ಆಧುನಿಕ ರಾಕೆಟ್ ಉಡ್ಡಯನ ತಂತ್ರದ ಅದ್ಯಪ್ರವರ್ತಕ "ಹರ್ಮನ್ ಜೂಲಿಯಸ್ ಓಬರ್ತ್" - Mahanayaka
10:04 PM Friday 13 - December 2024

ಆಧುನಿಕ ರಾಕೆಟ್ ಉಡ್ಡಯನ ತಂತ್ರದ ಅದ್ಯಪ್ರವರ್ತಕ “ಹರ್ಮನ್ ಜೂಲಿಯಸ್ ಓಬರ್ತ್”

hermann julius oberth
29/09/2024

  • ಉದಂತ ಶಿವಕುಮಾರ್

19 ನೇ ಶತಮಾನದ ಪ್ರಸಿದ್ಧ ಫ್ರೆಂಚ್ ಕಾದಂಬರಿಕಾರ ಜೂಲ್ಸ್ ವರ್ನ್ “ಭೂಮಿಯಿಂದ ಚಂದ್ರನತ್ತ” ಎಂಬ ಒಂದು ಕಾದಂಬರಿಯನ್ನು ಬರೆದ. ಇದನ್ನು ಓದಿ ಉತ್ಸಾಹಿತನಾಗಿ ಆ ಕಥೆಯನ್ನು ಸತ್ಯವಾಗಿಸಬೇಕೆಂದು ಸತತವಾಗಿ ದುಡಿದ ತರುಣ “ಹರ್ಮನ್ ಜೂಲಿಯಸ್ ಓಬರ್ತ್” ಮುಂದೆ “ಅಧುನಿಕ ರಾಕೆಟ್ ಉಡ್ಡಯನ ತಂತ್ರದ ಅದ್ಯಪ್ರವರ್ತಕ”ನೆಂದು ಹೆಸರಾದ.

ಆಸ್ಟ್ರಿಯ-ಹಂಗೆರಿ ಸಾಮ್ರಾಜ್ಯದ ಭಾಗವಾಗಿದ್ದ ಟ್ರಾನ್ಸಿಲ್ವೇನಿಯಾದ ಹರ್ಮನ್ ಸ್ಟಾಟ್ ಎಂಬಲ್ಲಿ 1894ರ ಜೂನ್ 5ರಂದು ಓಬರ್ತ್ ಜನಿಸಿದ. ಹಳ್ಳಿ ವೈದ್ಯನ ಮಗನಾಗಿದ್ದ ಇವನಿಗೆ ಯಾಂತ್ರಿಕ, ವೈಜ್ಞಾನಿಕ ವಿಷಯಗಳೆಂದರೆ ಅತಿ ಆಸಕ್ತಿ. ತಂದೆಯ ಒತ್ತಾಯದಂತೆ ವೈದ್ಯಕೀಯ ಶಿಕ್ಷಣಕ್ಕೆಂದು ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯವನ್ನು ಸೇರಿದರೂ ಗಣಿತ ಖಗೋಲ ವಿಜ್ಞಾನಗಳ ಅಧ್ಯಯನವನ್ನು ಬಿಡಲಿಲ್ಲ. ಓಬರ್ತ್ ವಿಶ್ವವಿದ್ಯಾಲಯದಲ್ಲಿದ್ದಾಗಲೇ ಮೊದಲನೆಯ ಮಹಾಯುದ್ಧ ಆರಂಭವಾಯಿತು. ಆಗ ಅವನು ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಸೈನ್ಯ ಸೇರಬೇಕಾಯಿತು. ಯುದ್ಧ ಕೊನೆಗೊಂಡ ಬಳಿಕ ವಿಶ್ವವಿದ್ಯಾಲಯಕ್ಕೆ ಹಿಂದಿರುಗಿದ. ಗಣಿತ ಮತ್ತು ಭೌತವಿಜ್ಞಾನಗಳನ್ನು ತನ್ನ ಅಧ್ಯಯನದ ವಿಷಯಗಳನ್ನಾಗಿ ಆಯ್ದುಕೊಂಡು ಶಿಕ್ಷಕನಾಗಿ ತರಬೇತಿಗೊಂಡ. ಹುಟ್ಟೂರಿನ ಹತ್ತಿರದ ಒಂದು ಶಾಲೆಯಲ್ಲಿ ಗಣಿತ ಉಪಾಧ್ಯಾಯನಾದ.

