ಆಹಾರ ಸಂರಕ್ಷಣೆ ಒಂದು ಅವಲೋಕನ - Mahanayaka
10:18 PM Friday 13 - December 2024

ಆಹಾರ ಸಂರಕ್ಷಣೆ ಒಂದು ಅವಲೋಕನ

food
07/10/2024

  • ಉದಂತ ಶಿವಕುಮಾರ್

1795 ನೆಯ ಇಸವಿ. ಆಗ ಫ್ರಾನ್ಸ್ ದೇಶದ ಚಕ್ರವರ್ತಿ ನೆಪೋಲಿಯನ್(Napoleon), ಅವನು ಪ್ರಪಂಚವನ್ನೇ ಗೆಲ್ಲಬೇಕೆಂದು ಹೊರಟ ಮಹತ್ವಕಾಂಕ್ಷಿ. ಆದರೆ ತನ್ನ ಸೈನಿಕರಿಗೆ ಆಹಾರವನ್ನು ಒದಗಿಸುವ ಕಾರ್ಯ ಅವನಿಗೆ ಅಷ್ಟು ಸುಲಭವಾಗಿರಲಿಲ್ಲ. ಆಹಾರ ಪದಾರ್ಥಗಳನ್ನು ಬಹಳ ದಿವಸ ಕೆಡದಂತೆ ಇಟ್ಟು ಅವುಗಳನ್ನು ಸೈನಿಕರಿಗೆ ಒದಗಿಸುವುದು ಹೇಗೆ ? ಎಂಬುದೇ ಅವನಿಗೆ ಒಂದು ದೊಡ್ಡ ಸಮಸ್ಯೆ ಆಗಿತ್ತು. ಇದಕ್ಕೆ ಸೂಕ್ತ ವಿಧಾನವನ್ನು ಕಂಡುಹಿಡಿದವರಿಗೆ 12,000 ಫ್ರಾಂಕ್, ಫ್ರಾನ್ಸ್ ದೇಶದ ನಾಣ್ಯಗಳನ್ನು ಕೊಡುವುದಾಗಿ ಘೋಷಿಸಿದ. ಫ್ರಾನ್ಸ್ ದೇಶದ ನಿಕೊಲಾಸ್ ಆಪರ್ತ್(Nicholas Aperth) ಎಂಬ ಪ್ರಜ್ಞಾವಂತ ಬಾಣಸಿಗ, ಆಹಾರ ಪದಾರ್ಥಗಳನ್ನು ಸೀಸೆಗಳಲ್ಲಿಟ್ಟು ವಿಶೇಷ ವಿಧಾನದಿಂದ ಅದನ್ನು ಕೆಡದಂತೆ ಇಡಬಹುದೆಂದು ಕಂಡುಹಿಡಿದು, ಆ ಬಹುಮಾನವನ್ನು ಪಡೆದ. ಇವನ ವಿಧಾನವೇ ಆಧುನಿಕ ಆಹಾರ ಸಂರಕ್ಷಣಾ(Food preservation) ವಿಜ್ಞಾನಕ್ಕೆ ತಳಹದಿಯಾಯಿತು. ಆದರೆ ಅವನಿಗೆ ಆಹಾರ ಪದಾರ್ಥಗಳನ್ನು ಸಂರಕ್ಷಿಸುವ ವಿಧಾನ ತಿಳಿದಿತ್ತೇ ಹೊರತು, ಅವು ಏಕೆ ಕೆಡುತ್ತವೆ ಎಂಬುದು ತಿಳಿದಿರಲಿಲ್ಲ. ಒಡೆದ ಹಾಲು, ಬೂಸ್ಟ್ ಬಂದ ತೆಂಗಿನ ಕಾಯಿ, ಕೊಳೆತ ಹಣ್ಣು ಕಾಯಿ ಪಲ್ಯಗಳು, ಕಿಲುಬಿದ ಮಜ್ಜಿಗೆ, ಕಮಟು ವಾಸನೆ ಬಂದ ಎಣ್ಣೆ ಇವು ನಿತ್ಯ ಜೀವನದಲ್ಲಿ ಕಾಣುವ ಕೆಲವು ಸಂಗತಿಗಳು. ಹೀಗೆ ಕೆಟ್ಟ ಪದಾರ್ಥಗಳನ್ನು ಯಾರು ತಾನೆ ಇಷ್ಟ ಪಡುವರು? ಇವುಗಳು ಕೆಡದೆ ಚೆನ್ನಾಗಿದ್ದರೆ ಬಳಕೆಗೆ ಬಂದಾವು. ಆಹಾರ ಪದಾರ್ಥಗಳು ಸೇವಿಸಲು ಯೋಗ್ಯವಾಗಿರುವಂಥ ಸ್ಥಿತಿಯಲ್ಲಿ ಬಹಳ ದಿವಸ ಕಾಪಾಡುವುದೇ ಆಹಾರ ಸಂರಕ್ಷಣೆ. ಬೇಕಾದಷ್ಟು ಬಳಸಿ, ಉಳಿದಿದ್ದನ್ನು ಮುಂದಿನ ದಿನಗಳಿಗಾಗಿ ಕೆಡದಂತೆ ರಕ್ಷಿಸಿಡುವುದೇ ಆಹಾರ ಸಂರಕ್ಷಣೆಯ ಗುರಿ. ಇದೇ ಆಹಾರ ಸ್ವಾವಲಂಬನೆಗೆ ಮೊದಲನೆಯ ಹೆಜ್ಜೆ.

