ಅಯೋಗ್ಯರ ಎದೆಯೊಳಗೆ ಅರಸೊತ್ತಿಗೆಯ ಕನಸು ಬಿತ್ತಿದ ಮಹಾಗುರು... | ಮಹೇಶ್ ಸರಗೂರು - Mahanayaka

ಅಯೋಗ್ಯರ ಎದೆಯೊಳಗೆ ಅರಸೊತ್ತಿಗೆಯ ಕನಸು ಬಿತ್ತಿದ ಮಹಾಗುರು… | ಮಹೇಶ್ ಸರಗೂರು

15/03/2021

“ಈ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಜಾತಿವ್ಯವಸ್ಥೆಯ ಅಸ್ತಿತ್ವವೇ ಕಾರಣ.ಈ ಜಾತಿ ಅಸಮಾನತೆಗೆ ಅಧಿಕಾರ ಹೀನತೆಯೇ ಮೂಲ ಕಾರಣ. ಜಾತಿ ವ್ಯವಸ್ಥೆಯಿಂದಾಗಿ ಬಹುಜನರು ಅಪಮಾನದಿಂದ ಬದುಕುತ್ತಿದ್ದಾರೆ. ಅಧಿಕಾರ ಹೀನತೆಯಿಂದಾಗಿ ಬಡತನದಿಂದ ಬಳಲುತ್ತಿದ್ದಾರೆ. ಭಾರತೀಯರ ಬದುಕಿನಲ್ಲಿ ಭದ್ರವಾಗಿ ಬೆಸೆದುಕೊಂಡಿರುವ ಬ್ರಾಹ್ಮಣವಾದದ ಬೇರುಗಳನ್ನು ಬುಡ ಸಹಿತ ನಾಶಗೊಳಿಸಿ, ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿಸುವುದು ನನ್ನ ಗುರಿ. ಶೋಷಿತ ಸಮಾಜವು ಆಳುವ ಸಮಾಜವಾಗುವುದರಿಂದ ಮಾತ್ರ ಜಾತಿರಹಿತ ಸಮಾಜವನ್ನು ಸೃಷ್ಟಿ ಮಾಡಬಹುದು. ಇಂತಹ ಯೋಗ್ಯವಾದ ಗುರಿಯನ್ನು ಸಾಕಾರಗೊಳಿಸುವ ಭಾಗ್ಯ ನನ್ನದಾದರೆ ನನ್ನ ಹುಟ್ಟು ಧನ್ಯ! ಇನ್ನು ಮುಂದೆ ನಾನು ಬದುಕುವುದಾದರೆ ಈ ಧ್ಯೇಯಕ್ಕಾಗಿಯೇ ಬದುಕುತ್ತೇನೆ. ಒಂದು ವೇಳೆ ಸಾಯುವುದಾದರೆ ನಾನು ಈ ಧ್ಯೇಯ ಸಾಧನೆಗಾಗಿಯೇ ಸಾಯುತ್ತೇನೆ.  ಬಾಬಾಸಾಹೇಬ್ ಅಂಬೇಡ್ಕರರ ಕನಸನ್ನು ನನಸು ಮಾಡುವ ತನಕ ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನನ್ನ ರಕ್ತ ಸಂಬಂಧಿಗಳೊಂದಿಗೆ ನಾನು ಯಾವುದೇ ಭಾವನಾತ್ಮಕ ಸಂಬಂಧಗಳನ್ನು ಇಟ್ಟುಕೊಳ್ಳುವುದಿಲ್ಲ.  ನಾನು ಹುಟ್ಟಿ ಬೆಳೆದ ಊರಿಗೆ ಕಾಲಿಡುವುದಿಲ್ಲ. ವೈಯಕ್ತಿಕವಾಗಿ ನಾನು ಯಾವುದೇ ಆಸ್ತಿ-ಪಾಸ್ತಿಯನ್ನು ಹೊಂದುವುದಿಲ್ಲ. ಬಹುಜನ ಸಮಾಜವೇ ನನ್ನ ಕುಟುಂಬ. ಈ ಸಮಾಜದ ಏಳಿಗೆಗಾಗಿ ನಾನು ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ. ನನ್ನ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ಕೊಡುತ್ತೇನೆ. ಗುಲಾಮ ಸಮಾಜವನ್ನು ಆಳುವ ಸಮಾಜವನ್ನಾಗಿ ರೂಪಿಸಿಯೇ ತೀರುತ್ತೇನೆ. ಅದಕ್ಕಾಗಿ ಇಂದಿನಿಂದ ನಿಮ್ಮೆಲ್ಲರ ಪಾಲಿಗೆ ನಾನು ಸತ್ತು ಹೋಗಿದ್ದೇನೆ”

