ನಾಲ್ಕು ಚಕ್ರಗಳ ಕಾರು ತಯಾರಿಸಿದ ಮೊದಲಿಗ "ಗಾಟ್ ಲೀಬ್ ಡೈಮ್ಲರ್" - Mahanayaka
9:03 PM Thursday 7 - November 2024

ನಾಲ್ಕು ಚಕ್ರಗಳ ಕಾರು ತಯಾರಿಸಿದ ಮೊದಲಿಗ “ಗಾಟ್ ಲೀಬ್ ಡೈಮ್ಲರ್”

Got Lieb Daimler
05/10/2024

  • ಉದಂತ ಶಿವಕುಮಾರ್

“ಶ್ರಮದಾಯಕ ಕೆಲಸಕ್ಕಿಂತ ಹೆಚ್ಚಿನ ತಮಾಷೆ ಮತ್ತೊಂದಿಲ್ಲ” ಎಂದು ಹೇಳುತ್ತಿದ್ದ ಗಾಟ್ ಲೀಬ್ ಡೈಮ್ಲರ್ ಚಿಕ್ಕವನಿದ್ದಾಗಿನಿಂದಲೂ ಆಟಕ್ಕಿಂತಲೂ ಪಾಠದ ಕಡೆಗೆ ಹೆಚ್ಚು ಆಸಕ್ತಿ, ಯಾರೊಡನೆಯೂ ಆಟವಾಡಲು ಹೋಗದೆ “ಪುಸ್ತಕದ ಹುಳು”ವಾಗಿದ್ದನು.

ಡೈಮ್ಲರ್ 1834 ಮಾರ್ಚ್ 17ರಂದು ವೆರ್ಟೆಂಬರ್ಗ್ ನಲ್ಲಿ ಜನಿಸಿದ. 1848ರಲ್ಲಿ ಶಾಲೆಯನ್ನು ಬಿಟ್ಟ ಡೈಮ್ಲರ್ ಬಂದೂಕು ತಯಾರಿಸುವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ. ಅಲ್ಲಿ ಯಜಮಾನನ ಪ್ರೀತಿಗೆ ಪಾತ್ರನಾದ. ಮುಂದೆ ಅಂತದೇ ಬೇರೊಂದು ಅಂಗಡಿಯಲ್ಲಿ ದುಡಿಯ ತೊಡಗಿದ. ಸಂಜೆ ಹೊತ್ತು ಮೆಕಾನಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಾಸ ಮಾಡಿದ. 1857ರಲ್ಲಿ ಸ್ಟರ್ಟ್ ಗಾರ್ಟ್ ಪಾಲಿಟೆಕ್ನಿಕ್ ಕಾಲೇಜನ್ನು ಸೇರಿದ. ಹೆಚ್ಚಿನ ಅಧ್ಯಯನಕ್ಕಾಗಿ ಸರ್ಕಾರ ನೀಡಿದ ವಿದ್ಯಾರ್ಥಿವೇತನದ ನೆರವಿನಿಂದ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂ ರಾಷ್ಟ್ರಗಳಿಗೆ ತೆರಳಿದ.

ನಾಲ್ಕು ಹೊಡೆತಗಳ ಅನಿಲ ಎಂಜಿನನ್ನು ಕಂಡುಹಿಡಿದಿದ್ದ ನಿಕೋಲಸ್ ಆಟೊ ಮತ್ತು ಯೂಜೆ ಲಾಂಜೆನ್ ಎಂಬ ಜರ್ಮನ್ ಇಂಜಿನಿಯರಿಬ್ಬರೂ ಹೊಸ ಕರ್ಮಾಗಾರವನ್ನು ಪ್ರಾರಂಭಿಸಲು ಸಮರ್ಥ ಕೆಲಸಗಾರನೊಬ್ಬನನ್ನು ಹುಡುಕುತ್ತಿದ್ದರು. ಡೈಮ್ಲರ್ ನ ಪರಿಣಿತಿ ಸಾಮರ್ಥ್ಯಗಳನ್ನು ತಿಳಿದು ಅವನನ್ನು ಕೆಲಸಕ್ಕೆ ಕರೆದರು. ಡೈಮ್ಲರ್ ಇವರೊಂದಿಗೆ ಸುಮಾರು 9 ವರ್ಷ ಕಾಲ ಕೆಲಸ ಮಾಡಿಕೊಂಡಿದ್ದ. ಇವನ ಕಾರ್ಖಾನೆ ಇಡೀ ಯುರೋಪ್ ಖಂಡದಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಸಜ್ಜಾದ ಕಾರ್ಖಾನೆ ಎಂದು ಹೆಸರು ಪಡೆದಿತ್ತು. ಅಮೆರಿಕದ ಕೈಗಾರಿಕೋದ್ಯಮಿಗಳು ಬಂದು ಅಭ್ಯಾಸಿಸುವಷ್ಟು ಇವನ ಆಡಳಿತ ಉತ್ತಮವಾಗಿತ್ತು, ದಕ್ಷವಾಗಿತ್ತು. ಕೊನೆಗೊಮ್ಮೆ ನಿಕಲೊಸ್ ಆಟೊ ಜೊತೆ ಮನಸ್ತಾಪದಿಂದಾಗಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸ್ವತಂತ್ರ ಉದ್ಯಮ ಪ್ರಾರಂಭಿಸಿದ.