ನಾವು ಬಳಸುವ ಆಹಾರ ಪದಾರ್ಥಗಳಲ್ಲಿ ಕೆಲವು ಬಹಳ ಬೇಗ ಕೆಡುವಂತಿದ್ದರೆ, ಮತ್ತೆ ಕೆಲವು ಬಹಳ ದಿವಸ ಚೆನ್ನಾಗಿರಬಲ್ಲುವು. ಹಣ್ಣು-ತರಕಾರಿಗಳು, ಮೀನು, ಮಾಂಸ, ಹಾಲು, ಮೊಟ್ಟೆ ಮುಂತಾದವು ಬೇಗ ಕೆಡುವ ಆಹಾರ ವಸ್ತುಗಳು. ಧಾನ್ಯಗಳು, ಬೆಳೆಗಳು ಮೊದಲಾದವು ದೀರ್ಘ ಕಾಲ ಇಡಬಹುದಾದ ಪದಾರ್ಥಗಳು. ಆದರೆ ಇವು ಅನೇಕ ವೇಳೆ ಹುಳು ಹುಪ್ಪಟೆಗಳಿಂದ ಹಾಳಾಗಬಲ್ಲವು. ಆಹಾರ ಪದಾರ್ಥಗಳು ಕೆಡಲು ಅನೇಕ ಕಾರಣಗಳು ಉಂಟು. ಆಘಾತ ಅಥವಾ ಪೆಟ್ಟಿನಿಂದಾಗಿ ಅವು ಹೊಡೆಯಬಹುದು. ಉದಾಹರಣೆಗೆ ಒಡೆದ ಮೊಟ್ಟೆ, ಜಜ್ಜಿ ಹೋದ ಹಣ್ಣುಗಳು, ಹೋಳಾಗಿರುವ ತೆಂಗಿನ ಕಾಯಿ ಇತ್ಯಾದಿ. ಇವು ಸ್ವಾಭಾವಿಕ ಸ್ಥಿತಿಯಲ್ಲಿ ಇರುವವರೆಗೂ ಬಹುಬೇಗ ಕೆಡುವುದಿಲ್ಲ. ಆದರೆ ಒಮ್ಮೆ ತಮ್ಮ ಆಕಾರವನ್ನು ಕಳೆದುಕೊಂಡುವೆಂದರೆ ಅವು ಹಾಳಾಗ ತೊಡಗಿದಂತೆಯೇ ಸರಿ. ಅನಂತರ ಅವು ಹಲವು ಕಾರಣಗಳಿಂದ ಕೆಡಲಾರಂಭಿಸುತ್ತವೆ. ಆದ್ದರಿಂದ ಇವುಗಳ ಸಾಗಣೆಯ ಸಮಯದಲ್ಲಿ ಆದಷ್ಟು ವಿಶೇಷ ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ಸೂಕ್ತಧಾರಕಗಳಲ್ಲಿ ಪ್ಯಾಕ್ ಮಾಡುವ ಮುನ್ನ ಸರಿಯಾದ ಪೂರ್ವಭಾವಿ ಉಪಚಾರಗಳನ್ನು ನಡೆಸಬೇಕು. ಇದರಿಂದ ಅವುಗಳನ್ನು ದೀರ್ಘಕಾಲ ಇಡಬಹುದು.

