ಪಶ್ಚಿಮ ಬಂಗಾಳದ ಅಲಿಪುರದಿಂದ ಜಿರಾಫೆ ತರಲು ಯತ್ನ: ಈಶ್ವರ ಖಂಡ್ರೆ - Mahanayaka

ಪಶ್ಚಿಮ ಬಂಗಾಳದ ಅಲಿಪುರದಿಂದ ಜಿರಾಫೆ ತರಲು ಯತ್ನ: ಈಶ್ವರ ಖಂಡ್ರೆ

eshwer kander
22/09/2023

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಜಿರಾಫೆ ಮಾತ್ರ ಇದ್ದು, ಪಶ್ಚಿಮ ಬಂಗಾಳದ ಅಲಿಪುರದಿಂದ ಮತ್ತೊಂದು ಜಿರಾಫೆ ತರಿಸುವ ಪ್ರಯತ್ನ ನಡೆದಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಇಂದು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿ, ಚಿರತೆ ಮತ್ತು ಜಿಂಕೆಗಳ ಸಾವಿನ ಖುದ್ದು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬನ್ನೇರುಘಟ್ಟದಲ್ಲಿರುವ ಜಿರಾಫೆಯನ್ನು ಮೈಸೂರು ಮೃಗಾಲಯದಿಂದ ತರಿಸಲಾಗಿದ್ದು, ಏಕ ಪ್ರಾಣಿ ಇರುವ ಮೃಗಾಲಯಗಳಲ್ಲಿ ಮತ್ತೊಂದು ಅದೇ ಜಾತಿಯ ಪ್ರಾಣಿ ತರಿಸಲು ಸರ್ಕಾರ ಎಲ್ಲ ಬೆಂಬಲ ನೀಡಲಿದೆ ಎಂದರು.

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಉತ್ತಮ ಮೃಗಾಲಯ ಇದೆ, ಸಫಾರಿ ಇದೆ. ಇಲ್ಲಿ ಆನೆ, ಚಿರತೆ, ಹುಲಿ, ಸಿಂಹ, ಕರಡಿ, ಜಿಂಕೆಗಳು ಸ್ವೇಚ್ಛೆಯಾಗಿ ವಿಹರಿಸುವುದನ್ನು ನೋಡಬಹುದಾಗಿದೆ. ಬೆಂಗಳೂರಿಗೆ ಸಮೀಪದಲ್ಲೇ ಇದ್ದು, ಹೆಚ್ಚಿನ ಜನರು ಆಗಮಿಸುವ ಕಾರಣ, ಮುಖ್ಯರಸ್ತೆಯಿಂದ ಪರ್ಯಾಯವಾಗಿ ಮತ್ತೊಂದು ಸಂಪರ್ಕ ರಸ್ತೆ ಕಲ್ಪಿಸುವ ಅಗತ್ಯವಿದೆ, ಈ ನಿಟ್ಟಿನಲ್ಲಿ 6 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ಇದಕ್ಕೆ 40-50 ಕೋಟಿ ರೂ. ಅಗತ್ಯವಿದೆ, ಜೊತೆಗೆ ಬನ್ನೇರುಘಟ್ಟದವರೆಗೆ ಮೆಟ್ರೋ ರೈಲು ವಿಸ್ತರಣೆ ಮಾಡುವ ಬೇಡಿಕೆಯೂ ಇದ್ದು, ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೆಂದಿಗೆ ಚರ್ಚಿಸಲಾಗುವುದು ಎಂದರು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಅರಣ್ಯಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ನಡುವೆ ಉತ್ತಮ ಸಾಮರಸ್ಯವಿದ್ದು, ಪ್ರಾಣಿಗಳ ಸಂರಕ್ಷಣೆಗೆ ಎಲ್ಲ ಅಗತ್ಯಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