ನಿಕಲೊಸ್ ಆಟೊನಾ ನಿಧಾನ ವೇಗದ ಇಂಜಿನಿಗಿಂತ ಉತ್ತಮ ಹಾಗೂ ಅಧಿಕ ವೇಗದ ಅಂತರ್ದಹನ ಎಂಜಿನನ್ನು ರಚಿಸುವುದು ಡೈಮ್ಲರನ ಗುರಿಯಾಗಿತ್ತು. ಇದಕ್ಕಾಗಿ ಸ್ವಂತ ಕಟ್ಟಡವೊಂದನ್ನು ಪಡೆದು ಅದರ ಹೊರತೋಟದ ಮೂಲೆಯಲ್ಲಿ ಶೆಡ್ ಹಾಕಿ, ಕೆಲಸ ಪ್ರಾರಂಭಿಸಿದ. ತನ್ನ ಕೆಲಸ ಅತ್ಯಂತ ರಹಸ್ಯವಾಗಿ ಇರಬೇಕೆಂದು ಸುತ್ತಲೂ ತೆರೆ ಹಾಕಿ ತೋಟದಲ್ಲಿ ನಾಯಿಯನ್ನು ಕಾವಲು ಬಿಟ್ಟಿರುತ್ತಿದ್ದ. ಇದರಿಂದ ಅಕ್ಕಪಕ್ಕದವರಿಗೆ ಅನುಮಾನ ಬಂದು ಪೋಲಿಸಿನವರಿಗೆ ತಿಳಿಸಿದಾಗ, ಪೊಲೀಸರು ಡೈಮ್ಲರನಿಗೆ ಗೊತ್ತಾಗದಂತೆ ರಾತ್ರಿ ಬಂದು ಅವನ ಕರ್ಮಾಗಾರವನ್ನು ತನಿಖೆ ಮಾಡಿದ್ದರು. ಅಲ್ಲಿದ್ದ ಯಾಂತ್ರಿಕ ಉಪಕರಣ, ಯೋಜನೆಗಳು ಅರ್ಥವಾಗದೆ ಸುಮ್ಮನಾದರು. ಇದರಿಂದ ಡೈಮ್ಲರನಿಗೆ ಬೇಸರವಾದರೂ ಅಕ್ಕಪಕ್ಕದವರ ಕಾಟ ತಪ್ಪಿತು.

ನಿಕೊಲಸ್ ಆಟೊ ಎಂಜಿನಿನಲ್ಲಿದ್ದ ಜ್ವಲನ ವ್ಯವಸ್ಥೆಗಿಂತ ಉತ್ತಮವಾದದ್ದನ್ನು ಡೈಮ್ಲರ್ ರಚಿಸಿ ಅದಕ್ಕೆ 1883 ರಲ್ಲಿ ಪೇಟೆಂಟ್ ಪಡೆದ. ಡೈಮ್ಲರ್ ಹೊಸ ಎಂಜಿನಿನಲ್ಲಿ ಆವೃತ ಕ್ರಾಂಕ್ ಪಿನ್ ಕೊಳವೆ ಜ್ವಲನ ಮತ್ತು ಗೇರ್ ಚಕ್ರಕ್ಕೆ ಅಳವಡಿಸಿದ್ದ ಎರಡು ಪಟ್ಟಿಗಳು ಇದ್ದವು. ಇದರಿಂದ ಇವನ ಎಂಜಿನು ನಿಧಾನವಾಗಿಯೂ, ಕ್ಷಿಪ್ರವಾಗಿಯೂ ಹೇಗೆ ಬೇಕೋ ಹಾಗೆ ಚಲಿಸಬಲ್ಲುದಾಗಿತ್ತು. ಈ ಯಂತ್ರವನ್ನು ಬೈಸಿಕಲಿಗೆ ಜೋಡಿಸಿ ಓಡಿಸಬೇಕೆಂದು ಡೈಮ್ಲರ್ ಯೋಚಿಸಿ ಅದಕ್ಕಾಗಿ ವಿಶಿಷ್ಟ ಬೈಸಿಕಲೊಂದನ್ನು ತಯಾರಿಸಿದ. ಮರದ ಎರಡು ಚಕ್ರಗಳಿದ್ದ ಈ ಬೈಸಿಕಲಿಗೆ ಅಕ್ಕಪಕ್ಕದಲ್ಲಿ ಸಮತೋಲನಕ್ಕಾಗಿ ಎರಡು ಪುಟ್ಟ ಚಕ್ರಗಳಿದ್ದವು. ಎತ್ತರದಲ್ಲಿದ್ದ ಸೀಟಿನ ಕೆಳಗೆ ತನ್ನ ಯಂತ್ರವನ್ನು ಅಳವಡಿಸಿದ. ಹೀಗೆ ಪ್ರಪಂಚದ ಮೊಟ್ಟಮೊದಲ ಮೋಟಾರ್ ಸೈಕಲ್ ತಯಾರಾಯಿತು. ಇದು ಯಶಸ್ವಿಯಾಗಿ ಓಡಿದಾಗ ಡೈಮ್ಲರ್ ನಿಗೆ ಸಂತಸ, ಜನರಿಗೆ ಅಚ್ಚರಿ.