ಕೆಲವು ವೇಳೆ ಆಹಾರ ಪದಾರ್ಥಗಳು ಲೋಹ ಸಂಪರ್ಕದಿಂದ ಕೆಡಬಲ್ಲವು. ಹಿತ್ತಾಳೆ ಪಾತ್ರೆಯಲ್ಲಿಟ್ಟ ಮಜ್ಜಿಗೆ, ಮೊಸರು, ನಿಂಬೆ ಪಾನಕ ಸ್ವಲ್ಪ ಹೊತ್ತಿನಲ್ಲಿ ಕಿಲುಬು ಹಿಡಿಯುವವು. ಆದ್ದರಿಂದ ಈ ಬಗೆಯ ಆಹಾರ ವಸ್ತುಗಳನ್ನು ಇಡುವಾಗ ಧಾರಕಗಳ ಯುಕ್ತಾಯುಕ್ತತೆಯನ್ನು ಪರಿಶೀಲಿಸಬೇಕು. ಸರಿಯಾಗಿ ಕಲಾಯಿ ಮಾಡಿದ ಪಾತ್ರೆಗಳನ್ನು ಬಳಸಬೇಕು. ಎಣ್ಣೆ, ಬೆಣ್ಣೆ, ತುಪ್ಪಗಳನ್ನು ತೆರೆದ ಪಾತ್ರೆಗಳಲ್ಲಿ ಇಟ್ಟಾಗ ಗಾಳಿಯಲ್ಲಿರುವ ಆಮ್ಲಜನಕದ ಸಂಪರ್ಕದಿಂದ ಅವುಗಳಲ್ಲಿ ಕಮಟು ವಾಸನೆ ಬರುವುದು. ಇದೇ ರೀತಿ  ಚಕ್ಕಲಿ, ಸವಿಯಾದ ಲಡ್ಡು ಎಲ್ಲವೂ ಮೊದಮೊದಲು ಚೆನ್ನಾಗಿದ್ದರೂ ಕೆಲವೇ ದಿವಸಗಳಲ್ಲಿ ತಿನ್ನಲು ಯೋಗ್ಯವಾಗಿರುವುದಿಲ್ಲ. ಹುರಿದ ಗೋಡಂಬಿ, ಬಾದಾಮಿಗಳನ್ನು ಸರಿಯಾದ ಧಾರಕಗಳಲ್ಲಿ ಸೂಕ್ತ ವಾತಾವರಣದಲ್ಲಿ ಪ್ಯಾಕ್ ಮಾಡದಿದ್ದರೆ ಅವು ಬೇಗ ಕೆಡುವುವು. ಹೋಳು ಮಾಡಿದ ಬದನೆಕಾಯಿ, ಬಾಳೆಕಾಯಿ, ಸೇಬಿನ ಹಣ್ಣು ಕೆಲವೇ ಮಿನಿಟುಗಳಲ್ಲಿ ಕಂದು ಬಣ್ಣಕ್ಕೆ ತಿರುಗುವುದು. ಎನ್ ಜೈಮ್ ಎಂಬ ಕೆಲವು ರಾಸಾಯನಿಕಗಳಿಂದ. ಆದ್ದರಿಂದ ಇವುಗಳನ್ನು ಕತ್ತರಿಸಿದ ಕೂಡಲೇ ನೀರಿನಲ್ಲಿ ಅದ್ದಿಡಬೇಕು, ಇಲ್ಲವೇ ಆ ನೀರಿಗೆ ಹುಣಸೆ ಹುಳಿಯನ್ನು ಸೇರಿಸಬಹುದು. ಆಮ್ಲೀಯ ವಾತಾವರಣದಲ್ಲಿ ಎನ್ ಜೈಮ್ ಗಳು ನಿಷ್ಕ್ರಿಯವಾಗುವುದೇ ಇದಕ್ಕೆ ಕಾರಣ. ಹಣ್ಣು-ತರಕಾರಿಗಳಲ್ಲಿ, ಮಾಂಸದಲ್ಲಿ, ಮೊಟ್ಟೆಯಲ್ಲಿ ನೈಸರ್ಗಿಕವಾಗಿಯೇ ಈ ಬಗೆಯ ಎನ್ ಜೈಮ್ ಗಳು ಇರುತ್ತವೆ. ಆದ್ದರಿಂದ ಇವನು ನಿಸ್ಕ್ರೀಯಗೊಳಿಸುವ ಉದ್ದೇಶದಿಂದ ಆಹಾರ ಸಂರಕ್ಷಣ ಕೈಗಾರಿಕೆಗಳಲ್ಲಿ ಈ ಪದಾರ್ಥಗಳನ್ನು ಕುದಿಸುವ ನೀರಿನಲ್ಲಿ ಸ್ವಲ್ಪ ಹೊತ್ತು ಇಟ್ಟು ಅನಂತರ ಸಂಸ್ಕರಿಸುತ್ತಾರೆ. ಈ ಶಾಕೋಪಚಾರದಿಂದ ಎನ್ ಜೈಮ್ ಗಳ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ.

