ಬಲಿ, ಬಲಿಯಾದ ಮೋಸದ ಕಥೆ:  ದೀಪಾವಳಿ ಹಬ್ಬದ ವಿಶೇಷ ಸಂಚಿಕೆ | ಸತೀಶ್ ಕಕ್ಕೆಪದವು - Mahanayaka
4:02 AM Saturday 2 - December 2023

ಬಲಿ, ಬಲಿಯಾದ ಮೋಸದ ಕಥೆ:  ದೀಪಾವಳಿ ಹಬ್ಬದ ವಿಶೇಷ ಸಂಚಿಕೆ | ಸತೀಶ್ ಕಕ್ಕೆಪದವು

bali chakrawarthy
12/11/2023

ಸಾಮ್ರಾಟ ಅಶೋಕರ ಕಾಲದ ಸುವರ್ಣ ಯುಗ ಹೇಗಿತ್ತೆಂಬುದನ್ನು ಒಮ್ಮೆ ನೆನಪಿಕೊಳ್ಳಿ…. ಆ ದಿನಗಳನ್ನು ಮರು ಸೃಷ್ಟಿಸುವುದೇ ನಮ್ಮ ಕನಸು ! ಈ ಮಾತನ್ನು ಆಗಾಗ ಉಚ್ಚರಿಸುತ್ತೇವೆ. ಅದೇ ರೀತಿ ಮಹಾಬಲಿಯು ಮೋಸಕ್ಕೆ ಬಲಿಯಾದ ದಿನವನ್ನೂ ವಿಮರ್ಶಿಸಬೇಕಾಗಿದೆ. ಬಲಿಯ ಆದರ್ಶಗಳು ಸಹ ಮೂಲನಿವಾಸಿ ಬಹುಜನರಿಗೆ ದಾರಿದೀಪಗಳಾಗ ಬೇಕಾಗಿದೆ. ಈ ದೃಷ್ಟಿಯಲ್ಲಿ ಇತಿಹಾಸಕಾರರಾದ ಪೇರೂರು ಜಾರು ರವರು ಬರೆದ “ಮಣ್ಣಿನ ಮಗ ಮಹಾಬಲಿ” ಕೃತಿಯನ್ನು ಓದುತ್ತ ಒಂದಿಷ್ಟು ಬರೆಯಬೇಕು ಅನಿಸಿತು, ಬರೆದೆ…….

ಸಾಮ್ರಾಟ ಅಶೋಕನ ಯೌವನದ ಅವಧಿಯಲ್ಲಿ ತೆಂಕಣದಲ್ಲಿ ಬಲಿ ಚಕ್ರವರ್ತಿಯು ಜೀವನದ ಸಂಜೆಯಲ್ಲಿದ್ದನು. ಮೂಲತಃ ಜೈನ ವಂಶಜನಾದ ಈತನು ನಂತರದ ಬೌದ್ದನಾದುದನ್ನು ಕಾಣಬಹುದು. ಪಂಚ ಶೀಲವೇ ರಾಷ್ಟ್ರೀಯತೆಯಾಗಿ ರಾರಾಜಿಸುತ್ತಿತ್ತು. “ಸತ್ಯರಾಜ್ಯ” ಸಾಮ್ರಾಜ್ಯದಲ್ಲಿ ದಾನ ಧರ್ಮಗಳೇ ಊರುಗೋಲು ಆಗಿತ್ತು. ಇದು ಇಂದಿನ ಮಧ್ಯಪ್ರದೇಶದಲ್ಲಿದೆ. ಅದೇ ವೇಳೆ ಆರ್ಯರು ಆರ್ಯ ವೃತ್ತ ಕಟ್ಟಿಕೊಂಡರು. ಪಂಚ ಶೀಲದ ವಿರೋಧಿ ಚಟುವಟಿಕೆಗಳು ಆರ್ಯರಿಂದ ಚುರುಕುಗೊಂಡಿತ್ತು. ಆರ್ಯರ ನಾಯಕ “ಇಂದ್ರ” ಪುರದ ಅಂದರ ಮಾಡಿ ಬಲಿ ರಾಜ್ಯವನ್ನು ಕಬಲಿಸುವ ಚಿಂತನೆ ನಡೆಸಿದನು. ಮದಿರೆ ಮಾನಿನಿಯರನ್ನು ಒಳಗೊಂಡ ಕಲಿಕೂಟದ ಪಡೆಗಳನ್ನು ಸಜ್ಜುಗೊಳಿಸಿ ಪಾಲನೆ ಮಾಡಲಾಗಿತ್ತು. ಇಂದ್ರನ ಕುಠಿಲತೆಗಳು ಫಲಿಸದಿದ್ದ ಹೊತ್ತಿನಲ್ಲಿ ನಾರಯಣ ಮೊರೆ ಹೋದರು. ನಾರಾಯಣನು ಬಹಳಷ್ಟು ಯೋಚಿಸಿ, ದಾನ ಎಂಬುದು ಜೈನ ಹಾಗು ಬುದ್ಧ ಧರ್ಮದ ಗುಣ ಧರ್ಮ. ಸಾಯುವ ಮುನ್ನ ಏನೇ ಸಂಪಾದಿಸಿದ್ದರೂ ದಾನ ಮಾಡಿಬಿಡಬೇಕೆಂಬುದು ಜೈನ ನಿಯಮ. ಇದುವೇ ನಾರಯಣನ ಬಂಡವಾಳವಾಯಿತು.