ಇದೇ ಎಂಜಿನನ್ನು ದೋಣಿಗೆ ಜೋಡಿಸಿದರೆ ಹೇಗೆ ?ನೀರಿನ ಮೇಲೆ ಈ ಎಂಜಿನನ್ನು ಯಶಸ್ವಿಯಾಗಿ ಬಳಸಬಹುದೇ? ಎಂದು ಯೋಚಿಸಿದ. ಡೈಮ್ಲರ್ ದೋಣಿಯೊಂದಕ್ಕೆ ಇದನ್ನು ಜೋಡಿಸಿಯೂ ಬಿಟ್ಟ. ಅದು ಯಶಸ್ವಿಯಾಗಿ ಚಲಿಸಿತು. ಇದನ್ನು ಹಾಗೆಯೇ ಪ್ರದರ್ಶಿಸಲು ಅಳುಕು, ಈ ದೋಣಿ ನೀರಿನ ಮಧ್ಯೆ ಸ್ಪೋಟಗೊಳ್ಳುತ್ತದೆ ಎಂದು ಜನರು ಅನುಮಾನ ಪಡಬಹುದೆಂದು ಹೆದರಿ ಡೈಮ್ಲರ್ ಒಂದು ಉಪಾಯ ಹೂಡಿದ. ತನ್ನ ದೋಣಿಯ ಎಂಜಿನಿನ ಸುತ್ತ ತಂತಿ- ಪಿಂಗಾಣಿ ಗುಂಡುಗಳನ್ನು ಸಿಕ್ಕಿಸಿ, ದೋಣಿ ವಿದ್ಯುತ್ ಬಲದಿಂದ ಚಲಿಸುತ್ತದೆ ಎಂಬ ಅಭಿಪ್ರಾಯ ಮೂಡುವಂತೆ ಮಾಡಿದ. ಅವನ ಈ ಯೋಜನೆ ಸಫಲವಾಗಿ ಮೋಟರ್ ದೋಣಿ ಜನಪ್ರಿಯವಾಯಿತು. ಮೋಟರ್ ಕಾರಿನ ತಯಾರಿಕೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಕೆಲವೇ ಇಂಜಿನಿಯರ್ ಗಳಲ್ಲಿ ಡೈಮ್ಲರ್ ಒಬ್ಬ. ಮೂರು ಚಕ್ರದ ಮೋಟಾರ್ ಕಾರನ್ನು ಜರ್ಮನಿಯ ಕಾರ್ಲ್ ಬೆನ್ಜ್ ತಯಾರಿಸಿದ್ದರೂ ಮೊಟ್ಟಮೊದಲ ನಾಲ್ಕು ಚಕ್ರಗಳ ಮೋಟಾರ್ ಕಾರನ್ನು ತಯಾರಿಸಿದ ಕೀರ್ತಿ ಸಲ್ಲುವುದು ಡೈಮ್ಲರನಿಗೆ.

