ಕಾಡುಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತುಳಿದು ವ್ಯಕ್ತಿ ಸಾವು; ರಹಸ್ಯವಾಗಿ ಶವ ಹೂತಿಟ್ಟಿದ್ದ ಮೂವರ ಬಂಧನ!
ಚಿಕ್ಕಮಗಳೂರು: ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಶವವನ್ನು ರಹಸ್ಯವಾಗಿ ಹೂತುಹಾಕಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕಡೂರು ತಾಲೂಕಿನ ಯಗಟಿ ಸಮೀಪದ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕರಿಯಪ್ಪ (52) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಕರಿಯಪ್ಪ ಅವರು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಈ ವೇಳೆ ಸಮೀಪದ ಜಮೀನೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕರಿಯಪ್ಪ ಆ ಮಾರ್ಗದಲ್ಲಿ ನಡೆದುಕೊಂಡು ಹೋಗಿರುವುದು ಪತ್ತೆಯಾಗಿತ್ತು.
ಅದೇ ಸಿಸಿಟಿವಿ ದೃಶ್ಯದಲ್ಲಿ ಕೆಲ ಗಂಟೆಗಳ ಬಳಿಕ ಮತ್ತೋರ್ವ ವ್ಯಕ್ತಿ ಅದೇ ಮಾರ್ಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡುಬಂದಿದೆ. ತಕ್ಷಣ ಜಾಗರೂಕರಾದ ಪೊಲೀಸರು ಸಿಸಿಟಿವಿಯಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಇಡೀ ಪ್ರಕರಣದ ಸತ್ಯಾಂಶ ಹೊರಬಿದ್ದಿದೆ.
ಕಾಡುಹಂದಿ ಬೇಟೆಗಾಗಿ ವಿದ್ಯುತ್ ತಂತಿ ಅಳವಡಿಸಿದ್ದ ವೇಳೆ ಕರಿಯಪ್ಪ ಅದಕ್ಕೆ ಸಿಲುಕಿ ಅಕಸ್ಮಾತ್ ಮೃತಪಟ್ಟಿದ್ದರು. ಇದರಿಂದ ಭೀತರಾದ ಬೇಟೆಗಾರರು ಯಾರಿಗೂ ತಿಳಿಯದಂತೆ ಶವವನ್ನು ಬೇರೆಡೆ ಒಯ್ದು ಹೂತುಹಾಕಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಗಟಿ ಠಾಣೆಯ ಪೊಲೀಸರು ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತರೀಕೆರೆ ಎಸಿ ಎದುರು ಶವ ಹೊರಕ್ಕೆ:
ಘಟನಾ ಸ್ಥಳಕ್ಕೆ ಯಾರೂ ಹೋಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ತರೀಕೆರೆ ಸಹಾಯಕ ಕಮಿಷನರ್ (AC) ಅವರ ಸಮ್ಮುಖದಲ್ಲಿ ಹೂತಿಡಲಾಗಿದ್ದ ಕರಿಯಪ್ಪ ಅವರ ಶವವನ್ನು ಇಂದು ಮಹಜರು ನಡೆಸಿ ಹೊರತೆಗೆಯಲಾಗುತ್ತದೆ.
ಈ ಕುರಿತು ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