ಬಲಿ ಬೆರ್ಮಕುಲದವನು, ಆದ್ದರಿಂದಲೇ ನಾರಾಯಣನು ಬ್ರಾಹ್ಮಣ ವಟು ವಾಮನನ ವೇಷದಲ್ಲಿ ಬಲಿ ಚಕ್ರವರ್ತಿಯತ್ತ ಆಗಮಿಸುತ್ತಾನೆ. ಇಲ್ಲೊಂದು ಸತ್ಯಾಂಶವನ್ನು ಗಮನಿಸಲೇ ಬೇಕು. ಮೂರು ಮುಟ್ಟು ಜಾಗ ಕೇಳಿರುವುದು. ಮುಂದಿನ ದಿನಗಳಲ್ಲಿ ಮುಟ್ಟು ( ಸ್ಪರ್ಶ ) ಮೊಟ್ಟು ( ಹೆಜ್ಜೆ ) ಗಳಾಗಿ ಪರಿವರ್ತಿಸಿ ಸ್ವರೂಪವನ್ನೆ ಬದಲಾಯಿಸಲಾಗಿದೆ.

ಮೊದಲಾಗಿ ಭೂಮಿಯನ್ನು, ಎರಡನೆಯದಾಗಿ ಆಕಾಶ ವನ್ನು, ಮೂರನೆಯದಾಗಿ ಬಲಿಯ ತಲೆಯನ್ನು ಮೆಟ್ಟಿದ ಕಪೋಲ ಕಲ್ಪಿತ ಕಥೆಗಳು ರೂಢಿಯಲ್ಲಿದೆ.

ಮನು ಇಡ್ಯ ಎಂಬ ತುಳು ನಾಟಕಕಾರರು ಈ ಮುಟ್ಟು ಬಳಸಿ ವಾಮನ ಮುಟ್ಟುವ ತಂತ್ರ ಮಾಡಿ ಬಲಿಯ ರಾಜ್ಯವನ್ನು ಮುಟ್ಟುಗೋಲು ಹಾಕಿಕೊಂಡ ಎಂಬ ಹೊಸ ತಂತ್ರವನ್ನು ತನ್ನ “ಬಲಿ” ನಾಟಕದಲ್ಲಿ ಬಳಸಿದ್ದರು. ಇದನ್ನೆ ಇತಿಹಾಸಕಾರರಾದ ಪೇರೂರು ಜಾರು ರವರು

“ನೆಲದ ಮಗ ಬಲಿಯೇಂದ್ರ” ಯಕ್ಷಗಾನದಲ್ಲೂ ಬಳಸಿಕೊಂಡಿರುವುದನ್ನು ಕಾಣಬಹುದು.

