ನಿಮ್ಮ ಸಮಸ್ಯೆಗಳಿಗೆ ಜ್ಯೋತಿಷಿ, ಧಾರ್ಮಿಕ ಪಂಡಿತರು ಪರಿಹಾರ ನೀಡಬಲ್ಲರೇ? - Mahanayaka

ನಿಮ್ಮ ಸಮಸ್ಯೆಗಳಿಗೆ ಜ್ಯೋತಿಷಿ, ಧಾರ್ಮಿಕ ಪಂಡಿತರು ಪರಿಹಾರ ನೀಡಬಲ್ಲರೇ?

04/11/2023

ಸಾಂದರ್ಭಿಕ ಚಿತ್ರ

ಜನರು ಮೌಢ್ಯತೆಯಿಂದ ಹೊರ ಬರಬೇಕು ಅಂತ ಸಾಕಷ್ಟು ಸಂಘಟನೆಗಳು, ಎನ್ ಜಿಒಗಳು, ವ್ಯಕ್ತಿಗಳು, ಸರ್ಕಾರ, ಸಂಸ್ಥೆಗಳು ಪ್ರಯತ್ನಿಸುತ್ತಿರುತ್ತವೆ. ಆದ್ರೆ… ಮೊಬೈಲ್ ಯುಗ, ಡಿಜಿಟಲ್ ಯುಗ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ನಾವುಗಳು ಎಷ್ಟೊಂದು ಮೌಢ್ಯದ ದಾಸರಾಗಿದ್ದೇವೆ ಅನ್ನೋದನ್ನ ಒಂದು ಬಾರಿ ತಿರುಗಿ ನೋಡಿದರೆ, ನಿಜಕ್ಕೂ ನಾಚಿಕೆ ಅನ್ನಿಸಬಹುದೇನೋ…

ಜೀವನ ಎಂದ ಮೇಲೆ ನೂರಾರು ಸಮಸ್ಯೆಗಳು ಇದ್ದದ್ದೆ. ಆದ್ರೆ, ಕೆಲವರು ತಮಗೆ ಯಾವುದೋ ದುಷ್ಟ ಶಕ್ತಿಗಳಿಂದಾಗಿ ಕಷ್ಟಗಳು ಬರುತ್ತಿವೆ ಅಂತ ಮಾನಸಿಕವಾಗಿ ನೊಂದುಕೊಳ್ಳುತ್ತಿರುತ್ತಾರೆ. ನಮ್ಮ ಸುತ್ತಮುತ್ತಲಿನವರು ಕೂಡ ಹಾಗೆನೆ…, ನಮ್ಮ ಕಷ್ಟಗಳನ್ನು ಅವರ ಬಳಿಯಲ್ಲಿ ಹೇಳಿಕೊಂಡರೆ ಸಾಕು, ಆಗಲೇ ಒಂದು ಬಿಟ್ಟಿ ಸಲಹೆ ಕೊಡ್ತಾರೆ… ಆ ಕ್ಷೇತ್ರಕ್ಕೆ ಒಮ್ಮೆ ಹೋಗಿ ಪೂಜೆ ಮಾಡು, ಆ ಪೂಜೆ ಮಾಡಿಸು, ಇಂತಹ ದೇವರಿಗೆ ಇಂತಹದ್ದನ್ನು ಕೊಡು ಹೀಗೆ… ಕೆಲವೊಂದು ಬಾರಿ ಅಚಾನಕಾಗಿ ನಮ್ಮ ಸಮಸ್ಯೆಗಳು ಸಹಜವಾಗಿ ಸರಿಯಾದರೂ, ಇಂತಹ ಕ್ಷೇತ್ರಕ್ಕೆ ಹೋಗಿದ್ದರಿಂದ ನಮ್ಮ ಸಮಸ್ಯೆ ಪರಿಹಾರವಾಗೋಯ್ತು ಅಂತ ಅವರು ಭಾವಿಸಿ ಬಿಡ್ತಾರೆ. ನಂತರ ತಮ್ಮ ಬಳಿಗೆ ಯಾರಾದ್ರೂ ಸಮಸ್ಯೆ ಹೇಳಿಕೊಂಡು ಬಂದ್ರೆ,  ನಾನು ಇಂತ ಕ್ಷೇತ್ರಕ್ಕೆ ಹೋದ ನಂತರ ನನ್ನ ಸಮಸ್ಯೆ ಪರಿಹಾರವಾಯ್ತು ಅಂತ, ಬಿಟ್ಟಿ ಸಲಹೆ ಕೊಡ್ತಾರೆ.