ಇವುಗಳಲ್ಲದೆ ಆಹಾರ ಪದಾರ್ಥಗಳು ಕೆಡುವುದಕ್ಕೆ ಬಹುಮುಖ್ಯ ಕಾರಣವೆಂದರೆ ಸೂಕ್ಷ್ಮಜೀವಿಗಳು. ಉದಾಹರಣೆಗೆ ಬ್ಯಾಕ್ಟೀರಿಯ(Bacteria), ಈಸ್ಟ್, ಮೋಲ್ಡ್. ಸಾರು ಹುಳಿ ಬರುವುದು.  ಅದನ್ನು ಹಾಗೆಯೇ ಬಿಟ್ಟರೆ ಅನಂತರ ಒಂದು ಬಗೆಯ ದುರ್ವಾಸನೆ ಬರುವುದು. ಹಾಲು ಒಡೆಯುವುದು ಇವೆಲ್ಲ ಬ್ಯಾಕ್ಟೀರಿಯಾಗಳಿಂದ. ಹಣ್ಣಿನ ರಸ ಹುಳಿಬಂದು ಕೆಡುವುದು ಈಸ್ಟ್ ಗಳಿಂದ, ಉಪ್ಪಿನಕಾಯಿ, ಬ್ರೆಡ್, ಹೊಡೆದಿರುವ ತೆಂಗಿನ ಕಾಯಿ ಹೋಳುಗಳಲ್ಲಿ ಬಣ್ಣ ಬಣ್ಣದ ಬೂಸ್ಟ್ ಬರುವುದು ಮೋಲ್ಡ್ ಸೂಕ್ಷ್ಮ ಜೀವಿಗಳಿಂದ. ಆಹಾರ ಪದಾರ್ಥಗಳಲ್ಲಿ ಇರಬಹುದಾದ ಸೂಕ್ಷ್ಮಜೀವಿಗಳನ್ನು ನಷ್ಟ ಪಡಿಸಿ, ಇಲ್ಲವೇ ಅವುಗಳ ವೃದ್ಧಿಗೆ ಬಾಧಕವಾದ ಪರಿಸರವನ್ನ ಏರ್ಪಡಿಸಿ ಅವುಗಳ ಕಾರ್ಯಾಚರಣೆಯನ್ನು ಕುಂಠಿತಗೊಳಿಸುವುದಾದರೆ ಆಹಾರ ಪದಾರ್ಥಗಳನ್ನು ಬಹಳ ದಿವಸ ಚೆನ್ನಾಗಿಡಬಹುದು. ಈ ತತ್ವಗಳನ್ನೇ ಆಹಾರ ಸಂರಕ್ಷಣೆಯ ಅನೇಕ ವಿಧಾನಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ನಿರ್ದಿಷ್ಟವಾದ ತೇವಾಂಶ. ಸರಿಯಾದ ಉಷ್ಣತೆ ಮತ್ತು ಸೂಕ್ಷ್ಮ ಆಹಾರಾಂಶ ಅತ್ಯಗತ್ಯ. ಇವುಗಳಲ್ಲಿ ಯಾವ ಒಂದು ಅಂಶ ಹೆಚ್ಚು ಕಡಿಮೆಯಾದರೂ ಅವು ಬೆಳೆಯಲಾರವು. ಅವುಗಳ ಕಾರ್ಯ ಚಟುವಟಿಕೆಗಳು ಕಡಿಮೆಯಾಗುವವು.

ಸೂಕ್ಷ್ಮಜೀವಿಗಳಿಗೆ ನಿರ್ದಿಷ್ಟ ತೇವಾಂಶ ಬೇಕು ಎಂದೆವಲ್ಲವೆ? ಆದ್ದರಿಂದ ಆಹಾರ ಪದಾರ್ಥಗಳಲ್ಲಿರುವ ತೇವಾಂಶವನ್ನು ಕಡಿಮೆ ಮಾಡುವುದರ ಮೂಲಕ ಅವುಗಳನ್ನು ಬಹಳ ಕಾಲ ಇಡಬಲ್ಲೆವು ಎಂದಾಯಿತು. ನೆಲ್ಲಿಕಾಯಿ, ಖರ್ಜೂರ, ದ್ರಾಕ್ಷಿ, ಹಪ್ಪಳ, ಸಂಡಿಗೆ ಮತ್ತು ಗೋರಿಕಾಯಿ, ಮೆಣಸಿನಕಾಯಿ ಬಾಳಕಗಳನ್ನು ತಯಾರಿಸಿ ಬಿಸಿಲಿನಲ್ಲಿ ಒಣಗಿಸುವುದನ್ನು ನಾವು ನೋಡಿರುತ್ತೇವೆ, ಇದೇ ತತ್ವವನ್ನು