ಬಲಿಯು ಕೊಟ್ಟ ಮಾತಿಗೆ ಬೆಲೆ ಕೊಡುವವನು, ಕಾಪಾಡಿಕೊಂಡು ಬರುವವನು. ವಾಮನನಿಗೆ ಬಲಿಯು ದಾನದ ವಾಗ್ದಾನ ನೀಡಿ ಬಲಿಯಾದನು ಎಂದರೆ ತಪ್ಪಾಗಲಾರದು.

ಒಂದನೆಯ ಮುಟ್ಟು/ TOUCH ನೆಲವನ್ನು, ಅಂದರೆ ಇಡೀ ಭೂಮಂಡಲದ ಕಲ್ಪನೆ ತಪ್ಪು, ಬದಲಾಗಿ ಬಲಿಯ ಅಧೀನದಲ್ಲಿದ್ದ ಸಾಮ್ರಾಜ್ಯ ಮಾತ್ರವಾಗಿದೆ. ಎರಡನೆಯ ಮುಟ್ಟು/TOUCH ರಾಜ ದಂಡವನ್ನು, ಇಲ್ಲಿಯೂ ಬಲಿ ಚಕ್ರವರ್ತಿಗಿದ್ದ ಅಧಿಕಾರವನ್ನು ಕಸಿದು ಕೊಳ್ಳಲಾಯಿತು. ಭೂಮಿ ಇಲ್ಲದ, ಅಧಿಕಾರ ಇಲ್ಲದ ಬಲೀಂದ್ರನಿಗೆ ಮೂರನೆಯ ಮುಟ್ಟು/TOUCH ಬದುಕಿನ ದಿಕ್ಕನ್ನೇ ಬದಲಾಯಿಸಿತು. ಬಾಲಕ ವಾಮನ ಬಲಿಯ ತಲೆಯನ್ನು ಮುಟ್ಟಿದ. ಇದರ ಒಳಾರ್ಥ ತಲೆಕೊಡು ಅಥವಾ ತಲೆ ಮರೆಸು ಎಂಬುದಾಗಿತ್ತು. ಸೂಕ್ಷ್ಮತೆಯನ್ನು ಅರಿತ ಬಲಿಯು ಊರು ಬಿಡಲು ನಿರ್ಧರಿಸಿದಾಗ ಅಡ್ಡ ಗಂಧದ ಬದಲಿಗೆ ಉದ್ದ ನಾಮ ಹಾಕಿದ ವಾಮನನು ಪಾತಾಳಕ್ಕೆ ಹೋಗಲು ಸೂಚಿಸುವನು.

ತೆಂಕಣ ರಾಜ್ಯದ ಕರಾವಳಿಯ ತಗ್ಗಿನ ತಳ ನಾಡುಗಳೇ ಪಾತಾಳಗಳು. ಅಂತಹ ಏಳು ಪಾತಾಳಗಳಲ್ಲಿ ಕರ್ನಾಟಕದ ಕರಾವಳಿ ತುಳುನಾಡು ಸಹ ಒಂದಾಗಿದೆ. ಏಳರಲ್ಲಿ ಮತ್ತೊಂದು ಪೊತ್ತಲ. ಈ ಪ್ರದೇಶವು ಇಂದಿನ ತಿರುಪತಿ ಬದಿಯ ಆಂದ್ರ ಕರಾವಳಿ. ಭಾರತಕ್ಕೆ ಬಂದ ಚೀನೀ ಪ್ರವಾಸಿ ಹುಯೆನ್ ತ್ಸಾಂಗ್ ಪಾತಾಳ- ಪೊತ್ತಲ-ಪೋತಲ್ಕಕ್ಕೂ ಬಂದಿರುವ ದಾಖಲೆ ಇತಿಹಾಸ ಪುಟಗಳಲ್ಲಿವೆ. ಪೊತ್ತಲದ ಇಂದಿನ ತಿರುಪತಿಯ ಬುದ್ದಾಲಯವು ವೈಷ್ಣವಾಲಯವಾಗಿ ಬದಲಾಗಿರುವುದು ಇತಿಹಾಸದಲ್ಲಿ ಕಾಣಬಹುದು. ಸತ್ಯ ರಾಜ್ಯದಲ್ಲಿ ಬಲಿಯು ದಾನ ಕೊಡುವಾಗ ತನ್ನಲ್ಲಿ ಹೇಳಿಲ್ಲ, ಕೇಳಿಲ್ಲ ಎಂಬ ಕಾರಣಕ್ಕಾಗಿ ರಾಣಿ ಸಿರಿದೇವಿ ಕೋಪಿಸಿಕೊಂಡು “ಇನ್ನೊಂದು ರಾಜ್ಯ ಕಟ್ಟುವವರೆಗೆ ಬರಲಾರೆ” ಎಂಬ ಮುನಿಸು ಮಾತಿನೊಂದಿಗೆ ತವರು ಮನೆಗೆ ಹೋಗುತ್ತಾಳೆ. ಈ ಸನ್ನಿವೇಶದ ಹಿಂದೆ ಗಂಡನ ಸ್ವಾಭಿಮಾನವನ್ನು ಕೆದಕಿದ ಮಾತು ಆಗಿರುವುದರಿಂದ ಮುಂದಕ್ಕೆ ಹೊಸ ರಾಜ್ಯ ಕಟ್ಟಲು ಪ್ರೇರಣೆಯಾಗುತ್ತದೆ.