ಅಂಬೇಡ್ಕರ್ ವಾದದ ಅನುಷ್ಠಾನಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿಕೊಂಡ ಸಂತನೊಬ್ಬ ತನ್ನ ಹೆತ್ತ ತಾಯಿಗೆ ಬರೆದ ಸುದೀರ್ಘ 24 ಪುಟಗಳ ಪತ್ರದ ಆಯ್ದ ಸಾರಾಂಶವಿದು..!

ನುಡಿದಂತೆ ನಡೆದು, ಅಸಾಧ್ಯವಾದುದನ್ನು ಸಾಧಿಸಿ, ರಾಜಕೀಯ ಜಗತ್ತೇ ನಿಬ್ಬೆರಗಾಗಿ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಆ ಅಸಾಧಾರಣ ಸಾಹಸಿಯೇ “ದಾದಾಸಾಹೇಬ್ ಕಾನ್ಷಿರಾಮ್”

ಅಂಬೇಡ್ಕರ್ ಎಂಬ ಅದ್ವಿತೀಯ ಜ್ಞಾನಿಯ ಮಾತು, ಕೃತಿ, ಚಿಂತನೆಗಳನ್ನು ಆಳವಾಗಿ ಗ್ರಹಿಸಿ, ಮೆದುಳಿಗಿಳಿಸಿಕೊಂಡು ಅದಕ್ಕೆ ರಾಜಕೀಯ ರೂಪ ಕೊಟ್ಟ ಕಾನ್ಷಿರಾಮ್ ರವರದು ಭಾರತದ ರಾಜಕೀಯದಲ್ಲಿ ಮದ್ದಾನೆಯ ಹಾದಿ. ಏಕಾಂಗಿ ಹೋರಾಟ. “ಸಾವಿರಾರು ವರ್ಷಗಳಿಂದ ಶೋಷಿತರಾಗಿರುವ ಎಸ್.ಸಿ, ಎಸ್.ಟಿ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಾಜಕೀಯ ಮುಖ್ಯವಾಹಿನಿಗೆ ತರಬೇಕು. ಅವರನ್ನು ಆಳುವ ದೊರೆಗಳನ್ನಾಗಿ ಮಾಡಬೇಕು”ಎಂದು ಪಣ ತೊಟ್ಟಿದ್ದ ಕಾನ್ಷಿರಾಮ್ ರವರು ಕಾಲಗರ್ಭದಲ್ಲಿ ಅಮೂಲ್ಯ ನಿಧಿಯಾಗಿ ಹುದುಗಿ ಹೋಗಿದ್ದ ಫುಲೆ-ಪೆರಿಯಾರ್-ಶಾಹು-ನಾಲ್ವಡಿ-ನಾರಾಯಣಗುರು ಎಂಬ ಮಾನವಕುಲ ಮರೆಯಬಾರದ ಮಹಾಗುರುಗಳನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ಹೊರತೆಗೆದು ಬಹುಜನ ಸಮಾಜಕ್ಕೆ ಪರಿಚಯಿಸಿದರು. ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ ಕಾನ್ಷಿರಾಮರು ಪಕ್ಷದ ಪ್ರಚಾರ ಸಾಮಗ್ರಿಗಳನ್ನು ಸ್ವತಃ ತಾವೇ ಸ್ವತಃ ಹೊತ್ತು ಲಾರಿಗೆ ಹಾಕುತ್ತಿದ್ದರು. ಅದನ್ನು ದೇಶದ ಮೂಲೆ-ಮೂಲೆಗೂ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರು. ಕಾರ್ಯಕ್ರಮವಿದ್ದಾಗ  ಗೋಡೆಗಳಿಗೆ ಪ್ರಚಾರ ಪತ್ರಗಳನ್ನು ಅಂಟಿಸುತ್ತಿದ್ದರು. ಹಾರೆ-ಗುದ್ದಲಿಗಳನ್ನು ಹಿಡಿದು ವೇದಿಕೆಯನ್ನು ತಯಾರಿಸುತ್ತಿದ್ದರು. ಹೆಗಲಿಗೆ ಮೈಕು ಕಟ್ಟಿಕೊಂಡು ಹೆಸರಾಂತ ನಾಯಕರೊಬ್ಬರು ಸಭೆಗೆ ಬರುತ್ತಿದ್ದಾರೆಂದು ಎಲ್ಲೆಂದರಲ್ಲಿ ಪ್ರಚಾರ ಮಾಡುತ್ತಿದ್ದರು. ಸಮಾರಂಭದ ದಿನ ತಾವೇ ಮುಖ್ಯ ಅತಿಥಿಗಳಾಗಿ ಬಂದು ಅಚ್ಚರಿ ಮೂಡಿಸುತ್ತಿದ್ದರು. ಭಾಷಣದ ಮೂಲಕ ಸಭಿಕರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದರು.