ಓಬರ್ತ್ ವಿಶ್ವವಿದ್ಯಾಲಯದಲ್ಲಿದ್ದಾಗಲೇ ವ್ಯೊಮಯಾತ್ರೆಯನ್ನು ಕುರಿತು ಒಂದು ಮಹಾ ಪ್ರಬಂಧವನ್ನು ಬರೆದ. ಡಾಕ್ಟರೇಟ್ ಪ್ರಶಸ್ತಿಗಾಗಿ ಅದನ್ನು ಹಲವಾರು ವಿಶ್ವವಿದ್ಯಾಲಯಗಳಿಗೆ ಕಳುಹಿಸಿದರೂ ಎಲ್ಲೂ ಅದಕ್ಕೆ ಮನ್ನಣೆ ಸಿಗಲಿಲ್ಲ. ಇದನ್ನು ಪುಸ್ತಕವಾಗಿ ಪ್ರಕಟಿಸಬೇಕೆಂದು ಪ್ರಕಾಶಕರನ್ನು ಪ್ರಾರ್ಥಿಸಿದ. ಯಾರು ಸಹಾನುಭೂತಿ ತೋರಲಿಲ್ಲ. ಮುದ್ರಣ ವೆಚ್ಚದ ಸ್ವಲ್ಪ ಅಂಶವನ್ನು ಓಬರ್ತ್ ನೇ ವಹಿಸಿಕೊಂಡ ಆಮೇಲೆ 1923ರಲ್ಲಿ ಅವನ “ಗ್ರಾಹಾಂತರ ಹರವಿನತ್ತ ರಾಕೆಟ್ ಎಂಬ ಪುಸ್ತಕ ಪ್ರಕಟವಾಯಿತು. ಇದರ ಬಗೆಗೆ ವಿಪುಲ ಚರ್ಚೆ ನಡೆದು ಕೃತಿ ಪ್ರಖ್ಯಾತವಾಯಿತು. ಓಬರ್ತ್ ನ ಪುಸ್ತಕ ವ್ಯೋಮಯಾನದ ಬಗೆಗೆ ಕ್ಲಿಷ್ಟವಾದ ಲೆಕ್ಕಾಚಾರಗಳಿಂದ ತುಂಬಿತ್ತು. ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ಬಾಹ್ಯಾಂತರಿಕ್ಷಕ್ಕೆ ಸಾಗಬೇಕಾದರೆ ರಾಕೆಟ್ ಪಡೆಯಬೇಕಾದ ವೇಗವನ್ನೂ ಓಬರ್ತ್ ಸೂಚಿಸಿದ್ದ. ರಾಕೆಟ್ ರಚನೆಗೆ ಬೇಕಾದ ಸಾಮಗ್ರಿಗಳನ್ನೂ, ರಚನಾವಿಧಾನವನ್ನೂ ಚಿತ್ರಿಸಿದ್ದ. ದ್ರವ ಇಂಧನದ ಬಳಕೆಯನ್ನು ಸಮರ್ಥಿಸಿದ್ದ. ಇದನ್ನು ಬಳಸುವ ನೌಕೆಯಲ್ಲಿ ಚಂದ್ರ ಉಪಗ್ರಹವನ್ನು ತಲುಪಿ ಹಿಂದೆ ಬರಬಹುದೆಂದು ಭವಿಷ್ಯ ನುಡಿದಿದ್ದ.

ಓಬರ್ತ್ ತನ್ನ ಪುಸ್ತಕದಲ್ಲಿ ವ್ಯೋಮ ನಿಲ್ದಾಣಗಳ ಸಾಧ್ಯತೆಯನ್ನೂ ಪ್ರಸ್ತಾಪಿಸಿದ್ದ. ವ್ಯೊಮ ನಿಲ್ದಾಣವೆಂದರೆ ಭೂಮಿಯಿಂದ ನಿರ್ದಿಷ್ಟ ದೂರದಲ್ಲಿ ಪರಿಭ್ರಮಿಸುವ ಕೃತಕ ಉಪಗ್ರಹ. ಭೂಮಿಯ ಗುರುತ್ವಾಕರ್ಷಣೆ ಹಾಗೂ ಅದರ ಕಕ್ಷಾವೇಗಗಳಿಂದಾಗಿ ಉಪಗ್ರಹ ಸಮತೋಲನದಲ್ಲಿರುತ್ತದೆ. ವ್ಯೋಮಯಾನದಲ್ಲಿ ಇದು ನಿಲ್ದಾಣವಾಗಬಹುದೆಂದೂ ವ್ಯೋಮ ಸಂಶೋಧನೆಯಲ್ಲಿ ನೆರವಾಗುವ ಪ್ರಯೋಗ ಶಾಲೆಯಾಗಬಹುದೆಂದೂ ಓಬರ್ತ್ ಕಲ್ಪಿಸಿದ.