ಬಲಿಯು  “ಮಹಾನದಿ” ಯಲ್ಲಿ ದೋಣಿಯೇರಿ ತನ್ನನ್ನು ಅನುಸರಿಸಿದ ಹಿಂಬಾಲಕರೊಡನೆ ಕಳಿಂಗ ಅಂದರೆ ಇಂದಿನ ಒರಿಸ್ಸ ರಾಜ್ಯವನ್ನು ಬಂದು ಸೇರುತ್ತಾನೆ. ಅನಂತರ, ಬಲಿ ತನ್ನ ಪರಿವಾರದೊಡನೆ ತೆಂಕಣದ ಕಾಳಹಸ್ತಿ ಪ್ರದೇಶಕ್ಕೆ ಬರುತ್ತಾನೆ. ಮುಂದಕ್ಕೆ ಬಲಿಯು ಪೊತ್ತಲದಿಂದ ಉತ್ತರ ಕರ್ನಾಟಕ, ಮದರಾಸು, ಇಂದಿನ ತುಳುನಾಡು, ಕೇರಳ ಕರಾವಳಿಯ ವರೆಗೂ ಹೊಸ ರಾಜ್ಯವನ್ನು ಸ್ಥಾಪಿಸುಲ್ಲಿ ಯಶಸ್ವಿಯಾದನು. ಇದೇ ಸತ್ಯ ಪುತ್ರ ರಾಜ್ಯದ ಉಲ್ಲೇಖ ಸಾಮ್ರಾಟ ಅಶೋಕನ ಶಾಸನಗಳಲ್ಲೂ ದೊರೆಯುತ್ತದೆ. ಸತ್ಯ ಪುತ್ರ ರಾಜ್ಯ ಸ್ಥಾಪಿಸಿದಾಗ ಬಿಲ್ಲ ಕಿರುದೊರೆಯ ಮಗಳು ‘ಪದ್ಮಾವತಿ’ಯನ್ನೂ ಮದುವೆಯಾದನು. ಆ ಹೊತ್ತಿಗೆ ಸಿರಿದೇವಿಯೂ ಹಿಂತಿರುಗಿದ್ದಳು.

ಬಲಿ,ವಾಮನರ ದಾನ ಮತ್ತು ಬಲಿದಾನದಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಒಂದನೆಯ ವಿಚಾರ ದಾನವ; ಎರಡನೆಯ ವಿಚಾರ ದೇವರು. ದಾನವ ಎಂದರೆ ದಾನ ಕೊಟ್ಟವ ಬಲಿಯಾದರೆ, ಬೇಡಿದವ ವಾಮನ ದೇವರು ಎಂಬುದಾಗಿ ಕರೆಯಲ್ಪಡುವುದು. ನೀಡಿದವ ದಾನವ ಕ್ರೂರಿ, ಬೇಡಿದವ ದೇವರು ಸಾಧು ಎಂಬುದನ್ನು ಸೂಚಿಸುತ್ತದೆ.

