ಅಮೇರಿಕಾದ ರಾಕೆಟ್ ವಿಜ್ಞಾನದ ಜನಕ "ರಾಬರ್ಟ್ ಹಚಿನ್ಸ್ ಗೊಡ್ಡಾರ್ಡ್" -ಉದಂತ ಶಿವಕುಮಾರ್ - Mahanayaka

ಅಮೇರಿಕಾದ ರಾಕೆಟ್ ವಿಜ್ಞಾನದ ಜನಕ “ರಾಬರ್ಟ್ ಹಚಿನ್ಸ್ ಗೊಡ್ಡಾರ್ಡ್” –ಉದಂತ ಶಿವಕುಮಾರ್

Robert Hutchins Goddard
03/10/2024

ಹಲವು ಹಂತಗಳ ರಾಕೆಟುಗಳು, ದ್ರವ ಇಂಧನ ಬಳಕೆ, ಆಯಾನನ್ನು ಇಂಧನದಂತೆ ಬಳಸುವ ಸಾಧ್ಯತೆ, ಸೌರ ಚೈತನ್ಯವನ್ನು ರಾಕೆಟ್ ನಲ್ಲಿ ಉಪಯೋಗಿಸುವುದು, ಮಾನವ ಸಹಿತ ಹಾಗೂ ಮಾನವರಹಿತವಾಗಿ ಅಂತರಗ್ರಹಯಾನ ಮಾಡಿ ಹಿಂದಿರುಗುವುದು, ರಾಕೆಟ್ ಅತಿ ವೇಗದಲ್ಲಿ ಧಾವಿಸುವಾಗ ಅದರಲ್ಲಿರುವ ವ್ಯೋಮಯಾನಿಯ ರಕ್ಷಣೆ ಹಾಗೂ ಚಂದ್ರನ ಮೇಲೆ ನಿಲ್ದಾಣ ಸ್ಥಾಪನೆ; ಇಂಥ ವೈಜ್ಞಾನಿಕ ವಿಷಯಗಳನ್ನೆಲ್ಲ ಸುಮಾರು 1909ರಲ್ಲಿ ಗೊಡ್ಡಾರ್ಡ್ ದಾಖಲೆ ಮಾಡಿದ್ದ.

ಗೊಡ್ಡಾರ್ಡ್ ಹುಟ್ಟಿದ್ದು ಅಮೆರಿಕ ಸಂಯುಕ್ತ ಸಂಸ್ಥಾನದ ಮಾಸಚುಸೆಟ್ಸ್ ನಲ್ಲಿರುವ ವಾರ್ಸೆಸ್ಟರ್ ಎಂಬಲ್ಲಿ. 1882 ಅಕ್ಟೋಬರ್ ತಿಂಗಳ 5 ರಂದು. ಅವನು ಮಗುವಾಗಿದ್ದಾಗಲೇ ಆತನ ತಂದೆ ತಾಯಿ ಬಾಸ್ಟನ್ ಗೆ ತೆರಳಿದರು. ಅಲ್ಲಿಯೇ ಅತಿ ಎಳೆಯ ವಯಸ್ಸಿನಲ್ಲಿ ಅವನು ಹೊಸ ವಸ್ತುಗಳನ್ನು ತಯಾರಿಸಿದ. 16ನೇ ವಯಸ್ಸಿಗೆ ಜಲಜನಕ ತುಂಬಿದ ಅಲ್ಯೂಮಿನಿಯಂ ಬೆಲೂನನ್ನು ಮೇಲೆಕ್ಕೆ ಹಾರಿಸಲು ಪ್ರಯತ್ನಿಸಿದ.

ಚಿಕ್ಕಂದಿನಿಂದಲೂ ದೈಹಿಕವಾಗಿ ಗೊಡ್ಡಾರ್ಡ್ ಸ್ವಲ್ಪ ದುರ್ಬಲನಾಗಿದ್ದ. ಹೀಗಾಗಿ ಅವನ ಕಾಲೇಜು ವಿದ್ಯಾಭ್ಯಾಸ ಆರಂಭವಾದದ್ದು 22ನೇ ವಯಸ್ಸಿನಲ್ಲಿ. ಈ ವೇಳೆಗೆ ಅವನ ತಂದೆ ತಾಯಿ ವಾರ್ಸೆಸ್ಟರ್ ಗೆ ಹಿಂದಿರುಗಿದ್ದರು. ಅಲ್ಲಿನ ಪಾಲಿಟೆಕ್ನಿಕ್ ಇನ್ ಸ್ಟಿಟ್ಯೂಟ್ ಹಾಗೂ ಕ್ಲಾರ್ಕ್ ವಿಶ್ವವಿದ್ಯಾನಿಲಯಗಳಲ್ಲಿ ಗೊಡ್ಡಾರ್ಡ್ ನ ಕಾಲೇಜು ವಿದ್ಯಾಭ್ಯಾಸ ನಡೆಯಿತು. 1911 ರಲ್ಲಿ ಪಿಎಚ್.ಡಿ ಪದವಿ, ಸ್ವಲ್ಪ ಕಾಲ ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನ ಹೇಳಿಕೊಡುತ್ತಿದ್ದನು. ನಂತರ ಕ್ಲಾರ್ಕ್ ವಿಶ್ವವಿದ್ಯಾನಿಲಯದಲ್ಲಿ 1919 ರಿಂದ 1943 ರವರೆಗೆ ಪ್ರಾಧ್ಯಾಪಕನಾಗಿದ್ದ.

