ಅನಂತ್– ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

ಮುಂಬೈ: ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವು ಇಂದು (ಜುಲೈ 12- ಶುಕ್ರವಾರ) ಮುಂಬೈನ ಬಾಂದ್ರಾ ಕುರ್ಲಾದಲ್ಲಿರುವ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ‘ಭಾರತೀಯ ಥೀಮ್’ನಲ್ಲಿ ನಡೆಸಲು ಎಲ್ಲ ರೀತಿಯಲ್ಲೂ ವಿವಾಹಕ್ಕೆ ಸಿದ್ಧವಾಗಿದೆ. ಭಾರತ ಮತ್ತು ವಿದೇಶಗಳ ಅತಿಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವುದಕ್ಕಾಗಿ ಇಡೀ ವೇದಿಕೆಯನ್ನು ಭಾರತೀಯ ಬಣ್ಣಗಳಲ್ಲಿ ಚಿತ್ರಿಸಲಾಗಿದೆ. ಅತಿಥಿಗಳ ಡ್ರೆಸ್ ಕೋಡ್ ಆಗಿರಲಿ, ಅಲಂಕಾರಕ್ಕಾಗಿ ಕೆತ್ತಿರುವ ಹೂವುಗಳು ಮತ್ತು ಎಲೆಗಳು, ಸಂಗೀತ ಅಥವಾ ವಿವಿಧ ಭಕ್ಷ್ಯಗಳು ಹೀಗೆ ಎಲ್ಲವೂ ಸಂಪೂರ್ಣವಾಗಿ ಭಾರತೀಯ ಮೌಲ್ಯಗಳಿಂದ ಕೂಡಿರಲಿವೆ.
ಮದುವೆ ಸಮಾರಂಭದ ಸ್ಥಳದಲ್ಲಿ ಕಾಶಿಯ ಅಂದರೆ ಬನಾರಸ್‌ನ ಘಾಟ್‌ಗಳನ್ನು ನಿಖರವಾಗಿ ಮರುಸೃಷ್ಟಿಸಲಾಗಿದೆ. ಈ ಘಾಟ್‌ಗಳಲ್ಲಿ ಅತಿಥಿಗಳು ನಗರದ ಚಾಟ್, ಕಚೋರಿ ಮತ್ತು ಪಾನ್ ಅನ್ನು ಆನಂದಿಸಲು ಸಾಧ್ಯವಾಗುತ್ತದೆ. ಬಾಬಾ ವಿಶ್ವನಾಥ ದೇವಸ್ಥಾನದ ಪ್ರತಿಕೃತಿ ಮತ್ತು ಬನಾರಸ್‌ನ ಶ್ರೀಮಂತ ಮತ್ತು ಪುರಾತನ ಸಂಪ್ರದಾಯಗಳ ಮಧ್ಯೆ ಈ ವಿವಾಹದ ವಿಧಿವಿಧಾನಗಳು ನೆರವೇರಲಿವೆ. ರುಚಿಯ ಜೊತೆಗೆ ಸಂಗೀತದ ಜುಗಲ್ಬಂಧಿಯೂ ಇರುತ್ತದೆ. ಕಾಶಿಯ ಸ್ಥಳೀಯ ಕಲಾವಿದರು ಮತ್ತು ಸಂಗೀತಗಾರರು ಅತಿಥಿಗಳಿಗೆ ಸಂಗೀತದ ರಸದೌತಣವನ್ನು ಉಣಬಡಿಸಲಿದ್ದಾರೆ. ಅನಂತ್ ಅವರ ತಾಯಿ ನೀತಾ ಅಂಬಾನಿ ಬನಾರಸ್ ಮತ್ತು ಬನಾರಸಿ ನೇಕಾರರೊಂದಿಗೆ ಹಳೆಯ ಪರಿಚಯ ಹಾಗೂ ಬಾಂಧವ್ಯವನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ನೀತಾ ಅಂಬಾನಿ ಕಾಶಿ-ವಿಶ್ವನಾಥ ದೇವರ ಪಾದದಡಿಯಲ್ಲಿ ಮದುವೆಯ ಆಮಂತ್ರಣವನ್ನು ಇಟ್ಟು, ಆಹ್ವಾನವನ್ನು ನೀಡಿದ್ದರು.