ತಿರುಪತಿಯ ಸುತ್ತ ಸತ್ಯ ಪುತ್ರ ರಾಜ್ಯವನ್ನು ಆಳಿದ ಬಲಿ ಮಹಾರಾಜ ಮರಣ ಹೊಂದಿದ ನಂತರ ಅವರ ನೆನಪಿಗಾಗಿ ಗುಡಿ/ಸ್ಮಾರಕ ಕಟ್ಟಲಾಯಿತು. ಬಲಿಯ ಜೀವಂತ ಕಾಲದಲ್ಲಿ ಆತನಿಂದ ದಾನ ಪಡೆಯದವರೇ ಇರಲಿಲ್ಲ !

ಆ ದಾನದ ನೆನಪಿಗಾಗಿ ಮರುಪಾವತಿ ಮಾಡುವ ಭಾವನಾತ್ಮಕ ಸಂಬಂಧವನ್ನು ಜನರು ರೂಢಿಗೆ ತಂದರು. ಇದನ್ನು ಹುಂಡಿ ರೂಪದಲ್ಲಿ ಸಮರ್ಪಿಸುತ್ತಿದ್ದರು. ಇದುವೇ ತಿರುಪತಿಯ ಹುಂಡಿಯೆಂದು ಖ್ಯಾತಿಯಾಗಿದೆ.

ಹೀಗೆ, ಬಲಿಯು ಬಲೀಜಿಯಾಗಿ, ಬಾಲಾಜಿ ಹೆಸರು ಪಡೆದಿರುವುದನ್ನು ಕಾಣಬಹುದು. ತಿಮ್ಮಪ್ಪ ಎಂಬ ಹೆಸರು ತಿರು+ಮಲೆಯ+ ಅಪ್ಪ ಎಂಬುದರಿಂದ ಬಂದಿದೆ. ತಿರುಮಲಪ್ಪ+ತಿರುಮಪ್ಪ+ ತಿಮ್ಮಪ್ಪ ಎಂದಾಗಿದೆ. ತಿರು ಎಂದರೆ ಶ್ರೀ , ಮಲೆ ಎಂದರೆ ಬೆಟ್ಟ, ಅಪ್ಪ ಎಂದರೆ ಹಿರಿಯ, ಮೂಲಜ ಎಂದು ಅರ್ಥ. ತಿರುಪತಿಯ ಮೇಲೆ ತಮಿಳು ಅರಸರ ಪ್ರಭಾವ ತುಂಬಾ ಹೆಚ್ಚು. ಅಲ್ಲಿ ದೊರೆತ ಶಾಸನಗಳಲ್ಲಿ ಐದನೆ ನಾಲ್ಕು ಪಾಲು ಶಾಸನಗಳು ತಮಿಳಿನವು. ಆದ್ದರಿಂದ ಅದು ತಿರು+ಪತಿ. ತಿರು, ಸಿರಿ ಇತ್ಯಾದಿ ಬಡಗಣ ಭಾಷೆಯಲ್ಲಿ ಶ್ರೀ ಆಗುತ್ತದೆ. ಸಿರಿನಿವಾಸ,ಶ್ರೀನಿವಾಸ ಹೆಸರು ಹುಟ್ಟಿದ್ದು ಹೀಗೆಯೆ. ತಿರುಪತಿಯಲ್ಲಿ ತಲೆ ಬೋಳಿಸುವುದು ಬುದ್ದ ಸಂಪ್ರದಾಯದ ಸಂಕೇತವಾಗಿದೆ. ವೈಷ್ಣವ ಸಂಪ್ರದಾಯದ ಪ್ರಕಾರ ಪೂರ್ತಿ ತಲೆ ಬೋಳಿಸುಂತಿಲ್ಲ.