” ಏ ಕಾನ್ಷಿರಾಮ್.. ನೀನೊಬ್ಬ ಹುಚ್ಚ.. ರಾಜಕಾರಣದಲ್ಲಿ ನೀನಿನ್ನೂ ಬಚ್ಛಾ.. ನಿನಗೆ ರಾಜಕಾರಣದ ಮರ್ಮ ತಿಳಿದಿಲ್ಲ. ಬದುಕಿರುವಾಗಲೇ ಅಂಬೇಡ್ಕರ್ ಗೆದ್ದಿಲ್ಲ… ಇನ್ನೂ ಅಂಬೇಡ್ಕರ್ ಹೆಸರೇಳಿಕೊಂಡು, ಈ ಗುಲಾಮರನ್ನು ಕಟ್ಟಿಕೊಂಡು ನೀನು ಏನನ್ನು ಸಾಧಿಸಲು ಸಾಧ್ಯವಿಲ್ಲ.. ಹೋಗಿ ಏನಾದರೂ ಬೇರೆ ಕೆಲಸ ನೋಡಿಕೋ..” ಎನ್ನುವ ಅವಕಾಶವಾದಿ ಅಂಬೇಡ್ಕರ್ ವಾದಿಗಳ ಟೀಕೆ-ಮೂದಲಿಕೆಗಳನ್ನು  ಕ್ರೀಡಾಸ್ಫೂರ್ತಿಯಿಂದ ಸವಾಲಾಗಿ ಸ್ವೀಕರಿಸಿ, ಬಾಡಿಗೆ ಸೈಕಲ್ ಗಳಲ್ಲಿ ದಿನವಿಡೀ ಸುತ್ತಾಡುತ್ತಾ, ದ್ವಿತೀಯ ದರ್ಜೆಯ ರೈಲು ಭೋಗಿಗಳಲ್ಲಿ ಗಂಟೆಗಟ್ಟಲೆ ನಿಂತು ಪ್ರಯಾಣ ಮಾಡುತ್ತಾ, ಹಸಿವು, ನಿದ್ರೆ, ನೀರಾಡಿಕೆಗಳನ್ನು ಲೆಕ್ಕಿಸದೆ, ಭಾರತದ ಮೂಲೆ-ಮೂಲೆಗಳಿಗೆ ಸಂಚರಿಸಿ, ಶೋಷಿತ ಸಮುದಾಯಗಳನ್ನು ರಾಜಕೀಯವಾಗಿ ಸಂಘಟಿಸಿ, ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಅತ್ಯಂತ ಸಮರ್ಥವಾಗಿ ಅಧಿಕಾರ ಚಲಾಯಿಸಬಲ್ಲ ಎಂಬ ಸತ್ಯವನ್ನು ಮಾನವ ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮಾನ್ಯಾವಾರ್ ಕಾನ್ಷಿರಾಮ್ ಆಧುನಿಕ ಭಾರತ ಕಂಡ ಪ್ರಜಾಪ್ರಭುತ್ವದ ಪವಾಡ ಪುರುಷ!