ಗೊಡ್ಡಾರ್ಡ್ ಬರೆದ “ಉನ್ನತ ಮಟ್ಟಗಳನ್ನು ತಲುಪುವ ಒಂದು ವಿಧಾನ” ಎಂಬ ಪ್ರೌಢ ಪ್ರಬಂಧವನ್ನು ವಾಸಿಂಗ್ ಟನ್ನಿನ ಸ್ಮಿತ್ಸೋನಿಯನ್ ಇನ್ ಸ್ಟಿಟ್ಯೂಟ್ ನವರು ಪ್ರಕಟಿಸಿದರು. ಈ ಸಂಸ್ಥೆಯಿಂದ ಗೊಡ್ಡಾರ್ನಿಗೆ ಧನ ಸಹಾಯ ದೊರೆಯಿತು. ಅದುವರೆಗೆ ತನ್ನ ವೇತನದಲ್ಲಿ ಉಳಿತಾಯ ಮಾಡಿ ಪ್ರಯೋಗ ನಡೆಸುತ್ತಿದ್ದವನಿಗೆ ಈಗ ಸ್ವಲ್ಪ ನೆರವು ದೊರೆತಂತಾಯಿತು. ರಾಕೆಟ್ ಮನುಷ್ಯನನ್ನು ಚಂದ್ರನಲ್ಲಿಗೆ ಹೇಗೆ ಕರೆದೊಯ್ಯಬಲ್ಲದು ಎಂಬುದನ್ನು ಗೊಡ್ಡಾರ್ಡ್ ತನ್ನ ಪ್ರಬಂಧದಲ್ಲಿ ವಿವರಿಸಿದ್ದ. “ಚಂದ್ರನ ಬಳಿಗೆ ರಾಕೆಟ್ ಕಳುಹಿಸುವ ಮನುಷ್ಯ” ಎಂದೆಲ್ಲ ವೃತ್ತ ಪತ್ರಿಕೆಗಳು ಈತನನ್ನು ಅಣಕಿಸಿದವು. ಅಂದಿನಿಂದ ದೊಡ್ಡ ತನ್ನ ಸಾಧನೆಗಳನ್ನು, ವಿಚಾರಗಳನ್ನು ಗೊಡ್ಡಾರ್ಡ್ ಬಹಿರಂಗಗೊಳಿಸಲಿಲ್ಲ. ಇದರಿಂದ ಗೊಡ್ಡಾರ್ಡ್ ನ ಅಮೂಲ್ಯ ವಿಚಾರಗಳೆಷ್ಟೋ ಅವರ ಜೀವಿತಕಾಲದಲ್ಲಿ ಹೊರೆಗೆ ಬರಲಿಲ್ಲ.

1920ಕ್ಕೆ ಮೊದಲು ವಿವಿಧ ಸಿಡಿಮದ್ದುಗಳನ್ನು ಉಪಯೋಗಿಸಿ ಅವನು ರಾಕೆಟುಗಳನ್ನು ಹಾರಿಸುವ ಪ್ರಯತ್ನಗಳನ್ನು ಮಾಡಿದ್ದ. ಎತ್ತರದಲ್ಲಿರುವ ಉಷ್ಣತೆಯನ್ನು ಅಳೆಯಲು ರಾಕೆಟ್ ಕಳಿಸಬೇಕೆಂಬ ಹಂಚಿಕೆ ಅವನದು. 1920 ರಲ್ಲಿ ದ್ರವ ಇಂಧನದ ರಾಕೆಟ್ ಗಳ ಪ್ರಯೋಗವನ್ನು ಗೊಡ್ಡಾರ್ಡ್ ಆರಂಭಿಸಿದ. ಇದರ ಫಲಿತಾಂಶ ಪ್ರಪಂಚದ ಮೊದಲ ದ್ರವ ಇಂಧನ ರಾಕೆಟ್. ಉಡಾವಣೆಯ ದಿನಾಂಕ 1926 ಮಾರ್ಚ್ 16. ಇದು ಮೂರು ಮೀಟರ್ ಗಳ ಲೋಹೀಯ ಕೊಳವೆ. ಸುಮಾರು 12.3 ಮೀಟರ್ ಎತ್ತರ ಮುಟ್ಟಿ, 55.2 ಮೀಟರ್ ದೂರದಲ್ಲಿ ಬಿದ್ದಿತು. ದ್ರವ ಇಂಧನ ಉಪಯೋಗಿಸಿ ರಾಕೆಟ್ ಹಾರಿಸಬಹುದೆನ್ನುವ ಅಂಶ ಇದರಿಂದ ಖಚಿತವಾಯಿತು. ಮುಂದೆ ನ್ಯೂ ಮೆಕ್ಸಿಕೋದ ರೋಸ್ ವೆಲ್ ಎಂಬಲ್ಲಿ ಗೊಡ್ಡಾರ್ಡ್ ತನ್ನ ರಾಕೆಟ್ ಪ್ರಯೋಗಗಳನ್ನು ನಡೆಸಿದ. ರಾಕೆಟುಗಳ ಗಾತ್ರಗಳನ್ನು ಹೆಚ್ಚಿಸಿದ. ಕ್ಯಾಮರಾ, ಉಷ್ಣತಾಮಾಪಕ, ವಾಯುಭಾರ ಮಾಪಕಗಳುಳ್ಳ ರಾಕೆಟನ್ನು 1929ರಲ್ಲಿ ಉಡಾಯಿಸಿದ.

