ಬಿಜೆಪಿಯ ಕಳಪೆ ಪ್ರದರ್ಶನದ ನಡುವೆ ಆರ್ ಎಸ್ ಎಸ್ ಜೊತೆಗಿನ ಸಂಬಂಧ ಹಳಸಿತೇ?
ನವದೆಹಲಿ: ಬಿಜೆಪಿ ಅಂದ್ರೆ ಆರ್ ಎಸ್ ಎಸ್, ಆರ್ ಎಸ್ ಎಸ್ ಅಂದ್ರೆ ಬಿಜೆಪಿ ಅನ್ನುವ ಮಟ್ಟಕ್ಕೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನಡುವೆ ಸಂಬಂಧಗಳಿವೆ. ಆದರೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿ ಬಿಜೆಪಿಯ ನೇತೃತ್ವ ವಹಿಸಿದ ಬಳಿಕ ಈ ಸಂಬಂಧ ಹಳಸಿತೇ ಎನ್ನುವ ಅನುಮಾನಗಳು ಸದ್ಯ ಕೇಳಿ ಬಂದಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಟಾರ್ಗೆಟ್ ಮಾಡಿ ಬಿಜೆಪಿ ಕಣಕ್ಕಿಳಿದಿತ್ತು. ಆದರೆ ಬಿಜೆಪಿ ತನ್ನ ಸ್ವಂತ ಶಕ್ತಿ ಪ್ರದರ್ಶಿಸುವಲ್ಲಿ ವಿಫಲವಾಗಿತ್ತು. ಇದೀಗ ಎನ್ ಡಿಎ ಮೈತ್ರಿಕೂಟದ ಬಲದಿಂದ ಬಿಜೆಪಿ ಅಧಿಕಾರಕ್ಕೇರಿದೆ. ಅದರೊಂದಿಗೆ ಮಿತ್ರ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.
ಬಿಜೆಪಿ ಈ ಹಿಂದಿನ ಚುನಾವಣೆಯಲ್ಲಿ ಬಹುಮತ ಪಡೆದುಕೊಂಡಾಗ ಆರ್ ಎಸ್ ಎಸ್ ನಾಯಕರು, ಇದು ಆರ್ ಎಸ್ ಎಸ್ ನ ಶಕ್ತಿ, ಆರ್ ಎಸ್ ಎಸ್ ನ ಸಿದ್ಧಾಂತದ ಗೆಲುವು ಎಂದೇ ಬಿಂಬಿಸಿದ್ದರು. ದೇಶಾದ್ಯಂತ ಆರ್ ಎಸ್ ಎಸ್ ನ ಸಿದ್ಧಾಂತರ ಆಧಾರದಲ್ಲಿ ಬಿಜೆಪಿ ಮತಗಳಿಸಿತ್ತು ಎಂದು ಬಿಂಬಿಸಲಾಗಿತ್ತು. ಆದರೆ ಇದೀಗ ಬಿಜೆಪಿ ಬಹುಮತ ಪಡೆದುಕೊಂಡಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಆರ್ ಎಸ್ ಎಸ್ ನಾಯಕರು ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿರುವುದು ಕಂಡು ಬಂದಿದೆ. ಈ ಮೂಲಕ ಆರ್ ಎಸ್ ಎಸ್ ನಾಯಕರ ಸಮಯಸಾಧಕತನದ ವರ್ತನೆ ಅಚ್ಚರಿಗೆ ಕಾರಣವಾಗಿದೆ.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬಿಜೆಪಿ ಸೋಲಿಗೆ ಅಹಂಕಾರ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದರು. ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ನಾವು ಸ್ಪರ್ಧೆ ರೀತಿಯಲ್ಲಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಲ್ಲ ಎಂದು ಮೋಹನ್ ಭಾಗವತ್ ಕಿಡಿಕಾರಿದ್ದರು.
ಇದೀಗ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಬಿಜೆಪಿ ದುರಹಂಕಾರಿಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ದುರಹಂಕಾರಿಯಾದ್ದರಿಂದಲೇ ಅವರನ್ನು ಭಗವಾನ್ ರಾಮ ಅವರನ್ನು 241 ಸ್ಥಾನಕ್ಕೆ ನಿಲ್ಲಿಸಿದರು ಎಂದು ವ್ಯಂಗ್ಯವಾಡಿದ್ದಾರೆ. ಜೈಪುರ ಸಮೀಪದ ಕನೋಟಾದಲ್ಲಿ ಆಯೋಜಿಸಿದ್ದ ರಾಮರಥ ಅಯೋಧ್ಯೆ ಯಾತ್ರೆ ದರ್ಶನ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಇಂದ್ರೇಶ್ ಕುಮಾರ್ ಬಿಜೆಪಿ ವಿರುದ್ಧವೇ ಹೇಳಿಕೆ ನೀಡಿ ಅಚ್ಚರಿ ಸೃಷ್ಟಿಸಿದರು.
ಯಾರ ಹೆಸರನ್ನೂ ತೆಗೆದುಕೊಳ್ಳದೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್, ಚುನಾವಣಾ ಫಲಿತಾಂಶಗಳು ಬಿಜೆಪಿಯವರ ಮನೋಭಾವವನ್ನು ಬಿಂಬಿಸುತ್ತವೆ. ಅವರು ಅಹಂಕಾರಿಯಾಗಿಬಿಟ್ಟಿದ್ದರು. ಬಿಜೆಪಿ ಪಕ್ಷ ಮೊದಲು ಭಕ್ತಿ ತೋರಿ ನಂತರ ದುರಹಂಕಾರಿಯಾಯಿತು. ಇದಕ್ಕಾಗಿಯೇ ಭಗವಂತ ರಾಮ ಅವರನ್ನು 241 ರಲ್ಲಿ ನಿಲ್ಲಿಸಿದರು ಎಂದರು.
ಬಿಜೆಪಿಯ ಜನಪ್ರಿಯತೆ ಕುಸಿತ?
ಕಳೆದ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ ಬಿಜೆಪಿಯ ಜನಪ್ರಿಯತೆ ಕುಸಿಯುತ್ತಿದೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಮತದಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಸೂಕ್ಷ್ಮತೆಗಳನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಬಿಜೆಪಿ ಸೋತರೆ ತಮ್ಮ ಮೇಲಾಗುವ ಪರಿಣಾಮಗಳನ್ನು ತಡೆಯಲು ಸೇಫ್ ಗೇಮ್ ಆಡುತ್ತಿದ್ದಾರೆಯೇ? ಎನ್ನುವ ಅನುಮಾನಗಳು ಕೇಳಿ ಬಂದಿವೆ.
ಬಿಜೆಪಿಯ ಗೆಲುವಿನ ಸಿಹಿಯನ್ನು ಮಾತ್ರ ಆರ್ ಎಸ್ ಎಸ್ ನಾಯಕರು ಹಂಚಿಕೊಂಡರು. ಆದರೆ, ಬಿಜೆಪಿಯ ಸೋಲಿನ ಕಹಿಯನ್ನು ಸ್ವೀಕರಿಸಲು ಸಿದ್ಧರಾಗದೇ ಅಹಂಕಾರದಿಂದ ಸೋಲಾಯಿತು ಎನ್ನುವ ಪ್ರವೃತ್ತಿ ಎಷ್ಟು ಸರಿ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