“ಭಾರತದಲ್ಲಿ ಒಂದು ಗ್ರಾಮಪಂಚಾಯ್ತಿಯನ್ನೂ ಗೆಲ್ಲದಷ್ಟು ಅಲ್ಪಮತವುಳ್ಳವರಾಗಿರುವ ಬ್ರಾಹ್ಮಣರು, ತಮ್ಮ ಪರಂಪರಾನುಗತ ಹಿತಾಸಕ್ತಿಗಳನ್ನೂ ಕಾಯ್ದುಕೊಳ್ಳುವ ಸಲುವಾಗಿ ನೂರಾರು ತಂತ್ರ-ಕುತಂತ್ರಗಳ ಮೂಲಕ ತಮ್ಮ ರಾಜಕೀಯ ನಡಿಗೆಗಳನ್ನು ಸರಾಗಗೊಳಿಸಿಕೊಂಡಿದ್ದಾರೆ. ಬ್ರಾಹ್ಮನೇತರರಲ್ಲಿ ಸ್ವತಂತ್ರ ರಾಜಕೀಯ ಚಿಂತನೆಗಳು ಮೊಳಕೆಯೊಡೆಯದಂತೆ ಅವರಿಗೆ ಹಣ-ಅಧಿಕಾರದ ಆಮಿಷ ತೋರಿಸಿ ತಮ್ಮ ನಾಯಕತ್ವದ ರಾಜಕೀಯ ಪಕ್ಷಗಳಲ್ಲೇ ಕಾಲಾಳುಗಳಾಗಿಸಿಕೊಂಡಿದ್ದಾರೆ.  ದೇಶದ ಜನಸಂಖ್ಯೆಯಲ್ಲಿ ಶೇ.15 ಭಾಗವಿರುವ ಬ್ರಾಹ್ಮಣ, ಬನಿಯಾಗಳು ಶೇ. 85 ರಷ್ಟು ದೇಶದ ಆಸ್ತಿ, ಸಂಪತ್ತು ಮತ್ತು ಅಧಿಕಾರವನ್ನು ಹಿಡಿದುಕೊಂಡಿದ್ದಾರೆ. ಬ್ರಾಹ್ಮಣ, ಬನಿಯಾಗಳ ಹಿತಾಸಕ್ತಿಗೆ ಬಲಿಯಾಗಿ ಆರು ಸಾವಿರಕ್ಕಿಂತಲೂ ಅಧಿಕ ಜಾತಿ-ಉಪಜಾತಿಗಳಲ್ಲಿ ಹರಿದು ಹಂಚಿ ಹೋಗಿರುವ ಶೇ. 85 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬಹುಜನರು ಕೇವಲ ಶೇ.15 ರಷ್ಟು ಆಸ್ತಿ, ಸಂಪತ್ತು, ಅಧಿಕಾರವನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಅವರು ಬಡವರಾಗಿ, ಕಡುಬಡವರಾಗಿ ಬಾಳಿ ಬದುಕುತ್ತಿದ್ದಾರೆ. ಬಹುಜನ ಸಮಾಜವನ್ನು ಒಡೆಯುವ ಮೂಲಕ ಬ್ರಾಹ್ಮಣ, ಬನಿಯಾಗಳು ಭಾರತದಲ್ಲಿ ಆಳುವ ಜನರಾಗಿದ್ದಾರೆ. ಒಡೆಯುವುದು ಅವರ ಕೆಲಸ.. ಕೂಡಿಸುವುದು ನನ್ನ ಕೆಲಸ. ಒಡೆದು-ಹಂಚಿ ಹೋಗಿರುವ ಬಹುಜನ ಸಮಾಜವನ್ನು ಕೂಡಿಸಿ, ಪ್ರೀತಿ, ವಿಶ್ವಾಸ ನಂಬಿಕೆಗಳಲ್ಲಿ ಬಂಧಿಸಿ ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿ ಮಾಡುತ್ತೇನೆ”! ಎಂದು ಪ್ರತಿಜ್ಞೆಗೈದ ದಾದಾಸಾಹೇಬ್ ಕಾನ್ಷಿರಾಮ್ ರವರು ಉತ್ತರಪ್ರದೇಶವನ್ನು ತಮ್ಮ ರಾಜಕೀಯ ಪ್ರಯೋಗ ಭೂಮಿಯನ್ನಾಗಿ ಆರಿಸಿಕೊಂಡರು.

ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಅನುಕೂಲಕರ ವಾತಾವರಣವೇನೂ ಇರಲಿಲ್ಲ. ಯಾಕೆಂದರೆ ಉತ್ತರಪ್ರದೇಶಕ್ಕೆ ಬಹುಜನ ಸಮಾಜ ಪಕ್ಪ ಕಾಲಿರಿಸಿದಾಗ ಕಾಂಗ್ರೆಸ್ ಪಕ್ಷ ದೈತ್ಯಾಕಾರವಾಗಿ ಬೆಳೆದು ನಿಂತಿತ್ತು. ಶೇ.24 ರಷ್ಟು ಪರಿಶಿಷ್ಟ ಮತಗಳಿಂದ, ಶೇ. 15 ರಷ್ಟು ಮುಸ್ಲಿಮರ ಮತಗಳಿಂದ ಹಾಗೂ ಶೇ.10 ರಷ್ಟು ಒಬಿಸಿ ಮತಗಳಿಂದ ಕಾಂಗ್ರೆಸ್ ಉಕ್ಕಿನ ಕೋಟೆಯನ್ನು ಕಟ್ಟಿಕೊಂಡಿತ್ತು. ಇದು ಒಂದು ಕಡೆಗಾದರೆ, ಇನ್ನೊಂದು  ಕಡೆಗೆ “ರಾಷ್ಟ್ರೀಯ ಸ್ವಯಂ ಸೇವಕ ಸಂಘ” (RSS) ತನ್ನ ರಾಜಕೀಯ ಕದಂಬ ಬಾಹುವನ್ನು ಅದಾಗಲೇ ವಿಸ್ತರಿಸುತ್ತಿತ್ತು. ಇಂತಹ ಅನಾನುಕೂಲಕರ ಕ್ಲಿಷ್ಟ ರಾಜಕೀಯ ಪರಿಸ್ಥಿತಿಗಳನ್ನು ತಮ್ಮ ಅಸಾಧಾರಣ ಪ್ರತಿಭೆ ಮತ್ತು ಅಪಾರ ಪರಿಶ್ರಮದ ಮೂಲಕ ಜನಾಂದೋಲನ ರೂಪಿಸಿ ಅನುಕೂಲಕರ ವಾತಾವರಣನ್ನಾಗಿಸಿಕೊಂಡು ಉತ್ತರಪ್ರದೇಶದಂತಹ ಬ್ರಾಹ್ಮಣರ ರಾಮಭೂಮಿಯಲ್ಲಿ ಭೀಮರಾಜ್ಯವನ್ನು ಸ್ಥಾಪಿಸಿದ ಹೆಗ್ಗಳಿಕೆ ಯುಗಪುರುಷ ದಾದಾಸಾಹೇಬ್ ಕಾನ್ಷಿರಾಮ್ ರವರಿಗೆ ಸಲ್ಲುತ್ತದೆ.

ಬಹುಜನ ಸಮಾಜ ಪಕ್ಷದ ತೀವ್ರಗತಿಯ ಬೆಳವಣಿಗೆಯಿಂದ 1985 ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಾಗ ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಕಾನ್ಷಿರಾಮ್ ರನ್ನು ಹುಡುಕಿಕೊಂಡು ಬಂದು “ನೀವು ಬಿಎಸ್ಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿ.. ನಾವು ನಿಮ್ಮನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡುತ್ತೇವೆ” ಎಂದು ಹೇಳಿದಾಗ “ನನ್ನ ಗುರು ಬಾಬಾಸಾಹೇಬರಿಗೆ ಮೋಸ ಮಾಡಿದ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ನಾಶ ಮಾಡುವುದೇ ನನ್ನ ಗುರಿ” ಎಂದು ದಿಟ್ಟತನದಿಂದ ಹೇಳಿದರು.