ತನ್ನ ಎಂಜಿನನ್ನು ನಾಲ್ಕು ಚಕ್ರದ ಕುದುರೆಗಾಡಿಯೊಂದಕ್ಕೆ ಜೋಡಿಸಿ ಡೈಮ್ಲರ್ ಒಂದು ರಾತ್ರಿ ಓಡಿಸಿದ. ಆ ಕಾರು ತುಂಬಾ ಚೆನ್ನಾಗಿ ಓಡಿತಲ್ಲದೆ ಗಂಟೆಗೆ 19.2 ಕಿಲೋಮೀಟರ್ ವೇಗವನ್ನು ಮುಟ್ಟಿತು. ಮುಂದೆ ಎಂಜಿನಿಗೆ ಅನುಕೂಲವಾದ ಹೊಸ ಗಾಡಿಯನ್ನೇ ತಯಾರು ಮಾಡಿದ. ಎರಡು ವೇಗಗಳಲ್ಲಿ ಸಾಗಬಲ್ಲ ಎಂಜಿನನ್ನು ತಯಾರಿಸಿದ. ಇದರಿಂದ ಕಾರು ತಯಾರಿಕೆಯಲ್ಲಿ ಡೈಮ್ಲರ್ ನ ಹೆಸರು ಸ್ಥಿರವಾಯಿತು. ಮುಂದೆ ಟ್ರಾಂ ಕಾರ್, ಟ್ರಾಲಿ ಬಸ್, ಫಯರ್ ಎಂಜಿನ್ ಗಳನ್ನು ತಯಾರಿಸಿದ. ವಾಯುಯಾನ ವಾಹಕವನ್ನು ತಯಾರಿಸುವಂತೆ ಜರ್ಮನಿಯ ಕೌಂಟ್ ವಾನಟ್ಸಿಪಲೀನ್ ಕೇಳಿದಾಗ, “ಕುದುರೆ ಇಲ್ಲದೆ ಚಲಿಸುವ ಗಾಡಿಗಳನ್ನು ತಯಾರಿಸುತ್ತಿದ್ದೇನೆಂದೇ ನಾನು ಜನರ ಪಾಲಿಗೆ ಶುದ್ದ ದಡ್ಡನಾಗಿದ್ದೇನೆ; ಇನ್ನು ಗಾಳಿಯಲ್ಲಿ ಹಾರಾಡುವ ಬಗ್ಗೆ ನಾನು ಅವರಿಗೆ ಹೇಳಿದರೆ ಅವರು ನನ್ನನ್ನು ಹುಚ್ಚನೆಂದೇ ಪರಿಗಣಿಸಿಯಾರು!” ಎಂದು ಡೈಮ್ಲರ್ ಉತ್ತರವಿತ್ತ.

1900 ಮಾರ್ಚ್ 6 ರಂದು ಡೈಮ್ಲರ್ ಹೃದಯಘಾತದಿಂದ ನಿಧನನಾದ. ಅವನ ಮಗ ಪಾಲ್ ಮತ್ತು ಡೈಮ್ಲರ್ ನ ಸಹಾಯಕನಾಗಿದ್ದ ಮೇಬ್ಯಾಚ್ ಕಾರು ತಯಾರಿಕೆಯ ಉದ್ಯಮವನ್ನು ಮುಂದುವರಿಸಿದರು. ಉಕ್ಕಿನ ತಗಡನ್ನು ಸುತ್ತಲೂ ಹೊದಿಸಿ ಕಾರಿಗೆ ಹೊಸ ರೂಪ ಕೊಡಲಾಯಿತು. ಆ ಕಾಲದಲ್ಲಿ ಫ್ರಾನ್ಸ್ ಎಂದರೆ ಐರೋಪ್ಯರಿಗೆ ಅತಿ ಗೌರವ. ಕಾರುಗಳಿಗೆ ಫ್ರೆಂಚ್ ಹೆಸರಿಟ್ಟರೆ ಅವನ್ನು ಶ್ರೀಮಂತರು, ಫ್ರೆಂಚರು ಕೊಳ್ಳುತ್ತಾರೆ ಎಂಬ ಕಾರಣದಿಂದ ಅವಕ್ಕೆ “ಮರ್ಸಿಡಿಸ್” ಎಂದು ಹೆಸರಿಟ್ಟರು. ಮುಂದೆ ಇವರ ಸಂಸ್ಥೆ ಕಾರ್ಲ್ ಬೆನ್ಜ್ ನಿಂದ ಸ್ಥಾಪಿತವಾಗಿದ್ದ ಕಂಪನಿಯೊಂದಿಗೆ ಬೆರೆತು “ಮರ್ಸಿಡಿಸ್ ಬೆನ್ಜ್” ಕಾರುಗಳನ್ನು ತಯಾರಿಸಲಾರಂಭಿಸಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