ಜಾತಿ ಇಲ್ಲದ ಜ್ಯೋತಿಯ ಬೆಳಕಲ್ಲಿ ಕಾಣುತ್ತಿರುವುದೇನು? - Mahanayaka

ಜಾತಿ ಇಲ್ಲದ ಜ್ಯೋತಿಯ ಬೆಳಕಲ್ಲಿ ಕಾಣುತ್ತಿರುವುದೇನು?

cast
08/09/2023

  • ಉದಂತ ಶಿವಕುಮಾರ್

ಇವತ್ತು ಕೇರಿಗಳಲ್ಲಿ ರಸ್ತೆಗಳು ಕಾಂಕ್ರಿಟ್ ಗಳನ್ನು ಕಂಡಿವೆ. ಆಶ್ರಯ ಯೋಜನೆಯಿಂದ ಗುಡಿಸಿಲುಗಳು ಮನೆಗಳಾಗಿ ಪರಿವರ್ತನೆಗೊಂಡಿವೆ, ಮನೆಗಳಲ್ಲಿ ಟಿವಿ ಕೇಬಲ್ ಗಳ ಸಂಪರ್ಕವಿದೆ, ಗ್ಯಾಸ್ ಗಳು ಬಂದು ಕುಂತಿವೆ, ಕುಕ್ಕರ್ ಶಿಳ್ಳೆ ಹಾಕುತ್ತವೆ, ಎಲ್ಲ ಮನೆಗಳಲ್ಲಿ ಟಾಯ್ಲೆಟ್ ಗಳ ಸಂಪರ್ಕ ಬಂದಿದೆ, ಬೀದಿ ದೀಪಗಳು, ದೇವಸ್ಥಾನಗಳು, ವಾಚನಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ತಂತ್ರಜ್ಞಾನ, ಸಂಪರ್ಕ ಸಾಧನೆಗಳು, ಉದ್ಯೋಗಾವಕಾಶಗಳು, ಕಾನೂನುಗಳು ಇವು ಗಳೆಲ್ಲವೂ ಬಂದಿವೆ, ಬರುತ್ತಿವೆ. ಇವುಗಳ ಅನುಕೂಲ ಪಡೆದವರಿದ್ದಾರೆ. ಪಡೆಯುತಲೂ ಇದ್ದಾರೆ.


Provided by

ಆದರೆ ಇವುಗಳ ಆಚೆಗೆ ಮರ್ಯಾದ ಹತ್ಯೆಗಳು, ಅತ್ಯಾಚಾರಗಳು, ಮೇಲು-ಕೀಳುಗಳೆಂಬ ಬೇಧಗಳು, ಅಸ್ಪೃಶ್ಯತೆಯ ತಾರತಮ್ಯ, ಕಟ್ಟುಪಾಡುಗಳು, ಸಮಾಜದೊಳಗಿನ ಅಸಮಾನತೆಗಳಿಗೆ ಸಾಂಸ್ಕೃತಿಕ ಚಿಕಿತ್ಸೆ, ಸಾಮಾಜಿಕ ಚಿಕಿತ್ಸೆ, ಆರ್ಥಿಕ ಚಿಕಿತ್ಸೆಗಳನ್ನು ನೀಡಬೇಕಾದದ್ದು ಮುಖ್ಯವಾಗಿದೆ. ಆದರೆ ಈಗ ಉಳಿದಿರುವುದು ಒಂದೇ, ಅದು ಸಮಾನತೆಯ ಕನಸನ್ನ ಬಿತ್ತಬೇಕಾಗಿದೆ. ಜೊತೆಗೆ ಬಡವ ಬಲ್ಲಿದರ ನಡುವಿನ ಅಂತರ ಕಮ್ಮಿ ಆಗಬೇಕಾಗಿದೆ. ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ, ಸ್ವಾವಲಂಬನೆ ಎಂಬ ಹುದುಗಿ ಹೋಗಿರುವ ಹಳೆ ಮಾತುಗಳನ್ನು ಮತ್ತೆ ಮತ್ತೆ ನಾವು ಹೇಳಬೇಕಾಗಿದೆ.