ಬಲಿಯನ್ನು ದೇಶದಾದ್ಯಂತ ನಾನ ದಿನಗಳಲ್ಲಿ ನೆನೆಯುತ್ತಾರೆ. ತುಳುವರು ದೀಪಾವಳಿಯಂದು ಬಲಿಯನ್ನು ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಸತ್ತವರನ್ನು ಹೂತು ಇಲ್ಲವೆ ಸುಟ್ಟು ಮೇಲಿನ ಮಣ್ಣನ್ನು ತುಳಸಿಕಟ್ಟೆಯಂತೆಯೆ ಒಪ್ಪಮಾಡಿ, ಅದರ ಮೇಲೆ ತುಳಸಿ ಗಿಡವನ್ನು ನೆಡುತ್ತಿದ್ದರು. ಮೂಲನಿವಾಸಿಗಳು ಸತ್ತ ಹಿರಿಯರನ್ನು ನೆನೆಯುವ, ಗೌರವಿಸುವ ಆಚರಿಸುವುದು ಇಂದಿಗೂ ಇದೆ.  ಹಾಗಾಗಿ ಆಗಾಗ ಆ ಸಮಾಧಿಯನ್ನು ತುಳಸಿ ಕಟ್ಟೆಯಲ್ಲಿ ಕಲ್ಪಿಸಿಕೊಂಡು ನೀರು ಸುರಿದು ಸುತ್ತು ಬರುತ್ತಿದ್ದರು, ಪ್ರಸ್ತುತವೂ ಕಾಣಬಹುದು. ಮುಂದೆ ಇದು ನಿತ್ಯ ಕರ್ಮಕ್ಕೆ ಕಷ್ಟ ಸಾಧ್ಯ ಆಗಿರುವುದರಿಂದ ಮನೆಯ ಅಂಗಳದ ಮೂಲೆಯಲ್ಲಿ ನೆಟ್ಟು ನೀರು ಹಾಕಿ ಸುತ್ತು ಬರುತ್ತಿದ್ದರು. ತದನಂತರ ನೀತಿನಿಯಮಗಳನ್ನು ರೂಪಿಸಿ ಇಲ್ಲೆ ನೆಡಬೇಕು, ಅಲ್ಲೇ ನೆಡಬೇಕು , ನೀರು ಹೀಗೆಯೇ ಸುರಿಯಬೇಕು, ಹೀಗೆಯೇ ಸುತ್ತು ಬರಬೇಕು ಕಲ್ಪನೆಗಳನ್ನು ತುಂಬಿ ತುಳಸಿ ಕಟ್ಟೆಯ ಮೂಲ ಉದ್ದೇಶ, ಮೂಲ ಅರ್ಥವೇ ಮರೆಯಾಗಿದೆ.

ದೀಪಾವಳಿಯ ದಿನ ತುಳುವರು ಬಲಿಯನ್ನು ಕೂ…ಹಾಕಿ ಬರಮಾಡಿಕೊಳ್ಳುವುದು ತುಳಸಿ ಕಟ್ಟೆಯಲ್ಲೇ. ತುಳುವರು ತುಳಸಿ ಕಟ್ಟೆಯ ಬಳಿ , ಬಲಿಯನ್ನು ಕೂಗಿ ಕರೆಯುವಲ್ಲೂ ಮೋಸ ನಡೆದಿರುವುದನ್ನು ಗಮನಿಸಲೇ ಬೇಕಾಗಿದೆ.