1927ರಲ್ಲಿ ರಾಕೆಟ್ ಸಂಶೋಧನೆಯ ಬಗೆಗೆ ವಿಶೇಷ ಆಸಕ್ತಿ ಹೊಂದಿದ್ದ ಕೆಲವು ಜರ್ಮನರು “ಜರ್ಮನ್ ರಾಕೆಟ್ ಸಂಸ್ಥೆ”ಯನ್ನು ಸ್ಥಾಪಿಸಿದರು. ಓಬರ್ತ್ ಜರ್ಮನ್ ನಾಗರೀಕನಾಗದಿದ್ದರೂ ಅದರ ಪ್ರಪ್ರಥಮ ಸದಸ್ಯರಲ್ಲಿ ಒಬ್ಬನಾದ. ಓಬರ್ತ್ ಸೂಚಿಸಿದ ರಾಕೆಟನ್ನು ರಚಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು. ಸಂಸ್ಥೆಯ ಸದಸ್ಯರ ಸಂಖ್ಯೆ ದಿನದಿನಕ್ಕೆ ಬೆಳೆಯಿತು. 1929ರಲ್ಲಿ ಓಬರ್ತ್ ಇದರ ಅಧ್ಯಕ್ಷನಾಗಿ ಆರಿಸಲ್ಪಟ್ಟನು.

ಹಣದ ಅನುಕೂಲತೆ ಸಾಕಷ್ಟು ಇರದ ಕಾರಣ ಓಬರ್ತ್ ತನ್ನ ರಾಕೆಟನ್ನು ಕಟ್ಟಲು ಅಸಮರ್ಥನಾದ. 1928 ರಲ್ಲಿ ಅವನಿಗೆ ಅಪೂರ್ವವಾದೊಂದು ಅವಕಾಶ ಒದಗಿತು. “ಚಂದ್ರನ ಮೇಲೆ ಹುಡುಗಿ” ಎಂಬ ಚಲನಚಿತ್ರವನ್ನು ತಯಾರಿಸುತ್ತಿದ್ದ ಖಾಸಗಿ ಕಂಪನಿಯೊಂದು ವೈಜ್ಞಾನಿಕ ಸಲಹೆಗಾರನಾಗಿ ಬರುವಂತೆ ಆಹ್ವಾನಿಸಿತು. ಪ್ರಚಾರಕ್ಕಾಗಿ ಚಿತ್ರದ ಪ್ರಥಮ ಪ್ರದರ್ಶನದ ದಿನದಂದು ಒಂದು ರಾಕೆಟನ್ನು ಹಾರಿಸುವುದೆಂದು ನಿರ್ಧಾರವಾಯಿತು.

ಇದ್ದ ಕಾಲಾವಧಿ ಕಡಿಮೆ. ಅದಕ್ಕಾಗಿ ರಾಕೇಟಿನ ರಚನೆಯನ್ನು ಸರಳಗೊಳಿಸಬೇಕಾಯಿತು. ಕಂಪನಿ ನೀಡಿದ ಹಾಗೂ ತನ್ನ ಉಳಿತಾಯದ ಹಣದಿಂದ ರಾಕೆಟ್ ನಿರ್ಮಾಣವನ್ನು ಆರಂಭಿಸಿದ. ಅಡೆತಡೆಗಳನ್ನೆಣಿಸದೆ ಕೆಲಸ ಮಾಡಿದ. ಆದರೂ ಪ್ರಯೋಗ ಸಫಲವಾಗುವ ಲಕ್ಷಣ ಕಾಣಲಿಲ್ಲ. ಪ್ರದರ್ಶನದ ದಿನ ಸಮೀಪಿಸುತ್ತಿದ್ದಂತೆ ಓಬರ್ತ್ ನ ಕಳವಳ ಹೆಚ್ಚಾಯಿತು. ಒಂದು ದಿನ ಯಾರೊಡನೆಯೂ ಹೇಳದೆ ಆತ ಬರ್ಲಿನ್ ನಿಂದ ಪರಾರಿಯಾದ.

ಓಬರ್ತ್ ಹಿಂದಿನ ಉಪಾಧ್ಯಾಯ ವೃತ್ತಿಗೇ ಮರಳಿದ. ಆದರೆ ರಾಕೆಟಿನ ಹುಚ್ಚು ಅವನನ್ನು ಬಿಡಲಿಲ್ಲ. ತನ್ನ ಮೊದಲ ಪುಸ್ತಕವನ್ನು ಪರಿಷ್ಕರಿಸಿ ಹಲವಾರು ವಿಷಯಗಳನ್ನು ಸೇರಿಸಿ “ವ್ಯೋಮಯಾನದ ಹಾದಿ” ಎಂಬ ಪುಸ್ತಕವನ್ನು ಬರೆದ. ಇದರಲ್ಲಿ ವಿದ್ಯುತ್ ಚಾಲಿತ ಹಾಗೂ ಅಯಾನು ಚಾಲಿತ ರಾಕೆಟುಗಳು ಪ್ರಸ್ತಾಪಿಸಲ್ಪಟ್ಟಿದ್ದುವು. ಮುಂದೆ ಮೂರು ದಶಕಗಳೊಳಗೆ ಇಂತಹ ರಾಕೆಟುಗಳನ್ನು ತಯಾರಿಸಬಹುದೆಂದೂ ಆತ ಎಣಿಕೆ ಹಾಕಿದ್ದ. “ವ್ಯೋಮದಲ್ಲಿ ಮನುಷ್ಯ” ಎಂಬುದು ಓಬರ್ತ್ ನ ಇನ್ನೊಂದು ಮಹಾಕೃತಿ.

ಎರಡನೆಯ ಮಹಾಯುದ್ಧ ಸಮೀಪಿಸುತ್ತಿದ್ದಂತೆ ಹಲವು ರಾಷ್ಟ್ರಗಳು ಓಬರ್ತ್ ನ ರಾಕೆಟುಗಳನ್ನು ಯುದ್ಧದಲ್ಲಿ ಉಪಯೋಗಿಸುವ ಸಾಧ್ಯತೆಯ ಬಗೆಗೆ ಉತ್ಸಾಹ ತಳೆದುವು. 1938 ರಲ್ಲಿ ಮಿಲಿಟರಿ ಸಂಶೋಧನೆಗಳಿಗಾಗಿ ಓಬರ್ತ್ ವಿಯೆನ್ನಾ ತಾಂತ್ರಿಕ ಸಂಸ್ಥೆಗೆ ಆಹ್ವಾನಿಸಲ್ಪಟ್ಟ. ಅನಂತರ 1940 ರಲ್ಲಿ ಡ್ರೆಸ್ಡೆನಿನ ಒಂದು ತಾಂತ್ರಿಕ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾದ. ಅದೇ ವರ್ಷ ಜರ್ಮನ್ ನಾಗರಿಕತ್ವವನ್ನು ಪಡೆದ ಓಬರ್ತ್ 1941 ರಲ್ಲಿ ಪೀನೆಮುಂಡೆ ಎಂಬಲ್ಲಿ ಮಿಲಿಟರಿಯ ರಾಕೆಟ್ ಸಂಶೋಧನಾ ಕೇಂದ್ರಕ್ಕೆ ವರ್ಗಾಯಿಸಲ್ಪಟ್ಟನು.  ಅಲ್ಲಿ ಆತನಿಗೆ ಇನ್ನೊಬ್ಬ ಮಹಾ ಸಂಶೋಧಕ ವರ್ನರ್ ವಾನ್ ಬ್ರೌನ್ ನ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ಒದಗಿತು. ವಿ2 ಎಂಬ ರಾಕೆಟ್ ಯೋಜನೆಯಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ.

ಯುದ್ಧದ ಅನಂತರ ಕೆಲಕಾಲ ಸ್ವಿಟ್ಜರ್ ಲೆಂಡಿನ ಸಲಹೆಗಾರನಾಗಿದ್ದ. 1950 ರಲ್ಲಿ ಇಟಲಿಯ ನೌಕಾದಳಕ್ಕಾಗಿ ಘನ ಇಂಧನ ಚಾಲಿತ ರಾಕೆಟ್ಟುಗಳ ರೂಪುರೇಷೆಗಳನ್ನು ತಯಾರಿಸಿದ. 1955ರಲ್ಲಿ ಅಮೆರಿಕಕ್ಕೆ ಹೋಗಿ, ಆ ವೇಳೆಗಾಗಲೇ ಅಲ್ಲಿ ನೆಲೆಸಿದ್ದ ವರ್ನರ್ ವಾನ್ ಬ್ರೌನ್ ನನ್ನು ಕೂಡಿಕೊಂಡು ಹೆಚ್ಚಿನ ಸಂಶೋಧನೆಯಲ್ಲಿ ನಿರತನಾದ. 1958ರಲ್ಲಿ ತನ್ನ ನಿವೃತ್ತ ಜೀವನವನ್ನು ಸಂಶೋಧನೆ, ಉಪನ್ಯಾಸಗಳಲ್ಲಿ ಕಳೆಯಲು ಜರ್ಮನಿಗೆ ಹಿಂತಿರುಗಿದ. ಚಂದ್ರಯಾನದ ಕನಸು ನನಸಾಗುವುದನ್ನು ಕಂಡ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