ಮಕ್ಕಳ ಶಿಕ್ಷಣದಲ್ಲಿ ಭಿನ್ನ ಭೇದ ತೊಡೆದು, ಸಮಾನ ಶಿಕ್ಷಣ ಪದ್ಧತಿಯ ಮೂಲಕ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪಠ್ಯ ರಚಿಸಿ ನಾಳಿನ ಭಾರತ ಕಟ್ಟಬೇಕಾಗಿದೆ. ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುವ ಹೆಣ್ಣು ಮಕ್ಕಳಿಗೆ ಬೆಂಬಲವನ್ನು ನೀಡುವ ವ್ಯವಸ್ಥೆಗಳು ಅಲ್ಲಲ್ಲಿ ರೂಪುಗೊಂಡಿದ್ದರೂ, ಅವು ಸಫಲವಾಗುವುದಕ್ಕಿಂತ ಹೆಚ್ಚಾಗಿ ವಿಫಲವಾಗಿವೆ ಎಂದು ಹೇಳಬಹುದು. ಸಾಮಾಜಿಕ ಅಧಿಕಾರ ಮತ್ತು ಜಾತಿಯ ಯಜಮಾನಿಕೆಯಿಂದ ದುರ್ಬಲವಾಗಿರುವ ಉದಾರಣೆಗಳೇ ಹೆಚ್ಚು. ಬಡವರ, ನಿರ್ಗತಿಕರ ಮತ್ತು ದಲಿತರ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ದಬ್ಬಾಳಿಕೆಗಳಿಗೆ ಯಾವ ರೀತಿಯ ನ್ಯಾಯ ದೊರಕಿದೆ ಎಂದು ಪ್ರಶ್ನೆ ಮಾಡುವವರೇ ಹೆಚ್ಚಾಗಿರುವುದನ್ನು ನಾವು ಕಾಣಬಹುದು.


Provided by

ಎಲ್ಲ ರಾಜಕೀಯ ಪಕ್ಷಗಳು ಜಾತಿ ಪ್ರಶ್ನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾದದ್ದು. ಕೆಲವು ಸಂತರುಗಳೇ ಜಾತಿ ರಾಜಕಾರಣದ ದಾಳಗಳಾಗಿರುವ ಈ ಸಂದರ್ಭವನ್ನು ರಾಜಕೀಯ ಚಿಂತಕರು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲವಾದರೆ ಕೋಮುವಾದಿಗಳು ಮತ್ತೆ ಅಧಿಕಾರ ಹಿಡಿಯಲು ಮುಂದುವರಿಯಲು ಜಾತ್ಯಾತೀತರೇ ಕಾರಣರಾಗುತ್ತಾರೆ. ಇದು ಇವತ್ತಿನ ಸತ್ಯವಾಗಿದೆ.

ಮೇಲ್ವರ್ಗದವರ ಅಟ್ಟಹಾಸವನ್ನು ಈಗಿರುವ ಅಧಿನಿಯಮದ ಯಾವ ಕಲಂಗಳು ಮಣಿಸಲಾರವು. ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ಸಂಭವಿಸಿದಾಗ ಪೊಲೀಸರು ಸಂಧಾನಕ್ಕೆ ನಿಲ್ಲುತ್ತಾರೆಯೇ ಹೊರತು ಆರೋಪಿಗಳನ್ನು ಬಂಧಿಸಲು ಮುಂದಾಗುವುದಿಲ್ಲ. ಇದನ್ನು ನಾವು ಅನೇಕ ಬಾರಿ ಓದಿದ್ದೇವೆ. ಮೇಲ್ಜಾತಿಯವರು ಮೇಲರಿಮೆಯಿಂದ ಶೋಷಿತ ಜಾತಿಯವರು ಕೀಳರಿಮೆಯಿಂದ ಬಿಡಿಸಿಕೊಳ್ಳದಿದ್ದರೆ ಸಮಾಜ ಗಬ್ಬೆದ್ದು ಹೋಗುತ್ತದೆ ಎಂದು ಲಂಕೇಶ ಹೇಳಿರುವ ಮಾತನ್ನು ಇಲ್ಲಿ ನೆನೆಯಬಹುದು. ನಗರದ ಹೋಟೆಲ್ ನಲ್ಲಿ ತಯಾರಿಸಿದ ಊಟವನ್ನು ಯಾರು ಮಾಡಿದರೆಂದು ನೋಡುವುದಿಲ್ಲ, ಟಾಕೀಸಿನ ಒಳಗೆ ಕುರ್ಚಿಯಲ್ಲಿ ಕುಳಿತುಕೊಂಡು ಸಿನಿಮಾ ನೋಡುವವನು ಪಕ್ಕದಲ್ಲಿರುವವನು ಯಾವ ಜಾತಿ ಎಂದು ನಾವು ಪರಿಗಣಿಸುವುದಿಲ್ಲ, ಹಣವನ್ನು ಕೈಯಲ್ಲಿ ಹಿಡಿದು ಕೊಡುವ ಸಂದರ್ಭದಲ್ಲಿ ಆ ವ್ಯಕ್ತಿಯ ಜಾತಿ ಕಾಣುವುದಿಲ್ಲ.

ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದ್ದರೂ ಕೂಡ ಇನ್ನು ಜಾತಿ ಭೇದದ ನಡುವೆ ಹೊಡೆದಾಡಿಕೊಂಡು ಬದುಕುವ, ಅಜ್ಞಾನದ ಒಳಗೆ ಏನಿದೆ ಎಂದು ಹುಡುಕಲು ಹೊರಟಾಗ ಗುಲಾಮ ಪದ್ಧತಿಯೇ ಎದ್ದು ಕಾಣುತ್ತದೆ. ದುಡಿಸಿಕೊಳ್ಳುವ ವರ್ಗ ಮತ್ತು ದುಡಿಯುವ ವರ್ಗ ಜೀವಂತವಾಗಿರಬೇಕೆಂಬುದೇ ಇದರ ಮರ್ಮ ಎಂಬುದನ್ನು ತಿಳಿಯಬೇಕಾಗುತ್ತದೆ. ಸಾಹಿತ್ಯದಲ್ಲಿ, ಜನಪದದಲ್ಲಿ, ಸಂಗೀತದಲ್ಲಿ, ಸಿನಿಮಾದಲ್ಲಿ, ಸಂತರು ವಚನಗಳಲ್ಲಿ, ದಾಸರ ಪದಗಳಲ್ಲಿ ಸಾಕಷ್ಟು ಬಗೆಯ ಸಮಾನತೆ ಸಾರುವ ವಿದ್ಯೆ ಕಲಿತಿದ್ದರೂ ಕೂಡ ಕೆಲವರು ಬದಲಾಗದೆ ಬದಲಿಗೆ ಭೇದವನ್ನೇ ಬಿತ್ತುವ ಕೆಲಸಕ್ಕೆ ಮುಂದಾಗುವುದನ್ನು ಕಂಡಾಗ ಅಲ್ಲಿ ಕುತಂತ್ರವೇ ಅಡಗಿದೆ ಎನಿಸಿಬಿಡುತ್ತದೆ.

ವಿದ್ಯೆ ಕಲಿತ ಅಧಿಕಾರಿಗಳೇ ಅಜ್ಞಾನಿಗಳ ಕೈ ಕೆಳಗಡೆ ಅಜ್ಞಾನದ ಕೆಲಸ ಮಾಡುವ ವಿಪರ್ಯಾಸದಲ್ಲಿ ಸಿಲುಕಿಕೊಂಡಾಗ ಏನೆಲ್ಲಾ ಅನಾಹುತಗಳು ನಡೆದು ಹೋಗುತ್ತವೆ ಎಂಬುದನ್ನು ಸಹ ನಾವೆಲ್ಲರೂ ಕಂಡಿದ್ದೇವೆ. ಎಲ್ಲಾ ಬದಲಾವಣೆಗಳು ಶಿಕ್ಷಣದಿಂದ ಆಗಬೇಕಾಗಿದೆ ಶಿಕ್ಷಣ ಕಲಿತವರು ಸಮಾಜ ಸುಧಾರಣೆ ಕೆಲಸಕ್ಕೆ ಮುಂದಾಗದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಇವತ್ತಿನ ವಿದ್ಯಾರ್ಥಿಗಳಿಗೆ ಸಮಾಜ ಹೇಗೆ ಬದಲಾಗಬೇಕು, ಸಮಾಜದೊಳಗಿರುವ ಕೆಡುಕುಗಳನ್ನು ಹೇಗೆ ನಾಶ ಮಾಡಬೇಕು, ಸಮಾಜದೊಳಗೆ ಮನುಷ್ಯ ಮನುಷ್ಯರ ನಡುವೆ ಸಹಕಾರ ಮತ್ತು ಸಮಾನತೆಯನ್ನು ಹೇಗೆ ಬಿತ್ತಬೇಕು, ಸಮಾಜದೊಳಗಿರುವ ಅನಿಷ್ಟ ಪಿಡುಗುಗಳನ್ನು ಹೇಗೆ ತೊಡೆದು ಹಾಕಬೇಕು ಎಂಬುದನ್ನು ಯುವ ಜನಾಂಗಕ್ಕೆ ವಿದ್ಯೆಯ ಜೊತೆಗೆ ವೈಚಾರಿಕ ಪ್ರಜ್ಞೆಯನ್ನು ಬಿತ್ತುವುದರ ಮೂಲಕ ಇವತ್ತಿನ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ ಕರ್ತವ್ಯಗಳನ್ನು ನಿಭಾಯಿಸಬೇಕಾಗಿದೆ.

ಇತ್ತೀಚಿನ ಸುದ್ದಿ