ಜೀವನದಲ್ಲಿ ಆಕಸ್ಮಿಕ ಅನ್ನೋದು ಎಲ್ಲರಿಗೂ ಬರುತ್ತದೆ. ಆದ್ರೆ ಅದಕ್ಕೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಒಬ್ಬರು ಯಾವುದೋ ಧಾರ್ಮಿಕ ಮುಖಂಡರು ಬಿದ್ದು ಏಟು ಮಾಡಿಕೊಂಡರೆ, ಅವರು ತಕ್ಷಣವೇ ಆಸ್ಪತ್ರೆಗೆ ಹೋಗಿ ತಮ್ಮ ಗಾಯಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅದೇ ಒಬ್ಬ ಮುಗ್ಧ ವ್ಯಕ್ತಿ ಬಿದ್ದು ಏಟು ಮಾಡಿಕೊಂಡರೆ, ಇದು ಯಾವುದೋ ಕರ್ಮದ ಫಲವಾಗಿ ನನಗೆ ಸಿಕ್ಕ ಶಿಕ್ಷೆ ಎಂದು ಭಾವಿಸುತ್ತಾ ಕೊರಗುತ್ತಾನೆ. ಮಾತ್ರವಲ್ಲ ಹೊರಗಿನ ಜನರು ಕೂಡ ಹಾಗೆ, ಅವನ ಕರ್ಮ, ಅವನಿಗೆ ಸಿಕ್ಕಿದೆ ಅಂತಾರೆ. ಮಾಡಿದ ಪಾಪ ಎಲ್ಲಿ ಹೋಗುತ್ತೆ? ಅಂತ ಪ್ರಶ್ನೆ ಮಾಡಿ ಆತನನ್ನು ಮತ್ತಷ್ಟು ಕುಗ್ಗಿಸುತ್ತಾರೆ.

ಒಬ್ಬ ಧಾರ್ಮಿಕ ಪಂಡಿತನೋ, ಜ್ಯೋತಿಷಿಗೋ ಆಸ್ತಿಗೆ ಸಂಬಂಧಿತ ವಿವಾದಗಳು ಸೃಷ್ಟಿಯಾದ್ರೆ, ಆತ ನೇರವಾಗಿ ವಕೀಲರನ್ನು ಭೇಟಿಯಾಗಿ ಕಾನೂನು ಸಲಹೆಗಳನ್ನು ಪಡೆದುಕೊಳ್ಳುತ್ತಾನೆ. ಕಾನೂನಿನ ಪ್ರಕಾರ ತಾನು ಹೇಗೆ, ತನ್ನ ಆಸ್ತಿಯನ್ನ ಕಾಪಾಡಿಕೊಳ್ಳಬಹುದು ಎಂದು ಚಿಂತಿಸುತ್ತಾನೆ. ಕೋರ್ಟ್ ಗೆ ಕೇಸ್ ಹಾಕಿ ತನ್ನ ಕೇಸ್ ಗೆದ್ದು, ಆಸ್ತಿ ಉಳಿಸಿಕೊಳ್ಳುತ್ತಾರೆ. ಆದ್ರೆ ಒಬ್ಬ ಬಡವ ತನ್ನ ಆಸ್ತಿಗೆ ಸಂಬಂಧಿತ ವಿವಾದಗಳಿಗೆ ಧಾರ್ಮಿಕ ಪಂಡಿತರ ಬಳಿಯೋ, ಜ್ಯೋತಿಷಿಯ ಬಳಿಯೋ ಪರಿಹಾರ ಸಿಗುತ್ತದೆ ಎಂದು ನಂಬುತ್ತಾನೆ ಮತ್ತು ತನ್ನ ಕೈಯಲ್ಲಿರುವ ಹಣವನ್ನು ಜ್ಯೋತಿಷಿಗೆ ಸುರಿದು ಕೊನೆಗೆ ಹಣ, ಆಸ್ತಿ, ನೆಮ್ಮದಿಯನ್ನೂ ಕಳೆದುಕೊಂಡು ತನ್ನ ಕರ್ಮದ ಫಲವಾಗಿ ನನ್ನ ಆಸ್ತಿ ಕೈ ಬಿಟ್ಟು ಹೋಯ್ತು ಅಂತ ಕೊರಗುತ್ತಾನೆ.