ಕೈಗಾರಿಕೆಗಳಲ್ಲಿಯೂ ಬಳಸಿಕೊಂಡು ತರಕಾರಿಗಳನ್ನು ಸೂಕ್ತ ಪ್ರಾಥಮಿಕ ಉಪಚಾರಕ್ಕೆ ಒಳಪಡಿಸಿದ ಮೇಲೆ ಯಾಂತ್ರಿಕ ಸಾಧನೆಗಳಿಂದ ಒಣಗಿಸಿ ಸಂರಕ್ಷಿಸುತ್ತಾರೆ. ಹಾಲಿನ ಪುಡಿ ಮತ್ತು ಮೊಟ್ಟೆಯ ಪುಡಿ ಕ್ರಮವಾಗಿ ಹಾಲು ಮತ್ತು ಮೊಟ್ಟೆಯ ದ್ರವ್ಯಗಳನ್ನು ಯಂತ್ರಗಳಿಂದ ಒಣಗಿಸಿ ತಯಾರಿಸಿದ ವಸ್ತುಗಳು ಇವುಗಳು ನೀರಿನಂಶವನ್ನು ಕಳೆದುಕೊಳ್ಳುವುದರಿಂದ ತೂಕ ಮತ್ತು ಗಾತ್ರದಲ್ಲಿ ಕಡಿಮೆಯಾಗಿರುತ್ತದೆ. ಇವುಗಳನ್ನು ಪ್ಯಾಕ್ ಮಾಡುವುದು ಸುಲಭ. ಸಾಗಣೆ ಸರಾಗ, ಇವುಗಳನ್ನು ಬಿಸಿ ನೀರಿನಲ್ಲಿ ಹಾಕಿದರೆ ಮೊದಲಿನಂತೆ ಆಗುತ್ತವೆ. ಸರಿಯಾದ ಉಷ್ಣತೆ ಇದ್ದರೆ ಮಾತ್ರ ಸೂಕ್ಷ್ಮ ಜೀವಿಗಳ ಬೆಳವಣಿಗೆ ಸಾಧ್ಯ. ಕಡಿಮೆ ಉಷ್ಣತೆಯಲ್ಲಿ ಆಹಾರ ಪದಾರ್ಥಗಳನ್ನು ಇಡುವುದರಿಂದ ಸೂಕ್ಷ್ಮ ಜೀವಿಗಳು ಅವುಗಳ ವಿನಾಶಕಾರಿ ಕೃತ್ಯಗಳು ಕುಂಠಿತಗೊಳ್ಳುವವು. ಇದರಿಂದಲೇ ಮನೆಗಳಲ್ಲಿ ರೆಫ್ರಿಜರೇಟರಿನಲ್ಲಿ ಹಾಲು, ಸಾರು, ಬೇಗ ಹುಳಿ ಬರುವುದಿಲ್ಲ. ಮಾಂಸ, ಮೊಟ್ಟೆ ಕೆಡುವುದಿಲ್ಲ. ಕಡಿಮೆ ಉಷ್ಣತೆಯಲ್ಲಿ ಹಣ್ಣು ತರಕಾರಿಗಳ ಜೈವಿಕ ಕ್ರಿಯೆಯು ಕಡಿಮೆಯಾಗುವುದರಿಂದ ರೆಫ್ರಿಜರೇಟರ್ ಗಳಲ್ಲಿ ಅವು ಚೆನ್ನಾಗಿರುವವು. ಈ ತತ್ವವನ್ನೇ ಅನುಸರಿಸಿ ದೊಡ್ಡ ದೊಡ್ಡ ಶೀತಾಗಾರಗಳನ್ನು ನಿರ್ಮಿಸಿ ಬೇಗ ಕೆಡುವ ವಸ್ತುಗಳನ್ನು ಒಳ್ಳೆಯ ಸ್ಥಿತಿಯಲ್ಲಿ ಒಂದೆಡೆಯಿಂದ ಇನ್ನೊಂದಡೆಗೆ ಒಯ್ಯುವ ವಾಹನ ಸೌಕರ್ಯಗಳು ನಮ್ಮ ದೇಶದಲ್ಲಿ ಬಳಕೆಗೆ ಬರುತ್ತಿವೆ. ಮಂಜಿನ ಗಡ್ಡೆಯ ತಂಪಿಗಿಂತಲೂ ಕಡಿಮೆ ಉಷ್ಣತೆಯಲ್ಲಿ ಆಹಾರ ಪದಾರ್ಥಗಳು ಇನ್ನೂ ಹೆಚ್ಚು ದಿನ ಇರಬಲ್ಲುವು. ಐಸ್ ಕ್ರೀಮ್ ಇದಕ್ಕೆ ಉದಾಹರಣೆ. ಅಲ್ಲದೆ ಹಣ್ಣು- ತರಕಾರಿಗಳನ್ನು ಯಾಂತ್ರಿಕ ಸಾಧನಗಳ ಮೂಲಕ ಗಣಿಕರಣ ಕ್ರಿಯೆಗೆ ಒಳಪಡಿಸಿ ಬಹಳ ದಿವಸ ಕಾಪಾಡುತ್ತಾರೆ.