ನೆಕ್ಕಿ ಎಂಬ ಮಾರುದ್ದ ಗಿಡದಡಿಯಲ್ಲಿ ಆಟವಾಡುವಾಗ, ತುಂಬೆ ಎಂಬ ಗೇಣುದ್ದ ಗಿಡದಡಿ ಕೂಟವಾಗುವಾಗ, ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗುವಾಗ, ಗದ್ದೆ ಬದುವಿಗೆ ಸೇತುವೆ ಹಾಕುವಾಗ, ಬೆಕ್ಕಿಗೆ ಕೋಡು ಬರುವಾಗ, ಬಂಜೆ ಎಮ್ಮೆ ಕರು ಹಾಕುವಾಗ, ಬೆಂದ ಭತ್ತ ಮೊಳಕೆ ಬರುವಾಗ, ಉಪ್ಪು ಕರ್ಪೂರ ಆಗುವಾಗ,  ಬಿಳಿ ಕಲ್ಲು ಹೂವಾಗುವಾಗ,  ಕರಿ ಕಲ್ಲು ಕಾಯಿ ಆಗುವಾಗ, ಅಂಗಳ ಹಾಸು ಪಾದೆ (ಕಲ್ಲು) ಆಗುವಾಗ, ಊರುಗೋಳಿನ ಅಜ್ಜಿ ಮದು ಮಗಳಾಗುವಾಗ ಇತ್ಯಾದಿ ಸಂದರ್ಭಗಳಲ್ಲಿ ಬಾ ಬಲೀಂದ್ರ ಹೇಳಿ, ಅವಾಸ್ತವ ನುಡಿಗಳ ಮೂಲಕ ಬರಲೇ ಬೇಡ ಎಂಬುದನ್ನು ಸೂಚಿಸುತ್ತದೆ. ಇದು ಅಪ್ಪಟ ಮೋಸ !  ಕರೆಯುವಲ್ಲೂ ಮೋಸವೆಂದರೆ ಈ ನಾಡಿನ ಬೌದ್ಧಿಕ ದಿವಾಳಿತನವೇ ಸರಿ.

ತುಳುವರು ಮಾತ್ರ ದೀಪಾವಳಿ ಹಬ್ಬವನ್ನು ಅರ್ಥವತ್ತಾಗಿ ಆಚರಿಸುತ್ತಾರೆ. ಮೊದಲನೆಯ ದಿನ ಸತ್ತವರ ಹಬ್ಬ, ಸತ್ತ ಹಿರಿಯರು ಹಾಗು ಬಲಿಗೆ ಎಡೆಯಿಡುವ, ಪರಾಂಪರೆಯನ್ನು ಗೌರವವಿಸುವ ದಿನ, ಕ್ಷಣ. ಮೌನ ಆಚರಣೆಯ ದಿನ.

ಎರಡನೆಯ ದಿನ ಇದ್ದವರ ದಿನ,  ಸಾವು ಯಾರನ್ನೂ ಬಿಟ್ಟಿಲ್ಲ, ಬಿಡಲ್ಲ ! ಭೂಮಿ, ಮನೆ, ತುಳಸಿ ಕಟ್ಟೆ, ಫಸಲು ಎಲ್ಲದಕ್ಕೂ ದೀಪ ಇಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾದುದು ಬಲಿಯನ್ನು ನೆನೆಯುತ್ತ ತಿರುಪತಿಯ ತಿಮ್ಮಪ್ಪನಿಗೆ ಮುಡಿಪು ಇಡುವುದು. ಇದು ಅತಿ ಮುಖ್ಯವಾದ ಅಂಶ. ಮೂಲತಃ ಬಲಿಯೇ ಬಾಲಾಜಿಯಾದ. ಆರ್ಯರ ಕರಗಳಿಗೆ ಮೂರ್ತಿಯಾದ ಬಳಿಕವೂ ಸಿಕ್ಕಿಬಿದ್ದ ಎನ್ನುವುದಕ್ಕೆ ಇದು ಅತಿ ಮುಖ್ಯವಾದ ಉದಾಹರಣೆಯಾಗಿದೆ.