“ಬಿಎಸ್ಪಿ ಎಂದೂ ಗೆಲ್ಲುವ ಪಕ್ಷವಾಗುವುದಿಲ್ಲ. ಮತ ವಿಭಜನೆ ಮಾಡಿ ಕೋಮುವಾದಿಗಳಿಗೆ ಸಹಕರಿಸುತ್ತದೆ. ಬಿಎಸ್ಪಿಯಿಂದ ಯಾವ ಕಾಲಕ್ಕೂ ಎಂ.ಎಲ್.ಎ ಗಳಾಗಲೀ, ಎಂ.ಪಿ. ಗಳಾಗಲೀ ಆರಿಸಿ ಬರುವುದಿಲ್ಲ. ಬರೀ ಸೋಲಿಸುವುದಷ್ಟೇ ಅದರ ಪಾತ್ರ” ಎಂದು ಕಂಡ-ಕಂಡಲ್ಲಿ ಅಪಪ್ರಚಾರ ಮಾಡಿಕೊಂಡು ತಿರುಗುತ್ತಿದ್ದ ಕಾಂಗ್ರೆಸ್ ನಾಯಕರೇ ತಲೆ ತಿರುಗಿ ಬೀಳುವಂತೆ ಪಕ್ಷವನ್ನು ಬೆಳೆಸಿ ತೋರಿಸಿದ ಕಾನ್ಷಿರಾಮ್ ರವರು ತಮ್ಮ ಬದುಕಿನವಧಿಯಲ್ಲಿ ಮೂರು ಬಾರಿ ಬಿಎಸ್ಪಿಯನ್ನು ಅಧಿಕಾರಕ್ಕೆ ತಂದರು. ಯಾವ ಕಾಂಗ್ರೆಸ್ಸಿಗರು ತಮ್ಮ ಕುತಂತ್ರಗಳ ಮೂಲಕ ಅಂಬೇಡ್ಕರರನ್ನು ರಾಜಕೀಯವಾಗಿ ಸೋಲಿಸಿ ಮೋಸದ ನಗೆ ಬೀರಿದ್ದರೋ ಅದೇ ಕಾಂಗ್ರೆಸ್ಸನ್ನು ಉತ್ತರ ಪ್ರದೇಶದಲ್ಲಿ ಹೇಳ-ಹೆಸರಿಲ್ಲದೆ ಅಳಿಸಿಹಾಕಿ ಸ್ವಾಭಿಮಾನದ ಮುಗುಳ್ನಗೆ ನಕ್ಕಿದರು.

ಇಂತಹ ಅಸಾಧಾರಣ ಕಾರ್ಯಗಳ ಮೂಲಕ ಕಾನ್ಷಿರಾಮ್  ರವರು ಬಿಎಸ್ಪಿಯನ್ನು ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿಸಿದರು. ತಮಗೆ ಒಲಿದುಬಂದ ರಾಷ್ಟ್ರಪತಿ ಹುದ್ದೆಯನ್ನು, ಉಪಪ್ರಧಾನಿ ಹುದ್ದೆಯನ್ನು ಮತ್ತು ತಾವೇ ಮುಖ್ಯಮಂತ್ರಿಯಾಗಬಹುದಾದ ಸಾವಕಾಶವನ್ನು ತಳ್ಳಿಹಾಕಿ, ಮಾಯಾವತಿಯಂತಹ ಮಹಾನ್ ನಾಯಕಿಯನ್ನು ಸೃಷ್ಟಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೊಟ್ಟ ಮೊದಲ ವ್ಯಕ್ತಿಯನ್ನಾಗಿಸಿದರು. ಕೋಟ್ಯಂತರ ಮಾರಾಟವಾಗದ ಮತದಾರರನ್ನು ಸೃಷ್ಟಿಸಿದರು. ಲಕ್ಷಾಂತರ ಸ್ವಾಭಿಮಾನಿ ಅಂಬೇಡ್ಕರ್ ವಾದಿಗಳನ್ನು ಹುಟ್ಟು ಹಾಕಿದರು. ಇದು ನಾಯಕನೊಬ್ಬನ ನಿಜವಾದ ಲಕ್ಷಣ. ಮಾರ್ಗದಾತನೊಬ್ಬನ ಗುಣ ಲಕ್ಷಣ. ಇಂದು ಈ ಮಹಾನಾಯಕನ ಅಗಲಿಕೆಯ ದಿನ. ಈ ಅದ್ಬುತ ವಿಮೋಚಕನ ಬದುಕು-ಬರಹ ಮತ್ತು ಹೋರಾಟದ ಹೆಜ್ಜೆ ಗುರುತುಗಳು ದೇಶವಾಳಲು ಸನ್ನದ್ದವಾಗುತ್ತಿರುವ ಬಹುಜನ ಸಮಾಜಕ್ಕೆ ದಾರಿ ದೀಪವಾಗಲಿ. ಇದುವೇ ನಾವು ಆ ಮಹಾಚೇತನಕ್ಕೆ ಸಲ್ಲಿಸಬೇಕಾದ ನಿಜವಾದ ಗೌರವ.

ಇತ್ತೀಚಿನ ಸುದ್ದಿ