ಕುದಿಯುವ ನೀರಿನ ಉಷ್ಣತೆಯಲ್ಲಿ ಸ್ವಲ್ಪ ಹೊತ್ತು ಇರಿಸುವುದರಿಂದ ಬಹುತೇಕ ಸೂಕ್ಷ್ಮ ಜೀವಿಗಳು ನಷ್ಟ ಹೊಂದುವವು, ಆದರೆ ಕೆಲವು ಸೂಕ್ಷ್ಮಜೀವಿಗಳು ಸುರಕ್ಷಣಾ ವ್ಯೂಹದಂತೆ ಕೋಶಿಕೆಗಳನ್ನು ರಚಿಸಿಕೊಳ್ಳುವುದರಿಂದ ಅವುಗಳನ್ನು ನಷ್ಟ ಪಡಿಸಲು ಹೆಚ್ಚು ಉಷ್ಣತೆ ಬೇಕಾಗುವುದು. ಉಗಿಯ ಒತ್ತಡವನ್ನು ಹೆಚ್ಚಿಸುವುದರ ಮೂಲಕ ಈ ಕೆಲಸವನ್ನು ಸಾಧಿಸಬಹುದು. ಈ ತತ್ವದ ಆಧಾರದ ಮೇಲೆ ಡಬ್ಬಿ, ಸೀಸೆಗಳಲ್ಲಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಿ ಕಾಪಾಡಬಹುದು. ಇದಕ್ಕೆ ಕ್ಯಾನಿಂಗ್ ವಿಧಾನ ಎನ್ನುವರು. ಈ ವಿಧಾನವನ್ನು ಅನುಸರಿಸಿ ಹಾಲು, ಮಾಂಸ, ಮೀನು ವಿವಿಧ ಬಗೆಯ ಹಣ್ಣು ತರಕಾರಿಗಳ ಉತ್ಪನ್ನಗಳನ್ನು ಟಿನ್ನಿನ ಡಬ್ಬಿ, ಗಾಜಿನ ಸೀಸೆಗಳಲ್ಲಿ ಸಂರಕ್ಷಿಸಿ ಕಾಪಾಡಲಾಗುವುದು. ಸೂಕ್ಷ್ಮಜೀವಿಗಳ ನಾಶಕ್ಕೆ ಮತ್ತೊಂದು ಜನಪ್ರಿಯ ವಿಧಾನವೆಂದರೆ ಸಕ್ಕರೆಯ ಉಪಯೋಗ. ಹೆಚ್ಚಿನ ಸಾಂದ್ರತೆಯುಳ್ಳ ಸಕ್ಕರೆಯ ದ್ರಾವಣದಿಂದ ಸೂಕ್ಷ್ಮಜೀವಿಗಳು ಸುತ್ತುವರಿಯಲ್ಪಡುವುದರಿಂದ ಪರಾಸರಣ ಒತ್ತಡದ ಫಲವಾಗಿ ಅವುಗಳ ಕೋಶಗಳಲ್ಲಿರುವ ದ್ರವವು ಹೆಚ್ಚು ಸಾಂದ್ರತೆ ಇರುವ ಸಕ್ಕರೆಯ ದ್ರಾವಣಕ್ಕೆ ಹರಿದು ಬಂದು ಅವು ನೀರಿನ ಅಂಶದ ಅಭಾವದಿಂದ ನಷ್ಟವಾಗುತ್ತದೆ. ಇಲ್ಲವೇ ಅವುಗಳ ಬೆಳವಣಿಗೆಯು ನಿಂತು, ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ ಈ ತತ್ವವನ್ನು ಅನುಸರಿಸಿ ಹಣ್ಣುಗಳಿಂದ ತಯಾರಿಸಿದ ಜಾಮ್, ಮುರಬ್ಬ ಎಂಬ ಮಧುರ ಉತ್ಪನ್ನಗಳಲ್ಲಿ ಸಕ್ಕರೆಯ ಪ್ರಮಾಣ ಶೇಕಡಾ 66 ರಿಂದ 70 ಭಾಗವಿರುತ್ತದೆ. ಇದೇ ರೀತಿ ಸಕ್ಕರೆಯ ಬಲದಿಂದಲೇ ಬಹುಕಾಲ ನಿಲ್ಲುವ ಇನ್ನೊಂದು ವಸ್ತುವೆಂದರೆ ಜೇನುತುಪ್ಪ.