ಮೂರನೆಯ ದಿನ, ಇಂದಿನ ಮಕ್ಕಳು ಮರಿಗಳು ಬಲಿತು ಬಾಳಬೇಕು ಎನ್ನುವುದೇ ಈ ಹಬ್ಬದ ಮುಖ್ಯ ಉದ್ದೇಶ. ಆ ಕಾರಣಕ್ಕಾಗಿಯೇ ಬದುಕಿಗೆ ಅವಶ್ಯಕವಾಗಿರುವ ಎಮ್ಮೆ, ಕೋಣ, ಜಾನುವಾರು, ಉಳುಮೆಗೆ ಬೇಕಾಗುವ ಸಲಕರಣೆಗಳು, ಇಲ್ಲವೆ ಆತನ ದುಡಿಮೆಗೆ ಬೇಕಾದ, ಸಂಪಾದನೆಗೆ ಪೂರಕವಾಗುವ ಸಲಕರಣೆಗಳನ್ನು ಶುಚಿಗೊಳಿಸಿ ಗೌರವ ಸಲ್ಲಿಸಬೇಕಾಗಿದೆ,  ಈ ಕಾರಣದಿಂದಲೇ ನವರಾತ್ರಿಯ ಆಯುಧ ಪೂಜೆಯು (VEPENS  WARSHIP) ಅಂದಿಗೇ ಸರಿ. ವಾಹನಗಳು ಆಯುಧಗಳಲ್ಲ, ಅದರ ಹಿಂದೆ ಮಾರಕ ಅಸ್ತ್ರದ ಕಲ್ಪನೆಯು ಖಂಡಿತವಾಗಿಯೂ ಬರಲಾರದು. ಬದಲಾಗಿ ಬದುಕಿನ ಭಾಗಗಳಾಗಿ, ಸಲಕರಣೆಗಳಾಗಿ ಗೌರವಿಸಬೇಕಾಗಿದೆ. ದೀಪಾವಳಿಯ ದಿನಗಳಲ್ಲಿ ವಾಹನಗಳನ್ನು ಶುಚಿಗೊಳಿಸಿ  ಬದುಕಿನ ದುಡಿಮೆಗೆ, ಸಂಪಾದನೆಗೆ  ಬಳಕೆಯಾಗುವ ಸಲಕರಣೆಗಳು ಎನ್ನುವ ಪರಿಕಲ್ಪನೆಯು ಬರಬೇಕಾದುದು ಬಹಳಷ್ಟು ಮುಖ್ಯವಾಗಿದೆ. ಆದುದರಿಂದ ಪ್ರಜ್ಞಾಪೂರ್ವಕವಾಗಿ ಅವರರವರ ಮನೆಗಳಲ್ಲಿ ಮೂಲನಿವಾಸಿಗಳೇ ಗೌರವಿಸಬೇಕಾಗಿದೆ. ಕಲಬುರ್ಗಿಯ ಸನ್ನತಿ, ಆಂದ್ರದ ನಾಗಾರ್ಜುನಕೊಂಡ , ಕಾಳಹಸ್ತಿ, ತಿರುಪತಿಗಳಲ್ಲಿ ಕ್ರಮಬದ್ಧವಾಗಿ ಉತ್ಖನನ ನಡೆಯಬೇಕಾಗಿದೆ.

ಒಟ್ಟಿನಲ್ಲಿ ದೀಪಾವಳಿ ಹಬ್ಬವು ಅರ್ಥವತ್ತಾಗಿ ಆಚರಿಸಬೇಕಾಗಿದೆ. ಶೋಕದ ಹಬ್ಬ ಪಟಾಕಿ ಸಿಡಿಸುವ ಸಂಭ್ರಮದ ಹಬ್ಬವಾಗಿದೆ. ಬಲಿ ಮಹಾರಾಜನ ಬಗೆಗೆ ಇನ್ನಷ್ಟು ಅಧ್ಯಯನ ನಡೆಸಬೇಕಾಗಿದೆ. ಬಲಿಯು ಹುಟ್ಟಿದ ನಾಡು ಪಂಚಶೀಲದ  ಬೀಡು ಮರು ನಿರ್ಮಾನ ಆಗಬೇಕಾಗಿದೆ. ಇತಿಹಾಸಗಾರರಾದ ಪೇರೂರು ಜಾರು ರವರ ಇತಿಹಾಸ ಪ್ರಜ್ಞೆಗೆ ಶರಣು ಹೇಳಲೇ ಬೇಕಾಗಿದೆ. ದೀಪದಿಂದ ದೀಪವ ಹಚ್ಚ ಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು……….!!!

ಇತ್ತೀಚಿನ ಸುದ್ದಿ