ಜಗತ್ತಿನಲ್ಲಿ ಪ್ರತಿಯೊಬ್ಬರು ಕೂಡ ಒಬ್ಬಂಟಿಗಳು, ಬುದ್ಧರು ಹೇಳಿದಂತೆ “ನಿನಗೆ ನೀನೇ ಬೆಳಕು”  ಅಂದ್ರೆ, ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಯಾರಿಂದಲೂ ನಿಮ್ಮ ಪಾಪವನ್ನು ತೊಳೆಯಲು ಸಾಧ್ಯವಿಲ್ಲ. ಮನುಷ್ಯರಾಗಿ ಹುಟ್ಟಿದವರು ಮನುಷ್ಯರೇ ಹೊರತು, ಅವರಲ್ಲಿ ಯಾವುದೇ ಅತಿಮಾನುಷ ಶಕ್ತಿಗಳಿರುವುದಿಲ್ಲ. ಯಾವುದೋ ವ್ಯಕ್ತಿ ತಾನು ಅತಿಮಾನುಷ ಶಕ್ತಿಯನ್ನು ಹೊಂದಿದ್ದೇನೆ ಎಂದು ಹೇಳಿಕೊಂಡರೆ ಮತ್ತು ಆ ರೀತಿ ವರ್ತಿಸಿದರೆ, ಅದು ಒಂದು ಮನೋ ಕಾಯಿಲೆ ಎಂದು ಮನೋ ವೈದ್ಯರು ಹೇಳುತ್ತಾರೆ. ಹೀಗಾಗಿ ಜನರು ಚಿಂತನೆಗಳನ್ನು ಮಾಡಬೇಕಿದೆ.

ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಿ:

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಸಮಸ್ಯೆಗಳು ಇದ್ದೇ ಇರುತ್ತವೆ. ನಾವು ತೊಡಗಿಸಿಕೊಂಡ ಉದ್ಯಮ, ಕೆಲಸ ನಷ್ಟದಲ್ಲಿ ಹೋಗುತ್ತಿದೆ ಎಂದಾದರೆ, ಅದಕ್ಕೆ ಯಾವುದೋ ಕ್ಷೇತ್ರದಲ್ಲಿ ಪೂಜೆ ಮಾಡುವುದು ಪರಿಹಾರವಲ್ಲ, ನೀವು ನಿಮ್ಮ ಕೆಲಸದಲ್ಲಿ ಎಲ್ಲಿ ತಪ್ಪು ಮಾಡಿದ್ದೀರಿ ಎನ್ನುವುದನ್ನು ಹುಡುಕಾಡಿ, ನಿಮ್ಮ ವ್ಯಾಪಾರ ಕ್ಷೇತ್ರದಲ್ಲಿ ಅನುಭವ ಹೊಂದಿರುವವರ ಬಳಿ ಮಾತನಾಡಿ ಪರಿಹಾರ ಏನು ಅಂತ ಚಿಂತಿಸಿ, ವ್ಯಾಪಾರದ ಗಂಧ ಗಾಳಿಯೂ ತಿಳಿಯದ ಒಬ್ಬ ಜ್ಯೋತಿಷಿ ನಿಮಗೇನು ಪರಿಹಾರ ಕೊಡಲು ಸಾಧ್ಯ? ಜ್ಯೋತಿಷಿಗಳು, ಮಂತ್ರವಾದಿಗಳು ತಮ್ಮ ಆರ್ಥಿಕ ಲಾಭಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ, ನಿಮಗೆ ಅವರಿಂದ ಲಾಭ ಇಲ್ಲ, ನಿಮ್ಮಿಂದ ಅವರಿಗೆ ಲಾಭವಿದೆ. ಎಲ್ಲಾದರೂ ಒಬ್ಬ ಜ್ಯೋತಿಷಿಯೋ, ಮಂತ್ರವಾದಿಯೋ ಉಚಿತವಾಗಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತೇನೆ, ನನಗೆ ಒಂದೇ ಒಂದು ರೂಪಾಯಿ ಕೊಡಬೇಡಿ ಅಂತ ಬೋರ್ಡ್ ಹಾಕಿಕೊಂಡಿರುವುದನ್ನು ನೀವು ನೋಡಿದ್ದೀರೇ? ಚಿಂತನೆಯ ಮಾರ್ಗ ನಿಮ್ಮದಾಗಿರಲಿ… ಎನ್ನುವುದೇ ಈ ಲೇಖನದ ಆಶಯ.

ಇತ್ತೀಚಿನ ಸುದ್ದಿ