ಮುರಬ್ಬ ಮತ್ತು ಜೇನುತುಪ್ಪಗಳ ಸಂರಕ್ಷಣೆಗೆ ಸಕ್ಕರೆಯ ಅಧಿಕ ಕಾರಣವಾದರೆ, ಅದೇ ಕೆಲಸವನ್ನು ಉಪ್ಪಿನಕಾಯಿಯಲ್ಲಿ ಉಪ್ಪು ನಿರ್ವಹಿಸುತ್ತದೆ. ಇಲ್ಲಿ ಉಪ್ಪಿನ ಪ್ರಮಾಣ ಶೇಕಡಾ 18 ರಿಂದ 20 ಭಾಗವಿರಬೇಕು. ಇದಕ್ಕಿಂತ ಕಡಿಮೆಯಾದರೆ ಉಪ್ಪಿನಕಾಯಿ ಕೆಡುವ ಸಂಭವ ಉಂಟು. ಉಪ್ಪಿನಿಂದ ಹದಗೊಳಿಸಿದ ಮೀನುಗಳು ಇದೇ ಕಾರಣದಿಂದಾಗಿ ಬೇಗ ಕೆಡುವುದಿಲ್ಲ. ಸಾಂಬಾರ ದಿನಸಿಗಳಲ್ಲಿರುವ ಚಂಚಲ ತೈಲಗಳು ಸೂಕ್ಷ್ಮ ಜೀವಿಗಳ ಬೆಳವಣಿಗೆಯನ್ನು ತಡೆಯಲು ನೆರವಾಗುತ್ತವೆ. ಉಪ್ಪಿನಕಾಯಿ, ಟೊಮಟೊ ಕೆಚಪ್ ಗಳಲ್ಲಿ ಈ ಸಾಂಬರ ಪದಾರ್ಥಗಳ ಬಳಕೆಯು ಅವುಗಳ ದೀರ್ಘಕಾಲದ ರಕ್ಷಣೆಗೆ ಒಂದು ಕಾರಣವಾಗಿದೆ. ಈ ವಿಧಾನಗಳಲ್ಲದೆ ಕೆಲವು ರಾಸಾಯನಿಕ ವಸ್ತುಗಳ ಬಳಕೆಯು ಸೂಕ್ಷ್ಮಜೀವಿಗಳ ವೃದ್ಧಿಗೆ ಬಾಧಕವಾಗಬಲ್ಲವು. ಇಂಥ ವಸ್ತುಗಳು ಮನುಷ್ಯನಿಗೆ ಹಾನಿಕಾರಕವಾಗಿರಬಾರದು, ನಂಜನ್ನುಂಟು ಮಾಡುವಂತಿರಬಾರದು. ಮೇಲಾಗಿ ಇವುಗಳ ಬಳಕೆಯಿಂದ ಆಹಾರ ಪದಾರ್ಥಗಳ ಬಣ್ಣ, ರುಚಿ, ವಾಸನೆ ಕೆಡುವಂತಿರಬಾರದು. ಈ ಅಂಶಗಳನ್ನು ಪರಿಗಣಿಸಿ ಗಂಧಕದ ಡೈಯಾಕ್ಸೈಡ್ ಮತ್ತು ಬೆನ್ ಜೋಯಿಕ್ ಆಮ್ಲ ಮುಂತಾದವುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಲು ಅನುಮತಿ ನೀಡಲಾಗಿದೆ. ಈ ಪದಾರ್ಥಗಳನ್ನು ಹಾಗೆಯೇ ಬಳಸಲಾಗುವುದಿಲ್ಲ ಆದ್ದರಿಂದ ಅವುಗಳನ್ನು ನೀಡುವ ಲವಣಗಳಾದ ಪೊಟ್ಯಾಶಿಯಂ ಮೆಟಬೈಸಲ್ಫೇಟ್  ಮತ್ತು ಸೋಡಿಯಂ ಬೆನ್ ಜೋಯೆಟ್ ಗಳನ್ನು ಆಹಾರ ಪದಾರ್ಥಗಳ ಸಂರಕ್ಷಣೆಯಲ್ಲಿ ಉಪಯೋಗಿಸಲಾಗುತ್ತದೆ. ಇವುಗಳನ್ನು ಮುಖ್ಯವಾಗಿ ಹಣ್ಣಿನ ಪಾನೀಯಗಳಲ್ಲಿ ಬಳಸಲಾಗುತ್ತದೆ.