ಈ ವೇಳೆಗೆ ಸುಪ್ರಸಿದ್ಧ ವೈಮಾನಿಕ ಹಾರಾಟಗಾರ ಚಾರ್ಲ್ಸ್ ವಿ. ಲಿಂಡ್ ಬರ್ಗ್ ಎಂಬುವನ ಶಿಫಾರಸ್ಸಿನಿಂದ ಗೊಡ್ಡಾರ್ಡ್ ನಿಗೆ ಮತ್ತೊಂದು ಸಂಸ್ಥೆಯ ಧನ ಸಹಾಯ ಲಭಿಸಿತು. 1935 ರಲ್ಲಿ ಧ್ವನಿಯ ವೇಗದಲ್ಲಿ ಅವನ ರಾಕೆಟ್ ಧಾವಿಸಿತು. 1939ರಲ್ಲಿ 5.4 ಮೀಟರ್ ಗಳ ಅವನ ರಾಕೆಟ್ 1.6 ಕಿಲೋಮೀಟರ್ ಮೇಲಕ್ಕೆ ಹಾರಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಗೊಡ್ಡಾರ್ಡ್ ಏರೊನಾಟಿಕ್ಸ್ ಬ್ಯುರೋದ ನಿರ್ದೇಶಕನಾಗಿ ನೇಮಿಸಲ್ಪಟ್ಟನು. ಜಲನೌಕೆಗಳಿಂದ ವಿಮಾನಗಳನ್ನು ಉಡಾಯಿಸುವುದಕ್ಕೆ ಗೊಡ್ಡಾರ್ಡ್ ರಾಕೆಟನ್ನು ಬಳಸಿ ತೋರಿಸಿದ.

1936ರಲ್ಲಿ “ದ್ರವ ಇಂಧನ ರಾಕೆಟಿನ ಬೆಳವಣಿಗೆ” ಎಂಬ ಮತ್ತೊಂದು ಪ್ರೌಢ ಪ್ರಬಂಧವನ್ನು ಬರೆದ. “ರಾಕೆಟ್ ಬೆಳವಣಿಗೆ; ದ್ರವ ಇಂಧನ ರಾಕೆಟ್ ನ ಬಗೆಗೆ ಸಂಶೋಧನೆ 1929-41″ಎಂಬ ಬರಹ ಅವನ ಮರಣಾ ನಂತರ ಅವನ ಪತ್ನಿ ಎಸ್ತರಳಿಂದ ಸಂಪಾದಿಸಲ್ಪಟ್ಟು ಪ್ರಕಟವಾಯಿತು. ಗೊಡ್ಡಾರ್ಡ್ 1945 ಆಗಸ್ಟ್ 10ರಂದು ಮೇರಿಲ್ಯಾಂಡಿನ ಬಾಲ್ಟಿಮೋರ್ ನಲ್ಲಿ ತೀರಿಕೊಂಡನು. ಅಮೆರಿಕದ “ನಾಸಾ” ಸಂಸ್ಥೆ ಅಯೋವ ಪ್ರಾಂತದ ಗ್ರೀನ್ ಬೆಲ್ಟ್ ನ ಸಂಶೋಧನಾ ತಾಣಕ್ಕೆ ಗೊಡ್ಡಾರ್ಡ್ ನ ಸ್ಮರಣಾರ್ಥ “ಗೊಡ್ಡಾರ್ಡ್ ಕೇಂದ್ರ” ಎಂದು ಹೆಸರಿಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