ಅನಂತ್-ರಾಧಿಕಾ ವಿವಾಹದಲ್ಲಿ ಹಿಂದೂಸ್ತಾನಿ ಸಂಗೀತದ ಅತಿರಥ- ಮಹಾರಥರು ಭಾರತದ ಶ್ರೀಮಂತ ಸಂಗೀತ ಸಂಪ್ರದಾಯಗಳನ್ನು ಜಗತ್ತಿಗೆ ಪರಿಚಯಿಸಲಿದ್ದಾರೆ. ಸಿತಾರ್, ಷಹನಾಯಿ, ಸರೋದ್, ರಾಜಸ್ಥಾನಿ ಜನಪದ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಗಜಲ್ ಅನ್ನು ಸಹ ಅತಿಥಿಗಳು ಆನಂದಿಸುತ್ತಾರೆ. ಈ ಕೂಟದಲ್ಲಿ “ಭಜನ್ ನಿಂದ ಬಾಲಿವುಡ್”ವರೆಗಿನ ಸಂಗೀತವು ಆವರಿಸಿರುತ್ತದೆ. ಭಾರತದ ಖ್ಯಾತ ಸಂಗೀತ ಸಂಯೋಜಕರು ಮತ್ತು ಗಾಯಕರಾದ ಶಂಕರ್ ಮಹಾದೇವನ್, ಹರಿಹರನ್, ಸೋನು ನಿಗಮ್, ಶ್ರೇಯಾ ಘೋಷಾಲ್ ಮತ್ತು ಕೌಶಿಕಿ ಚಕ್ರವರ್ತಿ, ಅಮಿತ್ ತ್ರಿವೇದಿ, ನೀತಿ ಮೋಹನ್ ಮತ್ತು ಪ್ರೀತಮ್ ಕಾರ್ಯಕ್ರಮ ನೀಡಲಿದ್ದಾರೆ. ಜನಪದ ಗಾಯಕರಾದ ಮಾಮೆ ಖಾನ್ ಮತ್ತು ಗಜಲ್ ಕಲಾವಿದೆ ಕವಿತಾ ಸೇಠ್ ಕೂಡ ತಮ್ಮ ಗಾಯನದಿಂದ ಪ್ರೇಕ್ಷಕರನ್ನು ಪುಳಕಗೊಳಿಸಲಿದ್ದಾರೆ. ಅನಿಲ್ ಭಟ್, ಸುಮೀತ್ ಭಟ್ ಮತ್ತು ವಿವೇಕ್ ಭಟ್ ಸಂಗೀತಕ್ಕೆ ಪಂಜಾಬಿಯ ಸಂಭ್ರಮವನ್ನು ಸಹ ಸೇರಿಸುತ್ತಾರೆ.
ಅಂಬಾನಿ ಕುಟುಂಬಕ್ಕೆ ಹಿಂದೂ ಪದ್ಧತಿ ಮತ್ತು ಸನಾತನ ಧರ್ಮದಲ್ಲಿ ಅಪಾರ ನಂಬಿಕೆ ಇದೆ. ಈ ಕಾರಣಕ್ಕಾಗಿ ಕಾಶಿಯ ಥೀಮ್ ಆಯ್ಕೆ ಮಾಡಲಾಗಿದೆ. ಮದುವೆ ಸಮಾರಂಭದಲ್ಲಿ ವಿಷ್ಣುವಿನ ದಶಾವತಾರವನ್ನೂ ಪ್ರದರ್ಶಿಸಲಾಗಿದೆ. ವಿಷ್ಣುವಿನ ಹತ್ತು ಅವತಾರಗಳನ್ನು ಆಡಿಯೋ ದೃಶ್ಯದ ಮೂಲಕ ವಿವರಿಸಲಾಗಿದೆ. ಮದುವೆಯ ನಂತರವೂ ಈ ಪ್ರದರ್ಶನ ಮುಂದುವರಿಯುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97