅವರ ಮೊಬೈಲ್ ಫೋನ್ ನಲ್ಲಿ ಲೈವ್ ಆಗಿ ಸೆರೆಯಾಗಿದೆ. ಬಿದ್ದ ರಭಸಕ್ಕೆ ಕುಬೇರ ಅವರ ಎರಡೂ ಕೈ ಹಾಗೂ ಎರಡೂ ಕಾಲುಗಳ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ.
ಅಪಘಾತ ನಡೆದ ತಕ್ಷಣ ಗಾಯಾಳುವನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸದ್ಯ ಪರಿಸ್ಥಿತಿ ಗಂಭೀರ ಆಗಿರುವುದರಿಂದ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಈಗಾಗಲೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನುಳಿದ ಕೈಕಾಲುಗಳ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಟರ್ಲಿಂಗ್ ರಿವರ್ ರೆಸಾರ್ಟ್ ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇರುವುದೇ ಈ ಘಟನೆಗೆ ನೇರ ಕಾರಣ ಎಂದು ಗಾಯಾಳುವಿನ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಪಘಾತ ನಡೆದ ಆರಂಭದಲ್ಲಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ರೆಸಾರ್ಟ್ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ, ಇದೀಗ ಚಿಕಿತ್ಸಾ ವೆಚ್ಚ ನೀಡಲು ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರೆಸಾರ್ಟ್ ಮ್ಯಾನೇಜರ್, ಜಿಪ್ ಲೈನ್ ಅಪಘಾತ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಗಿದ್ದಲ್ಲ, ತಾಂತ್ರಿಕ ಕಾರಣದಿಂದ ಸಂಭವಿಸಿದ ಆಕಸ್ಮಿಕ ಘಟನೆಯಾಗಿದೆ ಎಂದಿದ್ದಾರೆ. ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ, ಶೀಘ್ರದಲ್ಲೇ ವಿಜಯಪುರಕ್ಕೆ ತೆರಳಿ ಯುವಕನ ಕುಟುಂಬದವರೊಂದಿಗೆ ಖುದ್ದಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