ಇವುಗಳಲ್ಲದೆ ಇತ್ತೀಚೆಗೆ ಆಹಾರ ಪದಾರ್ಥಗಳ ಸಂರಕ್ಷಣೆಯಲ್ಲಿ ಜೀವ ನಿರೋಧಕ ವಸ್ತುಗಳ ಬಳಕೆಯೂ ವಿದ್ಯುತ್ ಕಾಂತಿಯ ವಿಕಿರಣಗಳ ಉಪಯೋಗಗಳು ರೂಢಿಗೆ ಬರುತ್ತಿವೆ. ಆಹಾರ ಧಾನ್ಯಗಳು ಬಹುಬೇಗ ಕೆಡದಿದ್ದರೂ ಹಲವು ಬಾರಿ ಕ್ರಿಮಿ ಕೀಟಗಳು, ಇಲಿ- ಹೆಗ್ಗಣಗಳು, ಸೂಕ್ಷ್ಮಜೀವಿಗಳಿಂದ ಅಪಾರ ಪ್ರಮಾಣದಲ್ಲಿ ಹಾಳಾಗುತ್ತವೆ. ಆದ್ದರಿಂದ ದವಸ ಧಾನ್ಯಗಳನ್ನು, ಬೆಳೆಕಾಳುಗಳನ್ನು  ಕಟಾವಾದ ಮೇಲೆ ಚೆನ್ನಾಗಿ ಒಣಗಿಸಿ ಸಂಗ್ರಹಿಸಿದಬೇಕು, ಇಲ್ಲದಿದ್ದರೆ ಅವುಗಳಲ್ಲಿರುವ  ತೇವಾಂಶವೇ ಕ್ರಿಮಿ ಕೀಟ ಸೂಕ್ಷ್ಮಜೀವಿಗಳ ಹಾವಳಿಗೆ ಮುಖ್ಯ ಕಾರಣವಾಗಿ ಪರಿಣಮಿಸಬಹುದು. ಧಾನ್ಯಗಳನ್ನು ತುಂಬಿಡುವ ಧಾರಕಗಳು ಸ್ವಚ್ಛವಾಗಿರಬೇಕು. ತೇವ ಬರುವಂತಿರಬಾರದು. ಅದರಲ್ಲಿ ಹಿಂದಿನ ವರ್ಷದ ಕ್ರಿಮಿ ಕೀಟಗಳ ಅವಶೇಷವಿರಬಾರದು. ಇದರ ನಿವಾರಣೆಗೆ ಸೂಕ್ತ ಕೀಟನಾಶಕಗಳ ಬಳಕೆ ಅಗತ್ಯ. ಧಾನ್ಯಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ರಾಸಾಯನಿಕಗಳ ಧೂಪನ ವಿಧಾನಕ್ಕೆ ಒಡ್ಡುವುದು ಅತ್ಯಗತ್ಯ. ಇದರಿಂದ ಮೊಟ್ಟೆಯ ಅವಸ್ಥೆಯಲ್ಲಿರಬಹುದಾದ ಹುಳು ಹುಪ್ಪಟೆಗಳು ನಿರ್ನಾಮವಾಗುವುವು. ಇನ್ನೊಂದು ಉಪಾಯವೆಂದರೆ ಅಪಾಯಕರವಲ್ಲದ ಧಾನ್ಯ ರಕ್ಷಣಾ ಪುಡಿಗಳನ್ನು ಬೆರೆಸಬಹುದು. ಇದರಿಂದ ಕೀಟಗಳ ದಾಳಿ ಸಂಭವಿಸುವುದಿಲ್ಲ. ಗೋಣಿ ಚೀಲಗಳಲ್ಲಿ ದಾಸ್ತಾನು ಮಾಡುವಂತಿದ್ದರೆ ಅವುಗಳ ಹೊರಮೈಗೆ ಕೀಟ ನಿರೋಧಕ ರಾಸಾಯನಿಕಗಳನ್ನು ಸಿಂಪಡಿಸಬೇಕು. ಇವುಗಳಲ್ಲದೆ ಇಲಿ-ಹೆಗ್ಗಣಗಳ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮನೆಯ ಮಟ್ಟದಲ್ಲಿ ಮತ್ತು ಮಳಿಗೆಗಳ ಮಟ್ಟದಲ್ಲಿ ಈ ವಿಧಾನಗಳನ್ನು ಬಳಸಿಕೊಳ್ಳಲು ಸೌಲಭ್ಯಗಳು ದೊರೆಯುತ್ತವೆ. ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನಾಲಯವು ಆಹಾರ ಸಂರಕ್ಷಣೆ ವಿಧಾನಗಳನ್ನು ಸುಧಾರಿಸುತ್ತಿದೆ. ದೇಶದಲ್ಲಿ ಬೆಳೆದಿದ್ದನ್ನು ಕೆಡದಂತೆ ಕಾಪಾಡುವುದು ಸಾಧ್ಯವಾದರೆ ಆಹಾರದ ಸ್ವಾವಲಂಬನೆಯನ್ನು ಎಲ್ಲಾ ದೃಷ್ಟಿಯಿಂದಲೂ ಸಾಧಿಸಬಹುದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