ದರ್ಶನ್ ಬಗ್ಗೆ ಬಂದ ಸುದ್ದಿಗಳೆಲ್ಲ ಸುಳ್ಳೆ?: ಸಾಮಾಜಿಕ ಜಾಲತಾಣಗಳಲ್ಲಿ ಹೀಗೊಂದು ಪ್ರಶ್ನೆ!

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳ ಕಾಲವು ಕನ್ನಡ ಸುದ್ದಿವಾಹಿನಿಗಳಲ್ಲಿ ವಿವಿಧ ರೀತಿಯ ಸುದ್ದಿಗಳು ಪ್ರಕಟವಾಗಿದ್ದವು. ಆದರೆ ಈ ಸುದ್ದಿಗಳೆಲ್ಲ ಕೇವಲ ಕಾಲ್ಪನಿಕವಾಗಿದ್ದವೇ ಎನ್ನುವ ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ನಟ ದರ್ಶನ್ ಅವರು ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿರುವ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಇಂತಹದ್ದೊಂದು ಪ್ರಶ್ನೆ ಎದ್ದಿದೆ.
ದರ್ಶನ್ ಜೈಲಿನಲ್ಲಿ ಕಷ್ಟಪಡುತ್ತಿದ್ದಾರೆ. ಅವರಿಗೆ ಊಟ ಸೇರ್ತಾ ಇಲ್ಲ, ಮಲಗಲು ಚಾಪೆ ಕೊಟ್ಟಿದ್ದಾರೆ. ಸುಖದ ಸುಪ್ಪತ್ತಿನಲ್ಲಿ ಜೀವನ ಸಾಗಿಸಿದ ದರ್ಶನ್ ಸರಿಯಾಗಿ ನಿದ್ದೆ ಇಲ್ಲದೇ ಕಂಗಾಲಾಗಿದ್ದಾರೆ ಎಂಬಂತಹ ನಾನಾ ರೀತಿಯ ಸುದ್ದಿಗಳು 24×7 ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಆದ್ರೆ ಈಗ ನೋಡಿದ್ರೆ, ದರ್ಶನ್ ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹಾಗಿದ್ರೆ ಜೈಲಿನೊಳಗೆ ಏನು ನಡಿತಾ ಇತ್ತು ಅನ್ನೋದು ತಿಳಿಯದೇ ಕೇವಲ ಕಾಲ್ಪನಿಕವಾಗಿ ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿದರೆ ಅನ್ನೋ ಅನುಮಾನ ಕೇಳಿ ಬಂದಿದೆ.
ನಟ ದರ್ಶನ್ ಕೇಸ್ ಬಳಿಕ ಸುದ್ದಿವಾಹಿನಿಗಳ ಆ್ಯಂಕರ್ ಗಳ ವರ್ತನೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಪ್ರಕರಣದಲ್ಲಿ ಸರಿಯಾದ ಮಾಹಿತಿಗಳಿಲ್ಲದೇ, ಟಿಆರ್ ಪಿಗಾಗಿ ಈ ಕೇಸ್ ನ್ನು ಬಳಕೆ ಮಾಡಲಾಗ್ತಿದೆ ಅನ್ನೋ ಆಕ್ರೋಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಇದೀಗ ನಟ ದರ್ಶನ್ ಬಗ್ಗೆ ಸುದ್ದಿವಾಹಿನಿಗಳು ಸರಿಯಾದ ಮಾಹಿತಿಗಳಿಲ್ಲದೇ ಕಾಲ್ಪನಿಕವಾಗಿ ಸುದ್ದಿಗಳನ್ನು ಮಾಡಿವೆ ಎನ್ನುವ ವಿಚಾರ ಚರ್ಚೆಯಾಗ್ತಿವೆ.
ದರ್ಶನ್ ತನ್ನ ಕುಟುಂಬ ನೋಡಲು ಬಂದಾಗ ಕಣ್ಣೀರು ಹಾಕಿದ್ರಂತೆ ಈ ರೀತಿಯ ಸಾಕಷ್ಟು ಸುದ್ದಿಗಳು ಕ್ಷಣಕ್ಷಣಕ್ಕೂ ಪ್ರಸಾರವಾಗ್ತಿತ್ತು. ಒಂದು ರೀತಿಯಲ್ಲಿ ಕೊಲೆ ಆರೋಪಿಯಾಗಿರುವ ದರ್ಶನ್ ಮೇಲೆ ಇದು ಅನುಕಂಪ ಸೃಷ್ಟಿಸಲೂ ಕಾರಣವಾಗಿತ್ತು. ಜೈಲಿನೊಳಗೆ ಏನು ನಡೀತಿದೆ ಅನ್ನೋದು ಹೊರ ಪ್ರಪಂಚಕ್ಕೆ ಗೊತ್ತಿರಲಿಲ್ಲ. ಆದರೂ ಕಾಲ್ಪನಿಕ ವರದಿಗಳನ್ನು ಜನರು ನಂಬುವಂತಾಗಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕೂಡ ಹಲವಾರು ಸುದ್ದಿಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಆದರೆ, ಇದ್ಯಾವುದು ಕೂಡ ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಗಳಲ್ಲ ಕೇವಲ ಕಾಲ್ಪನಿಕ ಮಾಹಿತಿಗಳಾಗಿತ್ತೇ? ಎನ್ನು ಪ್ರಶ್ನೆಗಳು ಕೂಡ ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth