ಪೋಷಕರೇ ಎಚ್ಚರ! | ಬೈಕ್ ಚಲಾಯಿಸಿ ಪ್ರಾಣ ಕಳೆದುಕೊಂಡ 15 ವರ್ಷದ ಬಾಲಕ - Mahanayaka
2:31 AM Thursday 14 - November 2024

ಪೋಷಕರೇ ಎಚ್ಚರ! | ಬೈಕ್ ಚಲಾಯಿಸಿ ಪ್ರಾಣ ಕಳೆದುಕೊಂಡ 15 ವರ್ಷದ ಬಾಲಕ

11/02/2021

ಬೈಂದೂರು: ಅಪ್ರಾಪ್ತ ವಯಸ್ಕರನ್ನು ವಾಹನ ಚಲಾಯಿಸಲು ಬಿಡಬೇಡಿ ಎಂದು ಟ್ರಾಫಿಕ್ ಪೋಲಿಸರು ಎಷ್ಟು ಹೇಳಿದರೂ ಪೋಷಕರು ಹೇಳುವುದಿಲ್ಲ, ಏನೂ ಆಗುವುದಿಲ್ಲ ಎಂದು ಹೇಳಿ ಪೋಷಕರು ನಿರ್ಲಕ್ಷ್ಯವಹಿಸುತ್ತಾರೆ.  ಆದರೆ ಇದರಿಂದಾಗಿ ಮುಂದೆ ಅನಾಹುತಗಳಾದಾಗ ಪಶ್ಚಾತಾಪ ಪಟ್ಟು ಪ್ರಯೋಜನ ಏನು? ಇಂತಹದ್ದೊಂದು ಘಟನೆ ಬೈಂದೂರಿನ ಶಿರೂರು ಎಂಬಲ್ಲಿ ನಡೆದಿದೆ.

15 ವರ್ಷದ ಬಾಲಕನೋರ್ವ ಅತಿ ವೇಗ ಹಾಗೂ ನಿರ್ಲಕ್ಷ್ಯವಾಗಿ ಬೈಕ್ ಚಲಾಯಿಸಿದ್ದು, ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇಲ್ಲಿನ ಹಡವಿನಕೋಣೆ ನಿವಾಸಿ ಆರಾನ್ ಮೃತ ಬಾಲಕನಾಗಿದ್ದಾನೆ. ಕಳೆದ ವಾರ ಬೈಂದೂರಿನಲ್ಲಿ ಪರವಾನಗಿ ಇಲ್ಲದೆಯೇ ಬೈಕ್‌ ಚಲಾಯಿಸುತ್ತಿದ್ದ ಈತನಿಗೆ ಪೊಲೀಸರು ದಂಡ ವಿಧಿಸಿದ್ದರಲ್ಲದೇ ಬೈಕ್ ನ್ನು ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಕಾಲ ವಶದಲ್ಲಿಟ್ಟಿದ್ದರು.  ಆ ಬಳಿಕ ಬಾಲಕನ ತಾಯಿಯನ್ನು ಠಾಣೆಗೆ ಕರೆದು ಕಾನೂನು ಪಾಲಿಸುವಂತೆ ಸಲಹೆ ನೀಡಿ ಕಳುಹಿಸಿದ್ದರು.

ಇಷ್ಟರಲ್ಲೇ ಇದು ಮುಗಿದಿದ್ದರೆ, ಉತ್ತಮವಾಗಿರುತ್ತಿತ್ತು. ಆದರೆ ಬಾಲಕ ಮತ್ತೆ ಗುರುವಾರ ಬೈಕ್ ಸವಾರಿ ಮಾಡಿದ್ದು, ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.




ಘಟನೆ ಸಂಬಂಧ ಬೈಂದೂರು ಠಾಣಾಧಿಕಾರಿ ಸಂಗೀತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